ಗಾಝಾ ಮೇಲೆ ಇಸ್ರೇಲಿ ಪಡೆಗಳಿಂದ ಬಾಂಬ್ ದಾಳಿ

Update: 2018-03-25 16:23 GMT

 ಜೆರುಸಲೇಂ,ಮಾ.25: ಇಸ್ರೇಲಿ ಸೇನೆಯ ಜೆಟ್ ವಿಮಾನಗಳು ಶುಕ್ರವಾರ ಮಧ್ಯರಾತ್ರಿ ಗಾಝಾಪಟ್ಟಿ ಪ್ರದೇಶದಲ್ಲಿರುವ ಹಮಾಸ್ ಹೋರಾಟಗಾರರ ನೆಲೆಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದೆಯೆಂದು ಇಸ್ರೇಲ್ ಸೇನೆ ರವಿವಾರ ತಿಳಿಸಿದೆ.ಆದರೆ ಸಾವುನೋವು ಸಂಭವಿಸಿರುವ ಬಗ್ಗೆ ಅದು ಯಾವುದೇ ಮಾಹಿತಿ ನೀಡಿಲ್ಲ.

 ‘‘ದಕ್ಷಿಣ ಗಾಝಾಪಟ್ಟಿಯ ರಫಾದಲ್ಲಿರುವ ಹಮಾಸ್ ಉಗ್ರಗಾಮಿ ಗುಂಪಿನ ಆವರಣವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ವಾಯುಪಡೆಯ ಫೈಟರ್ ಜೆಟ್‌ಗಳು ದಾಳಿ ನಡೆಸಿವೆ’’ ಎಂದು ಇಸ್ರೇಲ್ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

‘‘ ದಹನಕಾರಕವಾದ ಸಾಮಗ್ರಿಗಳನ್ನು ತುಂಬಿಸಿದ ಬಾಟಲಿಗಳನ್ನು ಒಯ್ಯುತ್ತಿದ್ದ ನಾಲ್ವರು ಫೆಲೆಸ್ತೀನಿಯರು ಶನಿವಾರ ಸಂಜೆ ಕಿಸ್ಸುಫಿಮ್‌ನ ಕಿಬ್ಬುಝ್ ಎಂಬಲ್ಲಿ ಗಡಿಬೇಲಿಯನ್ನು ಮುರಿದು ಒಳನುಗ್ಗಿದ ಬೆನ್ನಲ್ಲೇ ಇಸ್ರೇಲ್ ಸೇನೆ ದಕ್ಷಿಣ ಗಾಝಾಪಟ್ಟಿಯ ಮೇಲೆ ದಾಳಿ ನಡೆಸಿದೆ. ಗಡಿಬೇಲಿಯ ನಿರ್ಮಾಣ ಕಾಮಗಾರಿಗೆ ಬಳಕೆಯಾಗುತ್ತಿದ್ದ ದೊಡ್ಡ ಗಾತ್ರದ ಉಪಕರಣಕ್ಕೆ ಬೆಂಕಿ ಹಚ್ಚಲು ಅವರು ಯತ್ನಿಸಿದ್ದರಾದರೂ, ಅದು ಸಾಧ್ಯವಾಗದೆ ಇದ್ದಾಗ ಅವರು ಮತ್ತೆ ಗಾಝಾ ಗಡಿಯೊಳಗೆ ಪಲಾಯನಗೈದಿದ್ದರು ಎಂದು ಇಸ್ರೇಲ್ ಸೇನಾ ವಕ್ತಾರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News