ಉಗ್ರರಿಗೆ ಹಣ ಪೂರೈಕೆ: ಉ.ಪ್ರದೇಶ ಪೊಲೀಸರಿಂದ ಹತ್ತು ಮಂದಿಯ ಬಂಧನ

Update: 2018-03-26 05:26 GMT
ಚಿತ್ರ ಕೃಪೆ : ಟೈಮ್ಸ್ ಆಫ್ ಇಂಡಿಯಾ

ಲಕ್ನೊ, ಮಾ.26: ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆ ಲಷ್ಕರ್ ಎ ತೊಯ್ಬಾದ ಜೊತೆ ನಂಟು ಮತ್ತು ಉಗ್ರರಿಗೆ ಹಣ ಪೂರೈಕೆ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ಪಡೆಯು ಹತ್ತು ಮಂದಿಯನ್ನು ಬಂಧಿಸಿದೆ. ಬಂಧಿತರನ್ನು ನಸೀಮ್ ಅಹ್ಮದ್, ನಯೀಮ್ ಅರ್ಶದ್, ಸಂಜಯ್ ಸರೋಜ್, ನೀರಜ್ ಮಿಶ್ರಾ, ಸಾಹಿಲ್ ಮಸಿಹ್, ಉಮಾ ಪ್ರತಾಪ್ ಸಿಂಗ್, ಮುಕೇಶ್ ಪ್ರಸಾದ್, ನಿಖಿಲ್ ರೈ ಅಲಿಯಾಸ್ ಮುಷರಫ್ ಅನ್ಸಾರಿ, ಅಂಕುರ್ ರೈ ಹಾಗೂ ದಯಾನಂದ್ ಯಾದವ್ ಎಂದು ಗುರುತಿಸಲಾಗಿದೆ. ಉ.ಪ್ರದೇಶದ ಗೋರಖ್‌ಪುರ, ಲಕ್ನೊ ಮತ್ತು ಪ್ರತಾಪ್‌ಗಡ ಹಾಗೂ ಮಧ್ಯಪ್ರದೇಶದ ರೇವಾದಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಪ್ರಧಾನ ನಿರೀಕ್ಷಕ ಅಸೀಮ್ ಅರುಣ್ ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ಎರಡು ರೀತಿಯ ಜನರು ಭಾಗಿಯಾಗಿದ್ದಾರೆ. ಕೆಲವು ಆರೋಪಿಗಳು ಪಾಕಿಸ್ತಾನದಲ್ಲಿ ಕುಳಿತು ಎಲ್ಲ ಕಾರ್ಯಗಳನ್ನು ನಿಯಂತ್ರಿಸುವವರ ಜೊತೆ ನೇರವಾಗಿ ಫೋನ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಈ ವ್ಯಕ್ತಿಗಳು ತಾವು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದ್ದೇವೆ ಎಂಬುದನ್ನು ತಿಳಿದಿದ್ದರು. ಇವರು ಇನ್ನೂ ಕೆಲವು ವ್ಯಕ್ತಿಗಳನ್ನು ಈ ದಂಧೆಯಲ್ಲಿ ಸೇರಿಸಿಕೊಂಡು ಬ್ಯಾಂಕ್ ಖಾತೆಯನ್ನು ತೆರೆಯಲು ಅವರಿಗೆ ನಕಲಿ ದಾಖಲೆಗಳನ್ನು ಪಡೆಯುವಂತೆ ಸೂಚಿಸುತ್ತಾರೆ. ಈ ವ್ಯಕ್ತಿಗಳು ತಾವು ಸ್ಥಳೀಯ ಮಟ್ಟದಲ್ಲಿ ಯಾವುದೋ ಅಪರಾಧಿ ಕೃತ್ಯದಲ್ಲಿ ತೊಡಗಿದ್ದೇವೆ ಎಂದು ಭಾವಿಸುತ್ತಾರೆ. ಈ ಕೆಲಸಕ್ಕಾಗಿ ಭಾರತದಲ್ಲಿರುವ ಏಜೆಂಟ್‌ಗಳು 10ರಿಂದ 20 ಶೇಕಡಾ ಕಮಿಷನ್ ಪಡೆಯುತ್ತಾರೆ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ನಕಲಿ ದಾಖಲೆಗಳನ್ನು ಬಳಸಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ ಈವರೆಗೆ ಒಂದು ಕೋಟಿ ರೂ. ಜಮೆಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 52 ಲಕ್ಷ ರೂ.ವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 50 ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಈ ಹಣವು ಎಲ್ಲಿಂದ ಬಂತು ಮತ್ತು ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News