ಅನುದಾನ ಹಂಚಿಕೆಯಲ್ಲಿ ಅನ್ಯಾಯ

Update: 2018-03-29 04:19 GMT

ಕೇಂದ್ರ ಸರಕಾರದ ಅನುದಾನ ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮತ್ತು 15ನೇ ಹಣಕಾಸು ಆಯೋಗದ ಬಗ್ಗೆ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಅಸಮಾಧಾನದ ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ತನ್ನ ಲೋಪವನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಅಭಿವೃದ್ಧಿಶೀಲ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಕೇಂದ್ರದ ಅನುದಾನ ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇರಳದ ಹಣಕಾಸು ಮಂತ್ರಿ ಥಾಮಸ್ ಐಸಾಕ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಆಯೋಗದ ಅಧ್ಯಕ್ಷರು ನೀಡಿದ ಭರವಸೆ ಗಮನಾರ್ಹವಾಗಿದೆ.

ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳನ್ನು ತಾರತಮ್ಯದಿಂದಲೇ ನೋಡುತ್ತಿದೆ. ಅಂತಲೇ ತಮಿಳುನಾಡಿನಲ್ಲಿ 50ರ ದಶಕದಲ್ಲೇ ಪ್ರತ್ಯೇಕತಾವಾದಿ ಚಳವಳಿ ಮೊಳಕೆಯೊಡೆಯಿತು. 2014ರಲ್ಲಿ ಮೋದಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಪಕ್ಷಪಾತ ಹೆಚ್ಚುತ್ತಲೇ ಬಂತು. ಇದರಿಂದ ದಕ್ಷಿಣದ ರಾಜ್ಯಗಳಲ್ಲಿ ಅಸಮಾಧಾನ ತೀವ್ರಗೊಂಡಿತು. ಈ ಅಸಮಾಧಾನದ ಪರಿಣಾಮವಾಗಿಯೇ ತೆಲುಗು ದೇಶಂ ಪಕ್ಷ ಇತ್ತೀಚೆಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂತು. ಅನುದಾನ ಹಂಚಿಕೆಯಲ್ಲಿ ಅಸಮಾನತೆ, ಅಭಿವೃದ್ಧಿ ಯೋಜನೆಗಳಲ್ಲಿ ಪಕ್ಷಪಾತ ಹಾಗೂ ಅತ್ಯಂತ ನಿರ್ದಯವಾಗಿ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಇವೆಲ್ಲವುಗಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಲೇ ಇವೆ. ಈ ತಾರತಮ್ಯ ನೀತಿಯನ್ನು ಪ್ರತಿಭಟಿಸಿ ಎಪ್ರಿಲ್ 10ರಂದು ದಕ್ಷಿಣ ಭಾರತದ ರಾಜ್ಯಗಳ ಹಣಕಾಸು ಸಚಿವರ ಸಭೆಯನ್ನು ಕರೆಯಲಾಗಿದೆ ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ತಿಳಿಸಿದ್ದಾರೆ.

ಅನುದಾನ ಹಂಚಿಕೆ ಕುರಿತಂತೆ ಕೇಂದ್ರ ಸರಕಾರ ಅನುಸರಿಸುತ್ತಿರುವ ಮಾನದಂಡಗಳ ಬಗ್ಗೆ ಮರುಪರಿಶೀಲಿಸಬೇಕೆಂದು ಅವರು ಒತ್ತಾಯಿಸುತ್ತಲೇ ಇದ್ದಾರೆ. ಕರ್ನಾಟಕದಿಂದ ಪಾವತಿಯಾಗುತ್ತಿರುವ ಅರ್ಧದಷ್ಟು ಹಣವನ್ನು ಕೂಡಾ ಅನುದಾನದ ರೂಪದಲ್ಲಿ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ ಹೊಂದಿದ ರಾಷ್ಟ್ರ. ಇಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು. ಇದು ಕೇಂದ್ರ ಸರಕಾರದ ಕರ್ತವ್ಯ. ಆದರೆ, ಕೇಂದ್ರ ಸರಕಾರ ತನ್ನ ಕರ್ತವ್ಯ ಪಾಲನೆಯಲ್ಲಿ ವಿಫಲವಾಗುತ್ತಲೇ ಬಂದಿದೆ. 80ರ ದಶಕದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ರಾಜ್ಯಗಳ ಸಂವಿಧಾನಬದ್ಧ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದರು.

ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರಕ್ಕೆ ತೆರಿಗೆಯನ್ನು ಸಂಗ್ರಹಿಸಿಕೊಡುವ ಮಾಂಡಲಿಕರಂತೆ ಮೋದಿ ಸರಕಾರ ನೋಡಿಕೊಳ್ಳುತ್ತಿದೆ. ಇನ್ನೊಂದೆಡೆ ಕೇಂದ್ರದ ಅಧಿಕಾರಾರೂಢ ಪಕ್ಷವಾದ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಅಂತಹವರು ಕರ್ನಾಟಕಕ್ಕೆ ಬಂದು ಕರ್ನಾಟಕ ಸರಕಾರಕ್ಕೆ ಕೇಂದ್ರ ಸರಕಾರ ನೀಡಿದ ಅನುದಾನದ ಖರ್ಚಿನ ಲೆಕ್ಕವನ್ನು ಕೊಡಬೇಕೆಂದು ಕೇಳುತ್ತಿದ್ದಾರೆ. ಜನತಂತ್ರದ ಪ್ರಾಥಮಿಕ ಪಾಠವೂ ಗೊತ್ತಿಲ್ಲದ ಇಂತಹವರಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹದಗೆಡುತ್ತಿದೆ.

ಭಾರತದಂತಹ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಕರ್ನಾಟಕದಂತಹ ರಾಜ್ಯಗಳು ಕೇಂದ್ರದ ಗುಲಾಮರಾಗಿರುವುದಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮನಗಾಣ ಬೇಕಾಗಿದೆ. ಕೇಂದ್ರ ಸರಕಾರಕ್ಕೆ ದಕ್ಷಿಣ ಭಾರತದ ರಾಜ್ಯಗಳು ತೆರಿಗೆ ರೂಪದಲ್ಲಿ ಸಾಕಷ್ಟು ಹಣವನ್ನು ನೀಡಿದರೂ ಕೇಂದ್ರದಿಂದ ರಾಜ್ಯಗಳಿಗೆ ಬರುತ್ತಿರುವ ಅನುದಾನದ ಮೊತ್ತ ಅತ್ಯಂತ ಕಡಿಮೆಯಾಗಿದೆ. ಉದಾಹರಣೆಗೆ ಉತ್ತರಪ್ರದೇಶ ಕೇಂದ್ರ ಸರಕಾರಕ್ಕೆ ಕಟ್ಟುವ ಪ್ರತಿಯೊಂದು ರೂಪಾಯಿಗೆ 1.79 ರೂ. ಅನುದಾನ ಪಡೆಯುತ್ತಿದೆ. ಆದರೆ, ಕರ್ನಾಟಕ ಸರಕಾರ ಕೇಂದ್ರಕ್ಕೆ ಕಟ್ಟುತ್ತಿರುವ 1 ರೂ. ತೆರಿಗೆಗೆ ಪ್ರತಿಯಾಗಿ ಕೇವಲ 0.47 ಪೈಸೆ ಪಡೆಯುತ್ತಿದೆ.

