ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಾಗಲಿ: ಡಾ.ಹರ್ಷವರ್ಧನ್

Update: 2018-03-26 16:37 GMT

ಬೆಳಗಾವಿ, ಮಾ.26: ಹೃದಯ ದಾನ ಮಾಡಿ ಸಮಾಜದಲ್ಲಿ ಮಾದರಿಯಾದ ತಾವುಗಳು ಅಂಗಾಂಗ ದಾನಿಗಳಿಗೆ ಪ್ರೇರಣಾದಾಯಿ ತಾಯಿ. ಈ ಭಾಗದಲ್ಲಿ ಹೃದಯ ದಾನ ಮಾಡುವುದು ಮೂಲಕ ಅಂಗಾಂಗಗಳನ್ನು ದಾನ ಮಾಡುವವರ ಸಂಖ್ಯೆ ಹೆಚ್ಚಾಗಲಿ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಹಾರೈಸಿದ್ದಾರೆ.

ಸೋಮವಾರ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ್ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಹೃದಯ ಕಸಿ ಮಾಡಿಸಿಕೊಂಡ ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಿದ ಬಳಿಕ ಅವರು ಮಾತನಾಡಿದರು.

ಅತೀ ಸುಸಜ್ಜಿತವಾದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಕಡಿಮೆ ವೆಚ್ಚದಲ್ಲಿ ಸಕಲ ಚಿಕಿತ್ಸೆ ನೀಡುತ್ತಿದೆ. ಇಲ್ಲಿರುವ ಜನರು ಪುಣ್ಯವಂತರು. ಹೃದಯ ದಾನ ಮಾಡಿ ಇನ್ನೊಬ್ಬರಿಗಾಗಿ ಮಿಡಿದ ಕುಟುಂಬದ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಎಂದು ಅವರು ಹೇಳಿದರು.

ಭಾರತದಲ್ಲಿ ಅಂಗಾಂಗ ದಾನಗಳ ಕುರಿತು ಜಾಗೃತಿ ಅತೀ ಕಡಿಮೆ ಇದ್ದು, ದಾನ ಮಾಡುವ ಜನರಿಗೆ ತಿಳುವಳಿಕೆ ನೀಡಬೇಕಾಗಿದೆ. ಅನೇಕ ಮಹಾನಗರಗಳಲ್ಲಿ ಸಂಘ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಹೀಗಾಗಿ ಮಹಾನಗರಗಳಲ್ಲಿ ಅಂಗಾಂಗ ದಾನಿಗಳು ಮುಂದೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅದರಂತೆ ದೇಶದ ಗ್ರಾಮೀಣ ಮಟ್ಟದಲ್ಲಿಯೂ ಅಂಗಾಂಗ ದಾನಗಳ ಕುರಿತು ಜಾಗೃತಿ ಮೂಡಿಸಲು ವೈದ್ಯಕೀಯ ಮಹಾವಿದ್ಯಾಲಯಗಳ ಜೊತೆ ಸಂಘ ಸೇವಾ ಸಂಸ್ಥೆಗಳು ಮುಂದಾಗಬೇಕೆಂದು ಹರ್ಷವರ್ಧನ್ ಕರೆ ನೀಡಿದರು.

ಕೆಎಲ್‌ಇ ಸಂಸ್ಥೆಯು ಸಮಾಜದ ಪರಿವರ್ತನೆಯಲ್ಲಿ ನಿಜವಾಗಿಯೂ ತೊಡಗಿಕೊಂಡಿರುವುದಕ್ಕೆ ಇದು ಸಾಕ್ಷಿ. ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಸಂಸ್ಥೆಯು ನಿಜವಾದ ಕಳಕಳಿ ಹೊಂದಿದೆ. ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವು ಅತ್ಯಂತ ಶ್ಲಾಘನೀಯ ಎಂದು ಅವರು ಹೇಳಿದರು.

ಭವ್ಯವಾದ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ವೈದ್ಯರು ಅಷ್ಟೇ ಒಳ್ಳೆಯವರು. ಸಮಾಜದ ಅನಾರೋಗ್ಯವನ್ನು ಹೋಗಲಾಡಿಸಲು ತಮ್ಮ ವೈದ್ಯರು ನಿರಂತರವಾಗಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅನನ್ಯ ಎಂದ ಅವರು, ಇದೇ ಸಂದರ್ಭದಲ್ಲಿ ಹೃದಯ ಕಸಿ ಮಾಡಿದ ವೈದ್ಯರ ತಂಡವನ್ನು ಶ್ಲಾಘಿಸಿದರು.

ಹೃದಯ ದಾನಿಯ ತಾಯಿಗೆ ಸಾಂತ್ವನ ಹೇಳಿದ ಅವರು, ನೀವು ಧೃತಿಗೆಡಬೇಕಾಗಿಲ್ಲ. ನಿಮ್ಮ ಮಗಳ ಹೃದಯ ಈ ಯುವಕನ ದೇಹದಲ್ಲಿ ಮಿಡಿಯುತ್ತಿದೆ. ಅವಳು ಸದಾ ನಿಮ್ಮೊಂದಿಗೆ ಇದ್ದಾಳೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಸಿ.ಮೆಟಗುಡ್, ಅಶೋಕಣ್ಣಾ ಬಾಗೇವಾಡಿ, ಕಾರ್ಯದರ್ಶಿ ಬಿ.ಬಿ.ದೇಸಾಯಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ . ಜಾಲಿ, ಡಾ.ರಿಚರ್ಡ್ ಸಾಲ್ಡಾನಾ, ಡಾ.ಮೋಹನ ಗಾನ, ಡಾ.ಪ್ರವೀಣ ತಂಬ್ರಳ್ಳಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News