ಸೋರುತ್ತಿರುವ ಚುನಾವಣಾ ಆಯೋಗದ ಮನೆಯ ಸೂರು

Update: 2018-03-28 05:15 GMT

ಕೊನೆಗೂ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 12ಕ್ಕೆ ಮತದಾನ ನಡೆಯಲಿದ್ದು, 15ಕ್ಕೆ ಫಲಿತಾಂಶ ಹೊರಬೀಳಲಿದೆ. ಕರ್ನಾಟಕದ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ. ಈ ಕಾರಣದಿಂದಲೇ ಬಿಜೆಪಿಯ ಕೇಂದ್ರ ನಾಯಕರಿಗೂ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ಅಮಿತ್ ಶಾ, ರಾಜ್ಯದಲ್ಲಿ ಝಂಡಾ ಹೂಡಿದ್ದಾರೆ. ಒಂದು ರೀತಿಯಲ್ಲಿ ಇಲ್ಲಿ ಚುನಾವಣೆ ನಡೆಯುತ್ತಿರುವುದು ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವೆಯಲ್ಲ, ಮೋದಿ ಮತ್ತು ಸಿದ್ದರಾಮಯ್ಯ ನಡುವೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಗೆದ್ದರೆ ಮುಂದಿನ ಲೋಕಸಭೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಅಲುಗಾಡಿಸುವುದು ಕಷ್ಟ ಸಾಧ್ಯವಾಗಬಹುದು. ಆದರೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದರೆ, ಅದು ಮೋದಿಯ ಪಾಲಿಗೆ ಪತನದ ಸೂಚನೆಯಾಗುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಯುಗ ಅಂತ್ಯವಾಗಿ, ಆರೆಸ್ಸೆಸ್ ನೇತೃತ್ವದ ಹೊಸ ಬಿಜೆಪಿಯೊಂದು ಮೂಡಿ ಬರುವ ಸಾಧ್ಯತೆಗಳಿವೆ.

ಚುನಾವಣೆ ಅತ್ಯಂತ ಪಾರದರ್ಶಕವಾಗಿ ಮತ್ತು ಯಾವುದೇ ಅಕ್ರಮಗಳಿಲ್ಲದೆ ನಡೆಯುತ್ತದೆ ಎಂದು ಚುನಾವಣಾ ಆಯೋಗ ಈಗಾಗಲೇ ಭರವಸೆಕೊಟ್ಟಿದೆ. ಇವಿಎಂ ಮತಯಂತ್ರದ ಬಗ್ಗೆ ಅಪನಂಬಿಕೆ ಬೇಡ ಎಂದೂ ಹೇಳಿದೆ. ಆದರೆ ಚುನಾವಣಾ ಆಯೋಗದ ಈ ಎಲ್ಲ ಭರವಸೆಗಳನ್ನು ಹುಸಿಗೊಳಿಸುವಂತಹ ಸನ್ನಿವೇಶ, ಚುನಾವಣಾ ಘೋಷಣೆಯ ದಿನವೇ ನಿರ್ಮಾಣವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾಧಿಕಾರಿ ಘೋಷಿಸುವ ಮೊದಲೇ, ಬಿಜೆಪಿಯ ಐಟಿ ಸೆಲ್‌ನ ವರಿಷ್ಠ ಅಮಿತ್ ಮಾಲವೀಯ ತಮ್ಮ ಟ್ವಿಟರ್‌ನಲ್ಲಿ ಘೋಷಿಸಿ ಬಿಟ್ಟಿದ್ದರು. ಚುನಾವಣಾ ಆಯೋಗ ಪತ್ರಿಕಾಗೋಷ್ಠಿಯಲ್ಲಿ ಘೋಷಿಸುವ ಮೊದಲೇ ದಿನಾಂಕ ಸೋರಿಕೆಯಾಗಿದ್ದು ಹೇಗೆ? ಎನ್ನುವ ಪ್ರಶ್ನೆ ಮತ್ತೆ ಚುನಾವಣಾ ಆಯೋಗದ ಮೇಲೆ ಜನರ ಸಂಶಯದ ಕಣ್ಣು ಬಿದ್ದಿದೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರಕಾರದ ನಡುವೆ ಅನೈತಿಕ ಸಂಬಂಧವಿದೆ ಎನ್ನುವ ಮಾತುಗಳು ಬಲ ಪಡೆಯುತ್ತಿರುವ ದಿನಗಳಲ್ಲಿ ಈ ಸೋರಿಕೆ ಆಯೋಗದ ವಿಶ್ವಾಸಾರ್ಹತೆಗೆ ಇನ್ನಷ್ಟು ಧಕ್ಕೆ ತಂದಿದೆ.

