ಚುನಾವಣೆ ರದ್ದುಗೊಳಿಸಲು ಅಶ್ವಿನಿ ನಾಚಪ್ಪ ಒತ್ತಾಯ

Update: 2018-03-26 16:34 GMT

ಬೆಂಗಳೂರು, ಮಾ.26: ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಚುನಾವಣಾ ಪಟ್ಟಿಯಲ್ಲಿ ನೋಂದಣಿಯಾಗದ ಅನಧಿಕೃತ ಹೆಸರುಗಳನ್ನು ಸೇರಿಸಲಾಗಿದೆ. ಹೀಗಾಗಿ, ಎ.19ರಂದು ನಡೆಯುವ ಚುನಾವಣೆ ರದ್ದುಗೊಳಿಸಬೇಕು ಎಂದು ಅಸೋಸಿಯೇಷನ್ ಉಪಾಧ್ಯಕ್ಷೆ ಅಶ್ವಿನಿ ನಾಚಪ್ಪ ಒತ್ತಾಯಿಸಿದರು.

ಸೋಮವಾರ ನಗರದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಡೆಯುವ 21 ದಿನಗಳ ಮುಂಚಿತವಾಗಿ ಚುನಾವಣಾ ಪ್ರಕ್ರಿಯೆ ಕುರಿತು ಎಲ್ಲ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ಗಳಿಗೆ ಮಾಹಿತಿಯನ್ನು ಕಳುಹಿಸಬೇಕು. ಆದರೆ, ಈ ಕುರಿತು ಸಾಮಾನ್ಯ ಸಭೆಯನ್ನೇ ಕರೆಯದೆ, ಏಕಾಏಕಿ ಚುನಾವಣೆ ದಿನವನ್ನು ನಿಗದಿಪಡಿಸಿದ್ದಾರೆ. ಅಲ್ಲದೇ, ನೋಂದಣಿಯಾಗದ ಅನಧಿಕೃತ ಹೆಸರುಗಳನ್ನು ಚುನಾವಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಎ.19ರಂದು ನಡೆಯುವ ಅಸೋಸಿಯೇಷನ್ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಜು.1ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಕಾರಣಾಂತರಗಳಿಂದ ಮುಂದೂಡಲಾಯಿತು. ಮೂರು ತಿಂಗಳುಗಳ ಒಳಗಾಗಿ ಚುನಾವಣೆಯನ್ನು ನಡೆಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಈ ಬಗ್ಗೆ ಯಾವುದೇ ಒಂದು ಸಾಮಾನ್ಯ ಸಭೆಯನ್ನು ಕರೆದಿಲ್ಲ ಎಂದು ಅವರು ದೂರಿದರು.

ಚುನಾವಣೆ ಪ್ರಕ್ರಿಯೆಯ ಬಗ್ಗೆ ಆದೇಶ ಪತ್ರವನ್ನು ಹೊರಡಿಸಿದೆ, ಏಕಾಏಕಿಯಾಗಿ ಚುನಾವಣೆಯನ್ನು ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ 8 ಜಿಲ್ಲೆಗಳನ್ನು ಚುನಾವಣೆ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಬಗ್ಗೆ ಅಸೋಸಿಯೇಷನ್‌ನ ಉಪಾಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಅವರು ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅಶ್ವಿನಿ ನಾಚಪ್ಪ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News