ಗಂಗೆಯಲ್ಲಿ ಮಿಂದೆದ್ದರೆ ಪುಣ್ಯ ಅಲ್ಲ, ಅಪಾಯ ಕಟ್ಟಿಟ್ಟ ಬುತ್ತಿ

Update: 2018-03-28 10:31 GMT

ಅಲಹಾಬಾದ್,ಮಾ.28 : ಇಲ್ಲಿನ ಗಂಗೆ ಮತ್ತು ಯಮುನಾ ನದಿಗಳ ಸಂಗಮ ಸ್ಥಳದಲ್ಲಿ ನೀರಿನಲ್ಲಿ ಮುಳುಗೆದ್ದರೆ ಸಾಕು, ಅನುಮತಿಸಲ್ಪಟ್ಟ ಮಿತಿಗಿಂತ 5ರಿಂದ 13 ಪಟ್ಟು ಅಧಿಕ ಅಪಾಯಕಾರಿ ಫೀಕಲ್ ಕೋಲಿಫಾರ್ಮ್ ನಮ್ಮ ದೇಹ ಪ್ರವೇಶಿಸಬಹುದೆಂದು  ಅಧಿಕೃತ ಅಂಕಿಸಂಖ್ಯೆಗಳಿಂದ ತಿಳಿದು ಬಂದಿದೆ. ಈ ನದಿಯ ನೀರು ಮೀಯಲು ಅಸುರಕ್ಷಿತ ಎಂದೂ ಹೇಳಲಾಗಿದೆ. ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ  ಮಲದಲ್ಲಿ ಕಂಡು ಬರುತ್ತದೆ. ಅಸಂಸ್ಕರಿಸಿದ ತ್ಯಾಜ್ಯ ನೀರು ನದಿಗೆ ಸೇರಿದಾಗ ನೀರು ಮಲಿನವಾಗಿ ಮನುಷ್ಯರಿಗೆ ಹಾನಿಕರವಾಗಿ ಪರಿಣಮಿಸುತ್ತದೆ.

ಫೀಕಲ್ ಕೋಲಿಫಾರ್ಮ್ ಅನುಮತಿಸಿದ ಮಿತಿ ಪ್ರತಿ 100 ಎಂಎಲ್ ಗೆ 2,500 ಎಂಪಿಎನ್ ಆಗಿದ್ದರೆ,  ಅಪೇಕ್ಷಿತ ಮಟ್ಟ ಪ್ರತಿ 100 ಎಂಎಲ್ ಗೆ 500 ಎಂಪಿಎನ್ ಆಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಸಂಖ್ಯೆಗಳ ಪ್ರಕಾರ  ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಮಾಲಿನ್ಯ ಅಧಿಕವಾಗಿದೆ.

ಉತ್ತರ ಪ್ರದೇಶದಲ್ಲಿ 16 ಕಡೆಗಳ ಜಲ ಸಂಪನ್ಮೂಲಗಳಲ್ಲಿನ ಫೀಕಲ್ ಕಾಲಿಫಾರ್ಮ್ ಮಟ್ಟ ಪರಿಶೀಲಿಸಲಾಗಿ ಇವುಗಳಲ್ಲಿ ಶೇ 50ರಷ್ಟು  ಕಡೆಗಳಲ್ಲಿ  ಈ ಅಪಾಯಕಾರಿ ಕಾಲಿಫಾರ್ಮ್ ಹೆಚ್ಚಾಗಿತ್ತು. ಕಾನ್ಪುರ, ಅಲಹಾಬಾದ್ ಹಾಗೂ ವಾರಣಾಸಿಯಲ್ಲಿ ನದಿ ನೀರು  ಅತ್ಯಂತ ಹೆಚ್ಚು ಮಲಿನವಾಗಿದೆ. ವಾರಣಾಸಿಯ ಮಾಲವಿಯ ಸೇತುವೆ ಪಕ್ಕ ಎಫ್‍ಸಿ ಮಟ್ಟ ಅನುಮತಿಸಲ್ಪಟ್ಟ ಮಿತಿಗಿಂತ 9ರಿಂದ 2-20 ಪಟ್ಟು ಅಧಿಕವಾಗಿದೆ.

ಬಿಹಾರದಲ್ಲಿ ತಪಾಸಿಸಲ್ಪಟ್ಟ  ಒಟ್ಟು ಜಲಮೂಲಗಳ ಪೈಕಿ ಶೇ 88ರಲ್ಲಿ ಹಾನಿಕಾರಕ ಅಂಶಗಳು ಅತ್ಯಧಿಕವಾಗಿವೆ.  ಗಂಗೆ ಹರಿಯುವ ರಾಜ್ಯಗಳಾದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ  ನೀರು ತೀರಾ ಮಲಿನವಾಗಿರುವ ಹೆಚ್ಚಿನ ಕಡೆ ನೀರಿನಲ್ಲಿ ಮಲ ಸೇರಿಕೊಂಡಿದ್ದು  ಅವುಗಳು ಉಪಯೋಗಿಸಲು ಅಯೋಗ್ಯವಾಗಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News