ಇವಿಎಂನ ಕುರಿತಂತೆ ಜನರು ಈಗಾಗಲೇ ಸಂಶಯಿಸುತ್ತಿದ್ದಾರೆ. ಹಲವೆಡೆ ಇವಿಎಂನ ದೋಷಗಳು ಪತ್ತೆಯಾಗಿವೆ. ಇದರ ಬೆನ್ನಿಗೇ ಇದೀಗ ಚುನಾವಣಾ ಆಯೋಗ ಘೋಷಿಸುವ ಮೊದಲೇ ದಿನಾಂಕ ಬಿಜೆಪಿಯ ವರಿಷ್ಠರಿಗೆ ತಲುಪಿದ್ದು ಹೇಗೆ? ಈ ಪ್ರಶ್ನೆಗೆ ಚುನಾವಣಾ ಆಯೋಗವೇ ಉತ್ತರಿಸಬೇಕಾಗಿದೆ. ಅಮಿತ್ ಮಾಲವೀಯ ಅವರು ‘‘ಸುದ್ದಿವಾಹಿನಿಯೊಂದರಲ್ಲಿ ಬಂದ ಸುದ್ದಿಯನ್ನು ಅವಲಂಬಿಸಿ ಟ್ವೀಟ್ ಮಾಡಿದೆ’’ ಎಂದು ನಯವಾಗಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಅಂದರೆ ಇವರು ಟ್ವೀಟ್ ಮಾಡುವುದಕ್ಕೂ ಮೊದಲೇ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದಾಯಿತು. ಈ ಮೂಲಕ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪವನ್ನು ಪಡೆದಿದೆ. ಮಾಧ್ಯಮಗಳಿಗೂ, ರಾಜಕಾರಣಿಗಳೂ ಜೊತೆ ಜೊತೆಯಾಗಿ ಮಾಹಿತಿ ಸೋರಿಕೆಯಾಗಿದೆ. ಮುಖ್ಯವಾಗಿ ಬಿಜೆಪಿ ಒಲವುಳ್ಳ ಮಾಧ್ಯಮಗಳೇ ಆಯೋಗ ಘೋಷಿಸುವ ಮೊದಲೇ ದಿನಾಂಕವನ್ನು ಪ್ರಸಾರ ಮಾಡಿವೆ. ಕನಿಷ್ಠ ಚುನಾವಣಾ ದಿನಾಂಕವನ್ನೇ ಗೌಪ್ಯವಾಗಿಡುವಷ್ಟು ಬದ್ಧತೆ ಚುನಾವಣಾ ಆಯೋಗಕ್ಕಿಲ್ಲ ಎಂದ ಮೇಲೆ, ಅದರಿಂದ ಚುನಾವಣೆಯಲ್ಲಿ ನಡೆಯಬಹುದಾದ ಇತರ ಅಕ್ರಮಗಳಿಗೆ ಕಡಿವಾಣ ಹಾಕುವ ಕುರಿತಂತೆ ಎಷ್ಟರ ಮಟ್ಟಿಗೆ ಭರವಸೆಯಿಡಬಹುದು?

