ಇವಿಎಂ ದುರ್ಬಳಕೆ ಸಾಧ್ಯವಿಲ್ಲ: ಚುನಾವಣಾಧಿಕಾರಿ ಸಂಜೀವ್ ಕುಮಾರ್

Update: 2018-03-26 15:37 GMT

ಬೆಂಗಳೂರು, ಮಾ. 26: ‘ಚುನಾವಣೆಯಲ್ಲಿ ಮತ ಚಲಾಯಿಸಲು ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಯಂತ್ರದ ತಂತ್ರಜ್ಞಾನದ ಕುರಿತು ಸಾರ್ವಜನಿಕರಿಗೆ ಇರುವ ಸಂದೇಹಗಳನ್ನು ಪರಿಹರಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಕುರಿತು ಏರ್ಪಡಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತದಲ್ಲಿ 20ವರ್ಷಗಳಿಂದ ಚಾಲ್ತಿಯಲ್ಲಿರುವ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸಾರ್ವಜನಿಕರಲ್ಲಿ ಇತ್ತೀಚೆಗೆ ಅನುಮಾನಗಳು ಸೃಷ್ಟಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಸುಳ್ಳು ವದಂತಿಗಳಿಗೆ ಜನರು ಕಿವಿಗೊಡದಂತೆ ಹಾಗೂ ವಿದ್ಯುನ್ಮಾನ ಮತಯಂತ್ರದ ಕುರಿತು ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮುಟ್ಟಿಸುವ ಜವಾಬ್ದಾರಿ ಮಾಧ್ಯಮಗಳಿಗಿದೆ. ಹೀಗಾಗಿ ಈ ಕಾರ್ಯಾಗಾರವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ವಿದ್ಯುನ್ಮಾನ ಮತಯಂತ್ರದ ಜೊತೆ ಈ ಬಾರಿ ರಾಜ್ಯದ ಚುನಾವಣೆಯಲ್ಲಿ ವಿವಿಪ್ಯಾಟ್ ತಂತ್ರಜ್ಞಾನದ ಸಹಾಯದೊಂದಿಗೆ ಮತ ಚಲಾಯಿಸಿದ ನಂತರ ಮುದ್ರಿತ ರೂಪದಲ್ಲಿ ದಾಖಲೆಗಳನ್ನು ಪಡೆಯುವಂತ ಹೊಸ ತಂತ್ರಜ್ಞಾನವನ್ನು ಬಳಸಲಿದ್ದು, ಚಲಾವಣೆಯಾದ ಮುದ್ರಿತ ರೂಪದ ದಾಖಲೆಯನ್ನು ಸಾರ್ವಜನಿಕರು ಮತದಾನ ಮಾಡಿದ ನಂತರ ನೋಡಬಹುದಾಗಿದೆ ಹಾಗೂ ಈ ಮುದ್ರಿತ ದಾಖಲೆಯನ್ನು ಚುನಾವಣಾ ಆಯೋಗ ಮುಂದಿನ ಐದು ವರ್ಷದವರೆಗೆ ಕಾಯ್ದಿರಿಸಲಿದೆ ಎಂದು ಹೇಳಿದರು.

1999ರಿಂದ ಭಾರತದಲ್ಲಿ ಪ್ರಾರಂಭವಾದ ವಿದ್ಯುನ್ಮಾನ ಮತಯಂತ್ರದ ಅಭಿವೃದ್ಧಿ ಹಾಗೂ ಬಳಕೆ ಇಂದು ಹಲವು ಅಭಿವೃದ್ಧಿಗಳನ್ನು ಕಂಡು 2006ರ ಮುಂಚೆ ತಯಾರಾದ ವಿದ್ಯುನ್ಮಾನ ಮತಯಂತ್ರಗಳನ್ನು ಎಂ-1 ಎಂದು ವರ್ಗೀಕರಿಸಲಾಗಿದೆ. 2006ರ ನಂತರದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುನ್ಮಾನ ಮತಯಂತ್ರಗಳನ್ನು ಎಂ-2 ಎಂದು ವರ್ಗೀಕರಿಸಲಾಗಿದ್ದು, ಎಂ-3 ತಂತ್ರಜ್ಞಾನದ ವಿದ್ಯುನ್ಮಾನ ಮತಯಂತ್ರಗಳ ಅಭಿವೃದ್ಧಿ ಕಾರ್ಯ ನಡೆದಿದೆ.

ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ತಯಾರಿಸುವುದು ಕೇವಲ ಎರಡು ಸಂಸ್ಥೆಗಳು. ಬೆಂಗಳೂರಿನ ಬಿಇಎಲ್ ಹಾಗೂ ಹೈದರಾಬಾದ್‌ನ ಇಸಿಐಎಲ್ ಸಂಸ್ಥೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ತಂತ್ರಜ್ಞಾನದ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ನೀಡುವ ಸಲಹೆ ಸೂಚನೆಗಳ ಆಧಾರದ ಮೇಲೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ತಯಾರಿಸಿದ ಸಂಸ್ಥೆ ಹಲವು ತಪಾಸಣೆಗಳ ನಂತರ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಒಪ್ಪಿಸುತ್ತದೆ. ಹೀಗೆ ತಯಾರಾದ ಮತಯಂತ್ರಗಳನ್ನು ಆಯಾಯ ರಾಜ್ಯದ ಚುನಾವಣೆಗಾಗಿ ಬಳಸಲು ಸಜ್ಜಾದ ಮೇಲೆ ಚುನಾವಣಾ ಆಯೋಗವೂ ಹಲವು ತಪಾಸಣೆಗಳನ್ನು ನಡೆಸಿದ ನಂತರ ರಾಜ್ಯಗಳಿಗೆ ರವಾನಿಸುತ್ತದೆ. ಹೀಗೆ ರವಾನೆ ಆದ ಮತಯಂತ್ರಗಳನ್ನೂ ರಾಜಕೀಯ ಪಕ್ಷಗಳ ಸದಸ್ಯರ ಮುಂದೆ ತಪಾಸಣೆ ನಡೆಸಿ, ಪ್ರಯೋಗಿಸಿ, ಖಾತರಿಪಡಿಸಿಕೊಂಡು ನಂತರ ಜಿಲ್ಲೆಗಳಿಗೆ ರವಾನೆಯಾಗಲಿವೆ ಎಂದು ವಿವರಿಸಿದರು.

ಕಾರ್ಯಾಗಾರ ಉದ್ಫಾಟಿಸಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಮಾತನಾಡಿ, ರಾಜ್ಯದ ಚುನಾವಣೆ ಇತಿಹಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣೆ ಹಾಗೂ ಮತಯಂತ್ರದ ತಾಂತ್ರಿಕತೆ ಕುರಿತು ಕಾರ್ಯಾಗಾರ ಏರ್ಪಡಿಸಿರುವುದು ಇದೇ ಮೊದಲು ಎಂದು ಶ್ಲಾಘಿಸಿದರು.

ಚುನಾವಣಾ ಕಾರ್ಯವೈಖರಿ ಹಾಗೂ ಚುನಾವಣೆಯಲ್ಲಿ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರಗಳ ತಂತ್ರಜ್ಞಾನದ ಬಗ್ಗೆ ಪತ್ರಕರ್ತರು ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ಜನಸಾಮಾನ್ಯರ ಸಂದೇಹಗಳಿಗೆ ಉತ್ತರಿಸುವ ಮುನ್ನ ನಾವು ತಿಳಿದುಕೊಳ್ಳುವುದು ಉತ್ತಮ ಎಂದರು.

ಮುಖ್ಯ ಉಪ ಚುನಾವಣಾಧಿಕಾರಿ ರಾಘವೇಂದ್ರ, ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ತಂತ್ರಜ್ಞಾನದ ಕುರಿತು ಪ್ರಾತ್ಯಕ್ಷಿಕೆ ನೀಡಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಮಾಧ್ಯಮ ಪ್ರತಿನಿಧಿಗಳಿಗೆ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಿ ನಂತರ ವಿವಿಪ್ಯಾಟ್‌ನಲ್ಲಿ ಹೇಗೆ ಕಾಣುತ್ತದೆ ಎನ್ನುವುದನ್ನು ಪ್ರಾಯೋಗಿಕ ಮತಯಂತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡಿ ಸಂದೇಹಗಳಿಗೆ ಉತ್ತರಿಸಿದರು.

ಐಎಎಸ್ ಅಧಿಕಾರಿ ಬಿ.ಆರ್.ಮಮತಾ, ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸಹನಾ ಹಾಜರಿದ್ದರು.

‘ಯಾವುದೇ ಕಾರಣಕ್ಕೂ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಮತಯಂತ್ರಗಳಿಗೆ ಇಂಟರ್‌ನೆಟ್, ಬ್ಲೂ ಟೂತ್, ವೈರ್‌ಲೆಸ್ ಸೇರಿದಂತೆ ಯಾವುದೇ ಸಂಪರ್ಕ ಇರುವುದಿಲ್ಲ. ಅತಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತದೆ. ಮತಯಂತ್ರಗಳ ತಯಾರಿಕೆಯಿಂದ ಮತ ಎಣಿಕೆವರೆಗೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ’
-ಸಂಜೀವ್ ಕುಮಾರ್ ಮುಖ್ಯ ಚುನಾವಣಾಧಿಕಾರಿ

‘ರಾಜ್ಯದಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಇಡೀ ವಿಶ್ವದಲ್ಲೇ ಗೌರವವಿರುವುದು ಹೆಮ್ಮೆಯ ವಿಚಾರ. ಮತಯಂತ್ರವನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಲಾಗದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಫಲಿತಾಂಶ ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ’
-ಸಂಜೀವ್ ಕುಮಾರ್ ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News