ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ: ಎಷ್ಟು ಸರಿ?

Update: 2018-03-26 04:19 GMT

‘ದಲಿತ ದೌರ್ಜನ್ಯಗಳ ಕಾಯ್ದೆ’ ದುರುಪಯೋಗವಾಗುತ್ತಿದೆ ಎಂದಾಕ್ಷಣ ಸಮಾಜ ಎಚ್ಚೆತ್ತುಕೊಳ್ಳುತ್ತದೆ ಮತ್ತು ಇದನ್ನು ಜೋರು ದನಿಯಲ್ಲಿ ಬೆಂಬಲಿಸುತ್ತದೆ. ವರದಕ್ಷಿಣೆ ಕಾಯ್ದೆಯ ಕುರಿತಂತೆಯೂ ಸಮಾಜ ಇದೇ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಮೀಸಲಾತಿ ವ್ಯವಸ್ಥೆಯನ್ನೇ ತೆಗೆದುಕೊಳ್ಳಿ. ಮೀಸಲಾತಿ ದುರುಪಯೋಗವಾಗುತ್ತಿದೆ, ಅನರ್ಹರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಕೂಗು ಸದಾ ಚರ್ಚೆಯಲ್ಲಿರುತ್ತದೆ. ಆದರೆ, ಮೀಸಲಾತಿ ಎಷ್ಟರಮಟ್ಟಿಗೆ ಶೋಷಿತ ಸಮುದಾಯವನ್ನು ತಲುಪಿದೆ, ಅದನ್ನು ಪರಿಣಾಮಕಾರಿಯಾಗಿ ತಲುಪಿಸುವ ಮಾರ್ಗ ಯಾವುದು ಎನ್ನುವ ಚರ್ಚೆ ಬದಿಗೆ ತಳ್ಳಲ್ಪಡುತ್ತದೆ. ದಲಿತ ದೌರ್ಜನ್ಯ ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ಜೋರು ದನಿಯಲ್ಲಿ ಹೇಳುತ್ತಿರುವವರು, ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳದೇ ಇರುವ ಬಗ್ಗೆ ಮಾತ್ರ ವೌನವಾಗುತ್ತಾರೆ. ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 20ರಂದು ನೀಡಿದ ತೀರ್ಪೊಂದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಆರೋಪಿಗಳನ್ನು ಸ್ವಯಂಚಾಲಿತವಾಗಿ ಬಂಧಿಸಲು ಅವಕಾಶ ನೀಡುವ ನಿಯಮವನ್ನು ರದ್ದುಪಡಿಸಿದೆ ಹಾಗೂ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಕೆಗೆ ಮುನ್ನ ಏಳು ದಿನಗಳೊಳಗೆ ಪೊಲೀಸರು ಪ್ರಾಥಮಿಕ ಹಂತದ ತನಿಖೆ ನಡೆಸುವುದನ್ನು ಕಡ್ಡಾಯಗೊಳಿಸಿದೆ.

ಸಾರ್ವಜನಿಕಸೇವೆಯ ಉದ್ಯೋಗಿಗಳನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ಲಿಖಿತ ಅನುಮತಿಯನ್ನು ಪಡೆದ ಆನಂತರವಷ್ಟೇ ಅವರನ್ನು ಬಂಧಿಸಬಹುದಾಗಿದೆ ಎಂದೂ ನ್ಯಾಯಾಲಯ ತಿಳಿಸಿದೆ. ಈ ಕಾಯ್ದೆಯನ್ನು ಅಮಾಯಕ ನಾಗರಿಕರನ್ನು ಹಾಗೂ ಸಾರ್ವಜನಿಕಸೇವೆಯ ಉದ್ಯೋಗಿಗಳನ್ನು ಬ್ಲಾಕ್‌ಮೇಲ್ ಮಾಡಲು ಬಳಸಲಾಗುತ್ತಿದೆಯೆಂದು ನ್ಯಾಯ ಮೂರ್ತಿಗಳಾದ ಯು.ಯು.ಲಲಿತ್ ಹಾಗೂ ಎ.ಕೆ. ಗೋಯಲ್ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯಿಸಿತ್ತು ಮತ್ತು ಜಾತಿವಾದವನ್ನು ಪ್ರಚೋದಿಸಲು ಈ ಕಾಯ್ದೆಯನ್ನು ಬಳಸಕೂಡದೆಂದು ಅದು ಹೇಳಿತ್ತು. ಈ ಕಾಯ್ದೆಯ ದುರ್ಬಳಕೆಯಿಂದಾಗಿ ಸಾರ್ವಜನಿಕಸೇವೆಯ ಉದ್ಯೋಗಿಗಳು ಕಿರುಕುಳಕ್ಕೊಳಗಾಗುತ್ತಿದ್ದಾರೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳ ಕುರಿತಾಗಿ ಸಾಮಾನ್ಯ ಟೀಕೆ ಮಾಡುವುದನ್ನೂ ಅದು ತಡೆಯುತ್ತದೆಯೆಂದು ನ್ಯಾಯಾಲಯ ಹೇಳಿತ್ತು. ಆದರೆ ಇಂದು ದೇಶದಲ್ಲಿ ಈ ದೌರ್ಜನ್ಯ ತಡೆ ಕಾಯ್ದೆಯನ್ನು ಯಾಕೆ ಪರಿಣಾಮಕಾರಿಯಾಗಿ ಬಳಸಿಕೊಂಡು, ದಲಿತರ ಮೇಲೆ ನಡೆಯುವ ಶೋಷಣೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದರ ಕುರಿತಂತೆ ನಮ್ಮ ನ್ಯಾಯ ವ್ಯವಸ್ಥೆ ವೌನವಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ(ತಡೆ) ಕಾಯ್ದೆಯ ನಿಯಮಗಳನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಾ ಬರಲಾಗಿದೆ. ಜೊತೆಗೆ, ದಲಿತರ ಮೇಲೆ ಹಲ್ಲೆ ನಡೆದಾಗ ಪೊಲೀಸ್ ಇಲಾಖೆ ಈ ಕಾಯ್ದೆಯನ್ನು ಬಳಸುವುದೇ ಇಲ್ಲ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ನ್ಯಾಯವ್ಯವಸ್ಥೆ ಯಾಕೆ ವೌನವಾಗಿದೆ!