ಸೋರಿಕೆಯಿಂದ ತೀವ್ರ ಮುಜುಗರಕ್ಕೆ ಸಿಲುಕಿರುವ ಚುನಾವಣಾ ಆಯೋಗ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ ಎಂದಿದೆ. ಉನ್ನತಮಟ್ಟದ ತನಿಖೆ ನಡೆಸುವ ಕುರಿತಂತೆಯೂ ಭರವಸೆ ನೀಡಿದೆ. ಈ ಪ್ರಕರಣ, ಚುನಾವಣಾ ಆಯೋಗದ ಒಳಗೆ ಎಲ್ಲವೂ ಚೆನ್ನಾಗಿಲ್ಲ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಚುನಾವಣಾ ಆಯೋಗದೊಳಗಿನ ಅಕ್ರಮಗಳನ್ನು ಸರಿಪಡಿಸದೇ, ಹೊರಗಿನ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಆದುದರಿಂದ ಮೊದಲು ಸೋರುತ್ತಿರುವ ಆಯೋಗದ ಮನೆಯ ಮಾಳಿಗೆಯನ್ನು ದುರಸ್ತಿ ಮಾಡಬೇಕಾಗಿದೆ. ಒಳಗಿನ ಮಾಹಿತಿಯನ್ನು ಸೋರಿಕೆ ಮಾಡಿದ ಸಿಬ್ಬಂದಿಗೆ ಇವಿಎಂನಂತಹ ಮತಯಂತ್ರಗಳ ಜೊತೆಗೂ ಆಟವಾಡಲು ಸಾಧ್ಯ. ಈ ಸೋರಿಕೆ ಮುಂದಿನ ಚುನಾವಣೆಯಲ್ಲಿ ತನ್ನದೇ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಚುನಾವಣೆಯಲ್ಲಿ ತಮಗೆ ಪೂರಕವಾದ ಫಲಿತಾಂಶ ದೊರಕದೇ ಇದ್ದಲ್ಲಿ, ಪಕ್ಷಗಳು ಚುನಾವಣಾ ದಿನಾಂಕದ ಸೋರಿಕೆಯನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲನ್ನು ಏರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ‘ಚುನಾವಣೆಯಲ್ಲಿ ಇವಿಎಂ ಸುರಕ್ಷಿತ’ ಎಂಬ ತನ್ನ ಹೇಳಿಕೆಯನ್ನು ಮತ್ತೊಮ್ಮೆ ಮರು ಪರಿಶೀಲಿಸಲು ಈ ಸೋರಿಕೆಯ ಘಟನೆಯೇ ಧಾರಾಳ ಸಾಕು. ಇನ್ನು ಯಾವ ಯಾವ ಮಾಹಿತಿಗಳು ಬೇರೆ ಬೇರೆ ಪಕ್ಷಗಳಿಗೆ ಸೋರಿಕೆಯಾಗಿವೆ, ಇದರ ಹಿಂದಿರುವವರು ಯಾರು ಎನ್ನುವುದು ತನಿಖೆಗೊಳಪಡಬೇಕಾಗಿದೆ.

ಸಾಧಾರಣವಾಗಿ, ಇಂತಹ ಸೋರಿಕೆಯಾದರೆ ಸಂಸ್ಥೆಯ ಮುಖ್ಯಸ್ಥರು ಅದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆದರೆ ಇಲ್ಲಿ ಚುನಾವಣಾಯುಕ್ತರು ರಾಜಕಾರಣಿಯಲ್ಲದೇ ಇದ್ದುದರಿಂದ, ಯಾರೂ ಅಂತಹ ಬೇಡಿಕೆಯಯನ್ನು ಇಟ್ಟಿಲ್ಲ. ಚುನಾವಣಾ ಆಯೋಗದೊಳಗೆ ನಡೆಯುವ ಅಕ್ರಮಗಳು ನೇರವಾಗಿ ಪ್ರಜಾಸತ್ತೆಯ ಮೇಲೆ ಪರಿಣಾಮ ಬೀರಲಿರುವುದರಿಂದ, ಈ ಸೋರಿಕೆಯ ಹಿಂದಿರುವ ಜಾಲ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸವಾಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರಂಗೇರಿದೆ. ರಾಹುಲ್‌ಗಾಂಧಿಯವರ ಪ್ರವಾಸ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿರುವುದು ಬಿಜೆಪಿಯವರ ನಿದ್ದೆಗೆಡಿಸಿದೆ. ಒಂದೆಡೆ ಲಿಂಗಾಯತರ ಮತಗಳನ್ನು ಕಳೆದುಕೊಳ್ಳುವ ಭಯ ಬಿಜೆಪಿಯನ್ನು ಆವರಿಸಿದೆ. ಈ ಕಾರಣಕ್ಕೇ ಇರಬೇಕು, ಕುವೆಂಪು ಅವರ ಸಮಾಧಿಗೆ ಭೇಟಿ ನೀಡಿ ಒಕ್ಕಲಿಗರನ್ನು ಮೆಚ್ಚಿಸುವ ಕಾರ್ಯಕ್ಕೆ ಅಮಿತ್ ಶಾ ಇಳಿದಿದ್ದಾರೆ.

