ಬಿಎಸ್ಪಿ-ಎಸ್ಪಿ ನಡುವೆ ಒಡಕು ಮೂಡಿಸುವ ಬಿಜೆಪಿ ತಂತ್ರ ಫಲಿಸದು : ಮಾಯಾವತಿ

Update: 2018-03-24 17:13 GMT

ಲಕ್ನೊ, ಮಾ.24: ಉತ್ತರಪ್ರದೇಶದಲ್ಲಿ ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳ ಮೈತ್ರಿಯಿಂದ ಬಿಜೆಪಿ ಮುಖಂಡರು ‘ನಿದ್ದೆ ಬಾರದ ರಾತ್ರಿ’ಗಳನ್ನು ಕಳೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮಧ್ಯೆ ಒಡಕು ಮೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ತಂತ್ರ ಫಲಿಸದು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಈ ಮೈತ್ರಿಯಿಂದ ಹತಾಶರಾಗಿದ್ದ ಬಿಜೆಪಿ ಮುಖಂಡರು ಬಿಎಸ್ಪಿ ಅಭ್ಯರ್ಥಿಯನ್ನು ಸೋಲಿಸಲು ಶತಪ್ರಯತ್ನ ನಡೆಸಿದ್ದಾರೆ. ಅಭ್ಯರ್ಥಿ ಸೋತರೆ ಮಾಯಾವತಿಗೆ ‘ತಲೆ ಬಿಸಿಯಾಗಿ’ ಅವರು ಮೈತ್ರಿಯಿಂದ ಹಿಂದೆ ಸರಿಯುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ ಹರಸಾಹಸಪಟ್ಟರೂ ಅವರ ತಂತ್ರ ಫಲಿಸದು ಎಂದು ಮಾಯಾವತಿ ಹೇಳಿದರು.

  ರಾಜ್ಯಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಅನಿಲ್ ಅಗರ್‌ವಾಲ್ ಬಿಸ್ಪಿಯ ಅಭ್ಯರ್ಥಿ ಭೀಮ್‌ರಾವ್ ಅಂಬೇಡ್ಕರ್‌ರನ್ನು ಸೋಲಿಸಿದ್ದು, ಮಾಯಾವತಿಗೆ ಭಾರೀ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡಿದ ಬಿಎಸ್ಪಿ ಶಾಸಕನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಎಂದಿನಂತೆಯೇ, ಪ್ರಧಾನಿ ಮೋದಿ ಹಾಗೂ ಸಿಎಂ ಆದಿತ್ಯನಾಥ್ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಶಾಸಕರಲ್ಲಿ ಭೀತಿ ಮತ್ತು ಆತಂಕ ಹುಟ್ಟಿಸುವ ಮೂಲಕ ಶ್ರೀಮಂತ ಉದ್ಯಮಿಯನ್ನು ಗೆಲ್ಲಿಸಿದ್ದಾರೆ. ತನಿಖಾ ಸಂಸ್ಥೆಗಳ ಭಯ ಹುಟ್ಟಿಸುವ ಮೂಲಕ ವಿಪಕ್ಷಗಳ ಹಲವು ಶಾಸಕರ ಮತವನ್ನು ಬಿಜೆಪಿ ಸೆಳೆದಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಆದರೆ ಇದನ್ನು ಬಿಜೆಪಿ ಮುಖಂಡ ಸಿದ್ದಾರ್ಥನಾಥ್ ಸಿಂಗ್ ನಿರಾಕರಿಸಿದ್ದಾರೆ. ಚುನಾವಣೆ ಪಾರದರ್ಶಕವಾಗಿ ನಡೆದಿದೆ. ‘ಬಬುವ- ಬುವ’ (ಎಸ್ಪಿ- ಬಿಎಸ್ಪಿ) ಮೈತ್ರಿಕೂಟ ಅವಕಾಶವಾದಿ ಎಂಬುದು ಎಲ್ಲರಿಗೂ ತಿಳಿದಿದೆ ಎಂದವರು ಹೇಳಿದ್ದಾರೆ.

ಮಾಯಾವತಿ ಹೇಳಿಕೆಯನ್ನು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಬೆಂಬಲಿಸಿದ್ದಾರೆ. ದಲಿತ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ನಡೆಸಿದ ಷಡ್ಯಂತ್ರದ ಬಳಿಕ ಎಸ್ಪಿ-ಬಿಎಸ್ಪಿ ಮೈತ್ರಿ ಇನ್ನಷ್ಟು ಗಾಢವಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ 9 ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಶಕ್ತವಾದರೆ, ಎಸ್ಪಿಯಿಂದ ಜಯಾ ಬಚ್ಚನ್ ಮಾತ್ರ ಗೆಲುವು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News