ದಲಿತ, ಶೂದ್ರ, ಮಹಿಳೆಯರ ಸುರಕ್ಷತೆಗೆ ಬಿಜೆಪಿಯನ್ನು ಸೋಲಿಸೋಣ : ಪ್ರೊ.ಜಿ.ಕೆ.ಗೋವಿಂದರಾವ್

Update: 2018-03-25 12:10 GMT

ಬೆಂಗಳೂರು, ಮಾ.25: ದೇಶದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಎಲ್ಲ ಸಮುದಾಯದ ಮಹಿಳೆಯರ ಬದುಕು ಸುರಕ್ಷಿತವಾಗಿರಬೇಕಾದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೆಂದು ಹಿರಿಯ ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ಕರೆ ನೀಡಿದ್ದಾರೆ.

ರವಿವಾರ ವಿಶಾಖ ಎಜುಕೇಶನಲ್ ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ಸ್ನೇಹ ಬಳಗ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೀತಿಯ ಹೊನಲು ಲಕ್ಷ್ಮಿನಾರಾಯಣ ನಾಗವಾರ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮನುವಾದಿಗಳು ಸಾವಿರಾರು ವರ್ಷಗಳಿಂದಲೂ ದಲಿತ ಹಾಗೂ ಶೂದ್ರ ಸಮುದಾಯವನ್ನು ಪ್ರಾಣಿ ಪಕ್ಷಿಗಳಿಂಗಲೂ ಕೀಳಾಗಿ ಕಾಣುತ್ತಾ ಬಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೋಷಣೆಯ ಸ್ವರೂಪ ಬದಲಾಗಿಯೆ ಹೊರತು ಶೋಷಣೆ ನಿಂತಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿದ್ದರೂ ಕಾರ್ಯರೂಪಕ್ಕೆ ತರಬೇಕಾದ ಆಡಳಿತಾಧಿಕಾರಿಗಳು ಮನುವಾದಿಗಳಾಗಿದ್ದಾರೆ. ಹೀಗಾಗಿ ಈಗಲೂ ದಲಿತ ಸಮುದಾಯ ಹಲವು ರೀತಿಯ ಶೋಷಣೆ-ದಬ್ಬಾಳಿಕೆಗೆ ತುತ್ತಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾವಿರಾರು ವರ್ಷಗಳಿಂದ ದಲಿತ-ಶೂದ್ರರು ಈ ದೇಶವನ್ನು ಕಟ್ಟಿದ್ದಾರೆ. ಇಂದಿಗೂ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ, ದೇಶಕ್ಕೆ ಏನನ್ನು ಮಾಡದ ಮನುವಾದಿ ವರ್ಗ ಮಾತ್ರ ದಲಿತರ ಶ್ರಮದ ಪಾಲನ್ನು ಬಿಟ್ಟಿಯಾಗಿ ತಿನ್ನುತ್ತಾ, ಸಮಾಜದಲ್ಲಿ ಧ್ವೇಷವನ್ನು ಭಿತ್ತುವ ಕೆಲಸದಲ್ಲಿ ನಿರತವಾಗಿದೆ. ಇಂತಹ ಸಿದ್ಧಾಂತವನ್ನು ಹೊಂದಿರುವ ಬಿಜೆಪಿಗೆ ದೇಶವನ್ನು ಆಳುವ ಯಾವುದೆ ನೈತಿಕತೆಯಿಲ್ಲವೆಂದು ಅವರು ಅಭಿಪ್ರಾಯಿಸಿದರು.