ಆದರೆ ವಿಶ್ವಮಾನವ ತತ್ವದ ಮೇಲೆ ಅಗಾಧ ನಂಬಿಕೆಯಿಟ್ಟಿರುವ ಕುವೆಂಪು ಅವರನ್ನು ಹೈಜಾಕ್ ಮಾಡುವುದು, ಅವರನ್ನು ಮುಂದಿಟ್ಟು ಒಕ್ಕಲಿಗರನ್ನು ಮೆಚ್ಚಿಸುವುದು ಅಸಾಧ್ಯ. ಕುವೆಂಪು ಅವರ ವಿಚಾರಧಾರೆ ಅಮಿತ್ ಶಾ ಪಕ್ಷದ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸುವುದರಿಂದ ಈ ಭೇಟಿ ಬಿಜೆಪಿಗೆ ತಿರುಗುಬಾಣವಾಗಬಹುದು. ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ‘‘ಯಡಿಯೂರಪ್ಪ ಸರಕಾರ ಅತ್ಯಂತ ಭ್ರಷ್ಟ ಸರಕಾರವಾಗಿದೆ’’ ಎಂದು ಅಮಿತ್ ಶಾ ಬಾಯಿ ತಪ್ಪಿ ಹೇಳಿದ್ದಾರೆ. ಹೇಳಿಕೆ ಬಾಯಿ ತಪ್ಪಿಯೇ ಆಡಿರಬಹುದು, ಆದರೆ ಆಳದಲ್ಲಿ ಯಡಿಯೂರಪ್ಪ ಕುರಿತಂತೆ ಕೇಂದ್ರ ವರಿಷ್ಠರಿಗೆ ಅಸಮಾಧಾನಗಳಿವೆ. ಯಡಿಯೂರಪ್ಪ ಅವರ ಕೈಯಿಂದ ಪಕ್ಷದ ಚುಕ್ಕಾಣಿಯನ್ನು ನಯವಾಗಿ ಕಿತ್ತು, ಅದನ್ನು ಆರೆಸ್ಸೆಸ್‌ನ ಸಂತೋಷ್ ಕೈಗೆ ಒಪ್ಪಿಸುವ ಯೋಜನೆಯೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ಆ ಯೋಜನೆ ಯಶಸ್ವಿಯಾಗಬೇಕಾದರೆ ಈ ಬಾರಿ ಬಿಜೆಪಿ ಸೋಲಲೇಬೇಕು. ಸೋಲಿನ ನೈತಿಕ ಹೊಣೆ ಹೊತ್ತು ಸ್ವತಃ ಯಡಿಯೂರಪ್ಪರೇ ಇಳಿಯುವಂತೆ ಮಾಡುವುದು ಆರೆಸ್ಸೆಸ್ ತಂತ್ರ. ಆದುದರಿಂದ ಅಮಿತ್ ಶಾ ಬಾಯಿಯಿಂದ ಬಿದ್ದ ಯಡಿಯೂರಪ್ಪ ವಿರೋಧಿ ಹೇಳಿಕೆ ಒಂದು ಯಡವಟ್ಟು ಎಂದರೆ ಅದನ್ನು ಪೂರ್ತಿಯಾಗಿ ನಂಬುವುದು ಕಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News