 ಕಳೆದ ಕೆಲವು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆಯೆನ್ನುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ಅಂಕಿಅಂಶಗಳ ಪ್ರಕಾರ, 2009ರಿಂದ 2014ರವರೆಗೆ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳ ಸಂಖ್ಯೆಯಲ್ಲಿ ಶೇ.40ರಷ್ಟು ಏರಿಕೆಯಾಗಿದ್ದರೆ, ಪರಿಶಿಷ್ಟ ಬುಡಕಟ್ಟುಗಳ ವಿರುದ್ಧದ ಅಪರಾಧಗಳ ಸಂಖ್ಯೆಯಲ್ಲಿ ಶೇ.118ರಷ್ಟು ಹೆಚ್ಚಳವಾಗಿದೆ.ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯಗ ತಡೆ) ಕಾಯ್ದೆಯಡಿ ಅಪರಾಧಗಳ ದರಗಳಲ್ಲಿ ಗಣನೀಯ ಇಳಿಕೆಯಾಗಿದೆ. ಆದಾಗ್ಯೂ ಈ ಕಾಯ್ದೆಯಡಿ ಶಿಕ್ಷೆಯಾದ ಪ್ರಕರಣಗಳ ಸಂಖ್ಯೆಯು ಸಾಮಾನ್ಯವಾಗಿ ಇತರ ಎಲ್ಲಾ ಅಪರಾಧಗಳಲ್ಲಿ ಶಿಕ್ಷೆಯಾದ ಪ್ರಕರಣಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. 2007ರಿಂದ 2016ರವರೆಗಿನ 10 ವರ್ಷಗಳ ಅವಧಿಯ ರಾಷ್ಟ್ರೀಯ ದತ್ತಾಂಶದ ಪ್ರಕಾರ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳಲ್ಲಿ ಸರಾಸರಿ ಶಿಕ್ಷೆಯಾದ ದರವು 28.8 ಆಗಿದ್ದರೆ, ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಸರಾಸರಿ ಶಿಕ್ಷೆಯ ದರವು 25.2 ಆಗಿರುತ್ತದೆ. ಭಾರತೀಯ ಅಪರಾಧ ದಂಡಸಂಹಿತೆಯಡಿ ಎಲ್ಲಾ ಅಪರಾಧಗಳಿಗಾಗಿನ ಸರಾಸರಿ ಶಿಕ್ಷೆಯ ದರವು 42.5 ಆಗಿರುತ್ತದೆ.

