ಮಹಿಳೆಯರ ರಕ್ಷಣೆಗೆ ರಾಷ್ಟ್ರೀಯ ನೀತಿ ಜಾರಿಯಾಗಲಿ: ವಿ.ಎಸ್.ಉಗ್ರಪ್ಪ

Update: 2018-03-26 12:49 GMT

ಬೆಂಗಳೂರು, ಮಾ.26: ಕೇಂದ್ರ ಸರಕಾರ ಮಹಿಳೆಯರ ಮತ್ತು ಮಕ್ಕಳ ಹಿತದೃಷ್ಟಿಯಿಂದ ರಾಷ್ಟ್ರೀಯ ನೀತಿ ಜಾರಿ ಮಾಡಬೇಕು ಎಂದು ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿದಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಆರೋಪಿಗಳಿಗೆ ಆಗುತ್ತಿರುವ ಶಿಕ್ಷೆಯ ಪ್ರಮಾಣ ಶೇ.3ರಷ್ಟಿದೆ. ಹೀಗಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗುಂತಹ ಕಾಯ್ದೆ ರೂಪಿಸುವುದು ತುರ್ತು ಅಗತ್ಯವಿದೆ ಎಂದು ತಿಳಿಸಿದರು.

ನನ್ನ ಅಧ್ಯಕ್ಷತೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿಯು ರಾಜ್ಯಾದ್ಯಂತ ಸುತ್ತಾಡಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಸುಮಾರು 6ಸಾವಿರ ಪುಟಗಳ ವರದಿಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ. ಆದರೆ, ಇದು ಕೇವಲ ಒಂದು ರಾಜ್ಯದ ಸಮಸ್ಯೆಯಲ್ಲ. ದೇಶದ ಎಲ್ಲ ರಾಜ್ಯಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿದೆ. ಹೀಗಾಗಿ ಮಹಿಳೆಯರ ರಕ್ಷಣೆಗಾಗಿ ರಾಷ್ಟ್ರೀಯ ನೀತಿ ಜಾರಿ ಅನಿವಾರ್ಯವೆಂದು ಅವರು ಹೇಳಿದರು.

ಬಿಜೆಪಿಯದ್ದು ಮೊಸಳೆ ಕಣ್ಣೀರು: ಬಿಜೆಪಿ ನಾಯಕರು ನಾವು ಮಹಿಳೆಯರ ಪರವೆಂದು ಬೊಬ್ಬೆ ಹೊಡೆಯುತ್ತಾರೆ. ನಿಜವಾಗಿಯು ಅವರಿಗೆ ಮಹಿಳೆಯರ ಕುರಿತು ಕನಿಷ್ಟ ಕಾಳಜಿ ಇದ್ದರೆ ಕೂಡಲೆ ರಾಷ್ಟ್ರೀಯ ನೀತಿ ಜಾರಿ ಮಾಡಬೇಕು. ಹಾಗೂ ಸಂಸತ್ ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಾಜ್ಯಾದ್ಯಂತ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯವನ್ನು ವಿವರವಾಗಿ ವಿಶ್ಲೇಷಿಸಿ ಸುಮಾರು 6ಸಾವಿರ ಪುಟಗಳ ವರದಿಯನ್ನು ರಾಜ್ಯ ಸರಕಾರಕ್ಕೆ ಕೊಟ್ಟಿದ್ದೇವೆ. ಈ ವರದಿಯಲ್ಲಿ ಸುಮಾರು 152ಕ್ಕೂ ಹೆಚ್ಚು ಶಿಫಾರಸುಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ. ಈ ವರದಿಯ ಅನ್ವಯ ಲೈಂಗಿಕ ದೌರ್ಜನ್ಯ ಪ್ರಕರಣಗಳೆ ತಡೆಗೆ ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ಜಾರಿ ಮಾಡಬೇಕು.
-ಉಗ್ರಪ್ಪ, ಅಧ್ಯಕ್ಷ ಲೈಂಗಿಕ ದೌರ್ಜನ್ಯ ತಡೆ ಸಮಿತಿ

ವರದಿಯ ಮುಖ್ಯಾಂಶಗಳು
-ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯ ಮತದಾನ ತಡೆ ಹಿಡಿಯಬೇಕು.
-ಆರೋಪ ಸಾಬೀತಾದರೆ ಮತದಾನದಿಂದ ನಿಷೇಧ ಹೇರಬೇಕು.
-ಸರಕಾರದ ಎಲ್ಲ ಸೌಲಭ್ಯಗಳನ್ನು ತಡೆ ಹಿಡಿಯಬೇಕು.
-ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಗೆ ಒಳಗಾದ ತಪ್ಪಿತಸ್ಥನ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News