ದಲಿತ, ಶೂದ್ರ ಜನಾಂಗದಲ್ಲಿ ಹುಟ್ಟಿ ವೈದಿಕಾಚರಣೆಯಲ್ಲಿ ತೊಡಗುವ, ಮಠಾಧಿಪತಿಗಳನ್ನು ಕಂಡ ಕೂಡಲೆ ಕಾಲಿಗೆ ಎರಗುವ ವ್ಯಕ್ತಿಗಳು ಕ್ಷಮೆಗೆ ಅರ್ಹರಲ್ಲ. ಇಂತವರಿಂದಲೆ ಬ್ರಾಹ್ಮಣ ಧರ್ಮ ಜೀವಂತವಾಗಿರುವುದು. ದಲಿತ ಸಮುದಾಯದಕ್ಕೆ ಡಾ.ಬಿ.ಆರ್.ಅಂಬೇಡ್ಕರ್‌ರವರ ಮಾರ್ಗದರ್ಶವಿದೆ. ಅದನ್ನು ಪಾಲಿಸುವ ಮೂಲಕ ದೇಶವನ್ನು ಜನಪರವಾಗಿ ಕಟ್ಟಬೇಕಿದೆ ಎಂದು ಅವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದಲಿತ ಚಳವಳಿ ಬುದ್ಧನ ಕಾಲದಿಂದ ಮುಂದುವರೆದಿದೆ. ಆಧುನಿಕ ಯುಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನಪರ ಚಳವಳಿಗೆ ಸ್ಪಷ್ಟ ರೂಪ, ಸಿದ್ಧಾಂತವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ಮುಂದುವರೆದರೆ ನಾವು ಸುಭದ್ರ, ಸೌಹಾರ್ದ ನಾಡನ್ನು ಕಟ್ಟಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಸಂಸ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ಅವರನ್ನು ಅಭಿನಂದಿಸಲಾಯಿತು. ಹಿರಿಯ ವಿಮರ್ಶಕ ಪ್ರೊ.ಬೈರಮಂಗಲ ರಾಮೇಗೌಡ ಪ್ರೀತಿಯ ಹೊನಲು ಕೃತಿಯ ಕುರಿತು ಮಾತನಾಡಿದರು. ಈ ವೇಳೆ ಸಮಾಜವಾದಿ ಚಿಂತಕ ಮಂಗ್ಳೂರು ವಿಜಯ, ದಲಿತ ಮುಖಂಡ ಮುನಿಸ್ವಾಮಿ, ಗುರುಪ್ರಸಾದ್ ಕೆರಗೋಡು ಮತ್ತಿತರರಿದ್ದರು.

‘ಜನಸಾಮಾನ್ಯರನ್ನು ಕೊಂದು ಅವರ ಎಲುಬುಗಳನ್ನೆ ಏಣಿಯಾಗಿಸಿಕೊಂಡು ಅಧಿಕಾರಕ್ಕೇರುವ ಚಾಳಿ ಬಿಜೆಪಿ ನಾಯಕರದು. ತಮ್ಮ ಅಧಿಕಾರಕ್ಕಾಗಿ ಜನಸಾಮಾನ್ಯರ ರಕ್ತವನ್ನು ಯಾವುದೆ ಅಳುಕಿಲ್ಲದೆ ಕುಡಿಯಬಲ್ಲರು. ಇಂತಹವರು ದೇಶವನ್ನು ಮುನ್ನೆಡೆಸಲು ಯೋಗ್ಯರೆ ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಿ ಹೇಳಬೇಕಾಗಿದೆ’
-ಪ್ರೊ.ಜಿ.ಕೆ.ಗೋವಿಂದರಾವ್ ಹಿರಿಯ ಚಿಂತಕ


‘ಬ್ರಾಹ್ಮಣಶಾಹಿಗಳು ಮೊಘಲರ ಆಳ್ವಿಕೆಯಲ್ಲಿ ಅವರ ಬೂಟನ್ನು ನೆಕ್ಕಿದರು. ನಂತರ ಬ್ರಿಟಿಷರ ಬೂಟನ್ನು ನೆಕ್ಕಿ ಸುಖ ಸಂಪತ್ತನ್ನು ಅನುಭವಿಸಿದರು. ಸ್ವಾತಂತ್ರ ನಂತರದ ಭಾರತದಲ್ಲಿ ದೇಶಭಕ್ತಿಯ ನಾಟಕವನ್ನು ಆಡುತ್ತಾರೆ. ಇಂತಹ ನಾಟಕಕಾರಿಂದ ದೇಶಕ್ಕೆ ಯಾವುದೆ ಪ್ರಯೋಜನವಿಲ್ಲ’
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News