ರಾಜ್ಯ ಚುನಾವಣೆಯ ರಾಯಭಾರಿಯಾಗಿ ರಾಹುಲ್ ದ್ರಾವಿಡ್

Update: 2018-03-28 13:12 GMT

ಬೆಂಗಳೂರು, ಮಾ.28: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬ ಮತದಾರರು ಮತ ಚಲಾವಣೆಗೆ ಪ್ರೇರೇಪಣೆ ನೀಡುವ ಸಲುವಾಗಿ ಚಿತ್ರಮಂದಿರ, ಟಿವಿ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ಬುಧವಾರ ಚುನಾವಣಾ ಆಯೋಗದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ, ಮತದಾನದ ಕುರಿತು ಅರಿವು ಮೂಡಿಸಲು ಕ್ರಿಕೆಟ್‌ಪಟು ರಾಹುಲ್ ದ್ರಾವಿಡ್ ಭಾವಚಿತ್ರವನ್ನೊಳಗೊಂಡ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸಾಮಾಜಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹಾಗೂ ಯುವ ಜನತೆಗೆ ಸ್ಫೂರ್ತಿಯ ನಾಯಕರಾಗಿದ್ದಾರೆ. ಹೀಗಾಗಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕ್ರಿಕೆಟಿಗ ರಾಹುಲ್ ದ್ರಾವಿಡ್‌ರನ್ನು ರಾಜ್ಯ ಚುನಾವಣೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣಾ ಗೀತೆ: ಯುವ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ನಿಟ್ಟಿನಲ್ಲಿ ನಿರ್ದೇಶಕ, ಚಿತ್ರಸಾಹಿತಿ ಯೋಗರಾಜ್‌ಭಟ್ ಚುನಾವಣಾ ಗೀತೆಯನ್ನು ರಚಿಸಿ ಕೊಟ್ಟಿದ್ದಾರೆ. ಈ ಗೀತೆಗೆ ಸಂಬಂಧಿಸಿದ ದೃಶ್ಯಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ಹಿನ್ನೆಲೆ ಗಾಯಕ ವಿಜಯಾ ಪ್ರಕಾಶ್ ಹಾಡಿದ್ದಾರೆ. ಮುಂದಿನ ವಾರದಲ್ಲಿ ಚುನಾವಣಾ ಗೀತೆ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.

ಇನ್ನು ಹಲವು ರಾಯಭಾರಿಗಳು: ಕ್ರಿಕೆಟ್ ಪಟು ರಾಹುಲ್‌ದ್ರಾವಿಡ್ ಜೊತೆಗೆ ಇನ್ನು ಹಲವು ಜನಪ್ರಿಯ ವ್ಯಕ್ತಿಗಳು ಮತದಾನದ ಕುರಿತು ಅರಿವು ಮೂಡಿಸಲು ಚುನಾವಣಾ ಆಯೋಗದ ರಾಯಭಾರಿಗಳಾಗಲಿದ್ದು, ಹಂತ ಹಂತವಾಗಿ ಚುನಾವಣಾ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಕ್ರಿಕೆಟ್‌ಪಟು ರಾಹುಲ್ ದ್ರಾವಿಡ್ ಭಾವಚಿತ್ರ ಹೊಂದಿರುವ ಚುನಾವಣಾ ಜಾಗೃತಿ ಭಿತ್ತಿಚಿತ್ರದಲ್ಲಿ ‘ನಿಮ್ಮ ಮತ ಚಲಾಯಿಸಿ ಕರ್ನಾಟಕ ಗೆಲ್ಲುವಂತೆ ಮಾಡಿರಿ’, ‘ನಿಮ್ಮ ಮತ ಚಲಾಯಿಸಿ ಕರ್ನಾಟಕವನ್ನು ಗೆಲ್ಲಿಸಿ’, ‘ನಾವೆಲ್ಲರೂ ಪ್ರಜಾಪ್ರಭುತ್ವ ಗೆಲ್ಲಲು ಆಡೋಣ, ನೈತಿಕ ಚುನಾವಣೆಗಳಿಗೆ ಬೆಂಬಲಿಸೋಣ’ ಎಂಬ ತಲೆ ಬರಹಗಳು ಆಕರ್ಷಿಸುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News