ಅಕ್ಟೋಬರ್‌ನಲ್ಲಿ ಚಂದ್ರಯಾನ- 2

Update: 2018-03-25 04:34 GMT

ಹೊಸದಿಲ್ಲಿ, ಮಾ. 25: ಏಪ್ರಿಲ್ 23ರಂದು ಚಾಲನೆ ನೀಡಲು ನಿರ್ಧರಿಸಿದ್ದ ಚಂದ್ರಯಾನ-2 ಮಿಷನ್ ಯೋಜನೆಯನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಲಾಗಿದೆ.

"ಇಸ್ರೋ ಮಾಜಿ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿಗಳು, ಐಐಟಿ ಅನುಭವಿಗಳು ಮಿಷನ್ ಸಿದ್ಧತೆಯನ್ನು ಶ್ಲಾಘಿಸಿದ್ದಾರೆ. ಆದಾಗ್ಯೂ, ಇಸ್ರೋ ಆರ್ಬಿಟರ್, ರೋವರ್ ಮತ್ತು ಲ್ಯಾಂಡರ್‌ನೊಂದಿಗೆ ಪ್ರಯೋಗ ಮಾಡಲು ಮುಂದಾಗಿದೆ. ಮಿಷನ್ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ, ತಜ್ಞರ ತಂಡ ಎಲ್ಲ ಪರೀಕ್ಷೆಗಳನ್ನು ನಡೆಸಿ, ಪರಿಪೂರ್ಣ ಎನಿಸುವವರೆಗೂ ಇದನ್ನು ಮುಂದೂಡಲು ಸೂಚಿಸಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.

ಚಂದ್ರಯಾನ-2 ಏಪ್ರಿಲ್ 23ಕ್ಕೆ ಆರಂಭವಾಗಬೇಕಿತ್ತು. ಆದರೆ ಈಗ ನಡೆಯುತ್ತಿರುವ ಯೋಜನೆಯ ಪರೀಕ್ಷೆಗಳು ಪೂರ್ಣಗೊಳ್ಳಲು ಇನ್ನೂ 20 ದಿನ ಬೇಕು. ಆದರೆ ಏಪ್ರಿಲ್ 23ರ ಗಡುವಿನಲ್ಲಿ ಇದನ್ನು ಪೂರೈಸಲಾಗದು, ಆದ್ದರಿಂದ ಮುಂದೂಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಯೋಜನೆ ಪರಿಪೂರ್ಣವಾಗುವ ದೃಷ್ಟಿಯಿಂದ ಇತರ ಉಪಗ್ರಹ ಉಡಾವಣೆಯಂತೆ ಒಂದು ಅಥವಾ ಎರಡು ದಿನ ಮುಂದೂಡಲು ಸಾಧ್ಯವಿಲ್ಲ. ಏಕೆಂದರೆ ಚಂದ್ರಯಾನಕ್ಕೆ ಸೂಕ್ತವಾದ ದಿನ ತಿಂಗಳಿಗೆ ಒಮ್ಮೆ ಮಾತ್ರ ಸಿಗುತ್ತದೆ. ಏಪ್ರಿಲ್ ಬಳಿಕ ಇಸ್ರೋ ಮೇ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಮಿಷನ್ ಆರಂಭಿಸಿದರೆ, ಸಂಪೂರ್ಣ ಚಂದ್ರದಿನ (14 ದಿನಗಳು) ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಲಾಗಿದೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News