ಕೇಂದ್ರಕ್ಕೆ ರಾಜ್ಯದಿಂದ ಒಟ್ಟಾರೆಯಾಗಿ ಶೇ.9.47ರಷ್ಟು ತೆರಿಗೆ ಪಾವತಿಯಾಗುತ್ತಿದೆ. ಈ ಪೈಕಿ ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಅನುದಾನದ ಪ್ರಮಾಣ ಶೇ.4.6ರಷ್ಟು ಮಾತ್ರ. ತುಲನಾತ್ಮಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ತಾವು ಕೇಂದ್ರದಿಂದ ಪಡೆಯುತ್ತಿರುವ ಅನುದಾನಕ್ಕಿಂತ ಹೆಚ್ಚಿನ ಪಾಲನ್ನು ಕೇಂದ್ರ ಸರಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತಿದೆ. ರಾಜ್ಯಗಳ ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು ಕೇಂದ್ರ ಸರಕಾರ ಅನುದಾನ ಹಂಚಿಕೆ ಮಾಡುತ್ತಿರುವುದು ಈ ಅನ್ಯಾಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕೇಂದ್ರ ಸರಕಾರ ತಮ್ಮ ಮೇಲೆ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆಯೆಂಬ ಅಸಮಾಧಾನದ ಕೂಗು ದಕ್ಷಿಣ ಭಾರತದ ರಾಜ್ಯಗಳಿಂದ ಕೇಳಿಬರುತ್ತಿದೆ. ಸಂವಿಧಾನಾತ್ಮಕವಾಗಿ ಹಿಂದಿಯೊಂದೇ ರಾಷ್ಟ್ರಭಾಷೆಯಲ್ಲ. ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ರಾಷ್ಟ್ರಭಾಷೆಗಳಾಗಿವೆ. ವಾಸ್ತವಾಂಶ ಹೀಗಿರುವಾಗ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಹೇರುತ್ತಿರುವುದು ಸರಿಯಲ್ಲ. ಹಿಂದಿ ಓದಲು ಬಾರದ ದಕ್ಷಿಣ ಭಾರತದ ರಾಜ್ಯಗಳ ಕೇಂದ್ರ ಸರಕಾರದ ಕಚೇರಿಗಳಲ್ಲಿ ಮತ್ತು ರೈಲ್ವೆ ಇಲಾಖೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ.

ಕೇಂದ್ರ ಸರಕಾರ ನೆಹರೂ ಕಾಲದಿಂದ ತ್ರಿಭಾಷಾ ಸೂತ್ರವನ್ನು ಅನುಸರಿಸಿಕೊಂಡು ಬಂದಿದೆ. ಶಿಕ್ಷಣದಲ್ಲಿ ಒಂದು ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಭಾಷೆ ಇನ್ನೊಂದು ಯಾವುದಾದರೂ ಭಾರತೀಯ ಭಾಷೆಯನ್ನು ಐಚ್ಛಿಕವಾಗಿ ಕಲಿಯುವ ಅವಕಾಶವಿದೆ. ಆದರೆ, ಕೇಂದ್ರ ಸರಕಾರ ಇದನ್ನೇ ಬಳಸಿಕೊಂಡು ಹಿಂದಿ ಭಾಷೆಯನ್ನು ಹೇರುತ್ತಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಭಾವನೆಗಳನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಂಡು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದರ ಜೊತೆಗೆ ಹಿಂದಿ ಭಾಷಾ ಹೇರಿಕೆಯನ್ನು ಕೈಬಿಡಬೇಕು. ರೈಲ್ವೆ ಇಲಾಖೆ ಸೇರಿದಂತೆ ಕೇಂದ್ರ ಸರಕಾರದ ಕಚೇರಿಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಬೇಕು. ಕರ್ನಾಟಕದಂತಹ ರಾಜ್ಯಗಳಲ್ಲಿ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡುವಾಗ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರುಗಳಿವೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ದಕ್ಷಿಣದ ರಾಜ್ಯಗಳಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯುತ್ತದೆ. ಯಾವುದೇ ಕಾರಣಕ್ಕೂ ಅಂತಹ ಪ್ರತ್ಯೇಕತಾ ಮನೋಭಾವಕ್ಕೆ ಅವಕಾಶ ಮಾಡಿಕೊಡಬಾರದು. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡಂತೆ ಭಾಷಾ ನೀತಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News