ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ದುರದೃಷ್ಟಕರ: ಜಾವಡೇಕರ್

Update: 2018-03-29 12:59 GMT

ಹೊಸದಿಲ್ಲಿ, ಮಾ.29: ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದುರದೃಷ್ಟಕರವಾಗಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

 ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ವ್ಯಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ.ಎಸ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿದಂತೆಯೇ ಇವರನ್ನೂ ಪೊಲೀಸರು ಪತ್ತೆಹಚ್ಚಿ ಪತ್ತೆ ಕಠಿಣ ಶಿಕ್ಷೆಗೆ ಗುರಿಪಡಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅಲ್ಲದೆ ಆಂತರಿಕ ತನಿಖೆಗೂ ಆದೇಶಿಸಲಾಗಿದೆ ಎಂದ ಸಚಿವರು, ಈ ಪ್ರಕರಣದಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಂಟಾಗಿರುವ ನೋವು, ನಿರಾಶೆ ಹಾಗೂ ಹತಾಶೆಯನ್ನು ಓರ್ವ ಸಂವೇದನಾಶೀಲ ಪೋಷಕನಾಗಿ ತಾನು ಅರಿತಿದ್ದೇನೆ . ಕಳೆದ ರಾತ್ರಿ ತಾನು ನಿದ್ರಿಸಲಿಲ್ಲ . ಮರು ಪರೀಕ್ಷೆ ಯಾವುದೇ ಅಡ್ಡಿಯಿಲ್ಲದೆ ಸುಸೂತ್ರವಾಗಿ ನಡೆಯುವಂತಾಗಲು ಎಲ್ಲರೂ ಪ್ರಯತ್ನಿಸಬೇಕು. ಯಾಕೆಂದರೆ ದುಷ್ಕರ್ಮಿಗಳು ವಂಚನೆಗೆ ಹೊಸ ವಿಧಾನವನ್ನು ಹುಡುಕುತ್ತಿರುತ್ತಾರೆ ಎಂದವರು ಹೇಳಿದರು.

 ಪರೀಕ್ಷೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುವುದಕ್ಕೆ ಸಿಬಿಎಸ್‌ಇ ಹೆಸರಾಗಿತ್ತು. ಈ ಕಾರಣದಿಂದಲೇ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸುವ ಹೊಣೆಯನ್ನು ಸುಪ್ರೀಂಕೋರ್ಟ್ ಸಿಬಿಎಸ್‌ಇಗೆ ವಹಿಸಿತ್ತು ಎಂದು ಜಾವಡೇಕರ್ ತಿಳಿಸಿದರು. ವ್ಯವಸ್ಥೆಯನ್ನು ಸುಧಾರಿಸಿ ಅಪರಾಧಿಗಳು ಒಡ್ಡಿರುವ ಸವಾಲನ್ನು ಎದುರಿಸಲು ಸರ್ವಪ್ರಯತ್ನ ನಡೆಸಲಾಗುವುದು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News