ದೌರ್ಜನ್ಯಗಳ ಕಾಯ್ದೆಯಡಿ ಸ್ವಯಂಚಾಲಿತವಾಗಿ ನಡೆಯುವ ಬಂಧನಗಳು ಅಮಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವುದಕ್ಕೆ ಕಾರಣವಾಗುತ್ತವೆಯೆಂದು ಸುಪ್ರೀಂಕೋರ್ಟ್ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಶೇ.9 ರಿಂದ ಶೇ.10ರಷ್ಟು ಪ್ರಕರಣಗಳು ಮಾತ್ರವೇ ಸುಳ್ಳಾಗಿರುತ್ತವೆ ಎಂಬುದನ್ನು ಪೊಲೀಸ್ ತನಿಖೆಗಳು ಪತ್ತೆಹಚ್ಚಿವೆ. 2016ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ, ಪರಿಶಿಷ್ಟ ಜಾತಿಗಳ ವಿರುದ್ಧದ 40,801 ಪ್ರಕರಣಗಳನ್ನು ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ 6,568 ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿವೆ. ಇದರ ಜೊತೆಗೆ ಹಿಂದಿನ ವರ್ಷಗಳಲ್ಲಿ ಪೊಲೀಸರು ತನಿಖೆ ನಡೆಸಿದ ಪ್ರಕರಣಗಳು ಬಾಕಿಯಿದೆ ಹಾಗೂ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯಗಳ ಶೇ.78 ಪ್ರಕರಣಗಳಲ್ಲಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧದ ಶೇ. 81 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಆ ವರ್ಷವೇ ನ್ಯಾಯಾಲಯಗಳು ಪರಿಶಿಷ್ಟ ಜಾತಿಗಳ ವಿರುದ್ಧದ 1,44,979 ಪ್ರಕರಣಗಳಲ್ಲಿ ವಿಚಾರಣೆಗಳನ್ನು ನಡೆಸಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಹಿಂದಿನ ವರ್ಷಗಳಲ್ಲಿ ವಿಚಾರಣೆಗೆ ಬಾಕಿಯುಳಿದಿರುವುದಾಗಿವೆ. ಆದರೆ ಕೇವಲ 14,615 ಪ್ರಕರಣಗಳಲ್ಲಿ ಮಾತ್ರ ಅವು ವಿಚಾರಣೆಯನ್ನು ಪೂರ್ಣಗೊಳಿಸಿವೆ. 3,753 ಪ್ರಕರಣಗಳಲ್ಲಿ ನ್ಯಾಯಾಲಯಗಳು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದು, ಇದರ ಪರಿಣಾಮವಾಗಿ 2016ರಲ್ಲಿ ಶಿಕ್ಷೆ ವಿಧಿಸಲ್ಪಟ್ಟ ದರವು 25.7 ಆಗಿತ್ತು. ಅದೇ ರೀತಿ, ಕಳೆದ ವರ್ಷ 23,408 ಪ್ರಕರಣಗಳು ನ್ಯಾಯಾ ಲಯದಲ್ಲಿ ಆಲಿಕೆಯಾಗಿದ್ದರೆ, 2,895 ಪ್ರಕರಣಗಳ ವಿಚಾರಣೆ ಪೂರ್ಣ ಗೊಂಡಿದ್ದು, ಅಪರಾಧಿಗಳಿಗೆ ಶಿಕ್ಷೆಯ ದರವು 20.8 ಆಗಿತ್ತು.

 ಹಲವಾರು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಪಂಗಡಗಳ ವಿರುದ್ಧದ ಶಿಕ್ಷೆಯ ದರವು ರಾಷ್ಟ್ರೀಯ ಸರಾಸರಿಗಿಂತ ದಯನೀಯವಾಗಿ ಕಡಿಮೆಯಾಗಿದೆ. ಉದಾಹರಣೆಗೆ 2016ರಲ್ಲಿ ಪರಿಶಿಷ್ಟ ದೌರ್ಜನ್ಯ (ತಡೆ) ಕಾಯ್ದೆಯಡಿ ಅಪರಾಧಿಗಳಿಗೆ ಶಿಕ್ಷೆಯ ದರವು ಶೂನ್ಯ ಆಗಿದ್ದರೆ, ಕರ್ನಾಟಕದಲ್ಲಿ ಶಿಕ್ಷೆಯ ದರ ಕೇವಲ 2.8 ಆಗಿದೆ. ಹೀಗಿರುವಾಗ, ನ್ಯಾಯಾಲಯವೇ ದೊಡ್ಡ ದನಿಯಲ್ಲಿ, ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಹೇಳುವುದು ಪರೋಕ್ಷವಾಗಿ ದಲಿತರ ಮೇಲೆ ದೌರ್ಜನ್ಯ ನಡೆಸಲು ಸಿಗುವ ಕುಮ್ಮಕ್ಕೇ ಆಗಿರುತ್ತದೆ. ಜೊತೆಗೆ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲೂ ಹಿನ್ನಡೆಯಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಕಾನೂನು ವ್ಯವಸ್ಥೆ ಮೊದಲು ದೌರ್ಜನ್ಯ ತಡೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕಡೆಗೆ ಗಮನ ಹರಿಸಬೇಕಾಗಿದೆ. ಇದಾದ ಬಳಿಕವಷ್ಟೇ ಅದರ ದುರುಪಯೋಗದ ಕುರಿತಂತೆ ಯೋಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News