ಅಪಹರಣ ಪ್ರಕರಣದ ಆರೋಪಿಗಳನ್ನು ಗುಂಡಿಕ್ಕಿ ಬಂಧಿಸಿದ ಬೆಳ್ಳಂದೂರು ಪೊಲೀಸರು

Update: 2018-03-26 08:20 GMT

ಬೆಂಗಳೂರು, ಮಾ.26: ಯುವತಿಯೊಬ್ಬಳ ಅಪಹರಣ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯ ಕೊಡತಿ ಮುಖ್ಯರಸ್ತೆಯ ಬಿಎಂಟಿಸಿ ಕ್ವಾರ್ಟರ್ಸ್ ಬಳಿ ಇಂದು ಮುಂಜಾನೆ ನಡೆದಿದೆ.

ಶಂಕರ್(25) ಮತ್ತು ಸೆಲ್ವ ಕುಮಾರ್(30) ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್, ಯುವತಿಯೊಬ್ಬಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾಗಿರುವ ಧರ್ಮಪುರಿ ನಿವಾಸಿಗಳಾದ ಶಂಕರ್ ಮತ್ತು ಸೆಲ್ವ ಕುಮಾರ್ ಕೊಡತಿ ಬಿಎಂಟಿಸಿ ಕ್ವಾರ್ಟರ್ಸ್ ಬಳಿಯಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾವ 3:45ರ ಸುಮಾರಿಗೆ ಬೆಳ್ಳಂದೂರು ಠಾಣೆಯ ಇನ್‌ಸ್ಪೆಕ್ಟರ್ ವಿಕ್ಟರ್ ಸೈಮನ್ ಮತ್ತು ತಂಡ ಕಾರ್ಯಾಚರಣೆ ಈ ನಡೆಸಿದೆ ಎಂದರು.

ಪೊಲೀಸ್ ಕಾರ್ಯಾಚರಣೆಯ ವೇಳೆ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಬೆನ್ನಟ್ಟಿ ಸೆರೆಹಿಡಿಯಲು ಯತ್ನಿಸಿದ ಪೊಲೀಸರ ಮೇಲೆಯೇ ಆರೋಪಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳು ಪೊಲೀಸ್ ಪೇದೆ ಮಹಾಂತೇಶ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಾಟ ನಡೆಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ಆರೋಪಿಗಳುಪೊಲೀಸರ ಮೇಲೆ ಮತ್ತೆಯೂ ದಾಳಿಗೆ ಮುಂದಾದಾಗ ಇನ್‌ಸ್ಪೆಕ್ಟರ್ ವಿಕ್ಟರ್ ಸೈಮನ್ ಅವರು ಇಬ್ಬರು ಆರೋಪಿಗಳ ಕಾಲಿಗೆ ಗುಂಡಿಕ್ಕಿದ್ದಾರೆ. ಬಳಿಕ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಗಾಯಗೊಂಡಿರುವ ಪೇದೆ ಮಹಾಂತೇಶ್ ಹಾಗೂ ಬಂಧಿತ ಸೆಲ್ವಕುಮಾರ್ ಹಾಗೂ ಶಂಕರ್‌ರನ್ನು ಪರಪ್ಪನ ಅಗ್ರಹಾರದ ಸ್ಟಾನ್‌ಫೋರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳಿಬ್ಬರು ಇತ್ತೀಚೆಗೆ ಕೈಗೊಂಡನಹಳ್ಳಿಯಲ್ಲಿ ನಡೆದಿದ್ದ ಯುವತಿಯೊಬ್ಬಳ ಅಪಹರಣ ಪ್ರಕರಣದ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News