ಆ್ಯಂಬುಲೆನ್ಸ್‌ನಲ್ಲಿ ಮೂತ್ರ ಮಾಡಿದ ಗಾಯಾಳುವಿಗೆ ಚಾಲಕ ನೀಡಿದ ಅಮಾನವೀಯ ಶಿಕ್ಷೆ ಏನು ಗೊತ್ತೇ?

Update: 2018-03-26 04:49 GMT

ತಿರುವನಂತಪುರ, ಮಾ.26: ಆ್ಯಂಬುಲೆನ್ಸ್‌ನಲ್ಲಿ ಮೂತ್ರ ಮಾಡಿದ ಕಾರಣಕ್ಕೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಖಾಸಗಿ ಆ್ಯಂಬುಲೆನ್ಸ್‌ ಚಾಲಕನೊಬ್ಬ ಸ್ಟ್ರೆಚರ್‌ನಲ್ಲಿ ತಲೆಕೆಳಗಾದ ಸ್ಥಿತಿಯಲ್ಲಿ ಆಸ್ಪತ್ರೆಯ ಹೊರಗೆ ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬಂದಿದೆ. ಚಾಲಕನ ನಿರ್ಲಕ್ಷ್ಯದಿಂದ ಗಾಯಾಳು ಮೃತಪಟ್ಟಿದ್ದಾನೆ.

ತ್ರಿಶ್ಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ವೀಡಿಯೋ ದೃಶ್ಯಾವಳಿಯಲ್ಲಿ ಕಂಡುಬರುವಂತೆ ಗಾಯಾಳು ಮಲಗಿದ್ದ ಸ್ಟ್ರೆಚರ್‌ನ ಒಂದು ತುದಿ ಆ್ಯಂಬುಲೆನ್ಸ್‌ನ ಒಳಗಿದೆ. ಗಾಯಾಳುವಿನ ತಲೆ ಇರುವ ಇನ್ನೊಂದು ತುದಿ ನೆಲದಲ್ಲಿದೆ.

ನಿರ್ಲಕ್ಷ್ಯದ ಕಾರಣದಿಂದ ವ್ಯಕ್ತಿಯ ಜೀವಕ್ಕೆ ಎರವಾದ ಸಂಬಂಧ ಪೊಲೀಸರು ಆ್ಯಂಬುಲೆನ್ಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 20ರಂದು ವ್ಯಕ್ತಿ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ತಲೆಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಆತನನ್ನು ಮೊದಲು ಪಾಲಕ್ಕಾಡ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ತ್ರಿಶ್ಶೂರಿಗೆ ಒಯ್ಯಲು ವೈದ್ಯರು ಸೂಚಿಸಿದ್ದರು. ಹೀಗೆ ಕರೆದೊಯ್ಯುತ್ತಿದ್ದಾಗ ರಾತ್ರಿ 8:30ರ ವೇಳೆ ಈ ಘಟನೆ ಸಂಭವಿಸಿದೆ.

ರೋಗಿಯ ಸಂಬಂಧಿಕರು ಯಾರೂ ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿ ಮಾತ್ರ ಆ್ಯಂಬುಲೆನ್ಸ್‌ನಲ್ಲಿ ಬಂದಿದ್ದರು. ಹೀಗೆ ಬಂದ ಸಿಬ್ಬಂದಿ ಕೈಗವಸು ತರುವ ಸಲುವಾಗಿ ಆಸ್ಪತ್ರೆಯ ಒಳಕ್ಕೆ ಹೋಗಿದ್ದಾಗ ಚಾಲಕ ಸ್ಟ್ರೆಚರ್‌ ಹೊರಕ್ಕೆಳೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ತಕ್ಷಣ ರೋಗಿಯನ್ನು ಗಾಲಿಕುರ್ಚಿಯಲ್ಲಿರಿಸಿ ಆಸ್ಪತ್ರೆಯೊಳಗೆ ಕರೆದೊಯ್ದಿದ್ದಾರೆ. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾದರೂ ಆತ ಶನಿವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News