ರಾಹುಲ್‌ಗಾಂಧಿಯ ವರ್ಚಸ್ಸಿನಿಂದ ಬಿಜೆಪಿ-ಜೆಡಿಎಸ್‌ಗೆ ಹತಾಶೆ: ಉಗ್ರಪ್ಪ

Update: 2018-03-26 12:32 GMT

ಬೆಂಗಳೂರು, ಮಾ.26: ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿಗೆ ರಾಜ್ಯದ ಜನತೆ ತೋರುತ್ತಿರುವ ಪ್ರೀತಿ, ಬೆಂಬಲವನ್ನು ನೋಡಿ ಬಿಜೆಪಿ-ಜೆಡಿಎಸ್ ನಾಯಕರು ಹತಾಶರಾಗಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ವಿಧಾನಪರಿಷತ್‌ನ ಹಿರಿಯ ಸದಸ್ಯ ಉಗ್ರಪ್ಪ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ, ಜೆಡಿಎಸ್‌ನ ಇತಿಹಾಸವನ್ನು ಮೆಲುಕು ಹಾಕಿಕೊಂಡರೆ ಭವಿಷ್ಯದಲ್ಲಿ ಯಾವ ಪಕ್ಷ ಅಳಿಯಲಿದೆ-ಉಳಿಯಲಿದೆ ಎಂಬುದು ತಿಳಿಯಲಿದೆ ಎಂದು ಅವರು ತಿಳಿಸಿದರು.

ಎಚ್.ಡಿ ದೇವೇಗೌಡ ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದ ಜೆಡಿಎಸ್, ಈಗ ಯಾವ ಸ್ಥಾನದಲ್ಲಿದೆ ಎಂಬುದನ್ನು ಅವರೇ ಅರಿಯಬೇಕು. ಜೆಡಿಎಸ್ ನಾಯಕರು ತಮ್ಮ ಸ್ವಾರ್ಥ ಪ್ರವೃತ್ತಿಯನ್ನು ಹೀಗೆಯೇ ಮುಂದುವರೆಸಿದರೆ ಪ್ರಾದೇಶಿಕ ಎಂಬ ಸ್ಥಾನಮಾನಕ್ಕೂ ಕುತ್ತು ಬರಲಿದೆ ಎಂದು ಅವರು ಲೇವಡಿ ಮಾಡಿದರು.

ಇನ್ನು ಬಿಜೆಪಿ ನಾಯಕರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ತಾವು ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲವೆಂದು ಖಚಿತವಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ ಹೆಗಡೆ ಸೇರಿದಂತೆ ಬಿಜೆಪಿ ನಾಯಕರು ರಾಜ್ಯ ಸರಕಾರದ ವಿರುದ್ಧ ಸುಳ್ಳಿನ ಸರಮಾಲೆಯನ್ನೆ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಎಚ್‌ಡಿಕೆಗೆ ಕೆಮ್ಮು ಬಾರದಿರಲಿ
ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವ ಅವಸರದಲ್ಲಿ ನಾನು ಬಿಜೆಪಿ ಪಕ್ಕದಲ್ಲಿ ನಿಂತು ಕೆಮ್ಮಿದರೆ ಕಾಂಗ್ರೆಸ್ ಹಾರಿ ಹೋಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಕೆಮ್ಮು ಬರಬಾರದು. ಅವರು ಇನ್ನೂ ಆರೋಗ್ಯವಾಗಿರಬೇಕು ಎಂದು ಬಯಸುತ್ತೇನೆ.
-ಉಗ್ರಪ್ಪ ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News