ಟೀಕೆ-ವಿಮರ್ಶೆ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ: ಡಾ.ಕೆ.ಮರುಳಸಿದ್ದಪ್ಪ

Update: 2018-04-01 16:15 GMT

ಬೆಂಗಳೂರು, ಎ.1: ಇಂದಿನ ಸಮಾಜದಲ್ಲಿ ಟೀಕೆ, ವಿಮರ್ಶೆಗಳು ಯಾರಿಗೂ ಇಷ್ಟವಾಗುವುದಿಲ್ಲ. ಪರಸ್ಪರ ಹೊಗಳಿಕೊಂಡು ಬೂಟಾಟಿಕೆ ಸಮಾಜ ಕಟ್ಟಲು ಉತ್ಸಾಹ ತೋರುತ್ತಾರೆ. ಆದರೆ, ಟೀಕೆ-ವಿಮರ್ಶೆಗಳು ಎದುರಾದಾಗ ಆರೋಗ್ಯ ಪೂರ್ಣವಾಗಿ ಸ್ವೀಕರಿಸುವ ವಿವೇಚನೆಯ ಅಗತ್ಯವಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.

ರವಿವಾರ ನಗರದ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಆಯೋಜಿಸಿದ್ದ ‘ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶದ್ತಿ' ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕೆ-ವಿಮರ್ಶೆಗಳು ಎದುರಾದಾಗ ಆತ್ಮಾವಲೋಕನ ಮಾಡಿಕೊಂಡು ಸಮನಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ಡಾ.ಎಂ.ಎಂ.ಕಲಬುರ್ಗಿ, ಪ್ರೊ.ಜಿ.ಕೆ.ಗೋವಿಂದರಾವ್ ಜಗತ್‌ಪ್ರಸಿದ್ಧ ಜಗಳಗಂಟರು. ಲಂಕೇಶ್ ಆದಿಯಾಗಿ ಬಹುತೇಕ ಜಗಳಗಂಟ ವಿಚಾರವಾದಿಗಳು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಪ್ರಸ್ತುತ ಸಂದರ್ಭದಲ್ಲಿ ‘ವಿಚಾರವಾದಿ’ ಎಂದರೆ ದೇವರು-ಧರ್ಮ ತಿರಿಸ್ಕರಿಸುವವರು ಎನ್ನುವ ಮಾತಿದೆ. ಡಾ.ಎಂ.ಎಂ.ಕಲಬುರ್ಗಿ ತಾವು ನಂಬಿದ ಶರಣ ಸಾಹಿತ್ಯ ಹಾಗೂ ವಚನಗಳನ್ನು ಸೃಜನಶೀಲವಾಗಿ ವ್ಯಾಖ್ಯಾನಿಸಿದರು. ಇಂತಹ ಆರೋಗ್ಯಪೂರ್ಣ ನಿಲುವಿನ ಕಲಬುರ್ಗಿ ಅವರನ್ನು ಪಾತಕಿಗಳು ಹತ್ಯೆ ಮಾಡಿದರು. ಅವರು ವ್ಯಕ್ತಿಯನ್ನು ಕೊಂದಿರಬಹುದು. ಆದರೆ, ವಿಚಾರ, ತತ್ವ-ನಂಬಿಕೆಗಳನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕನ್ನಡಕ್ಕೆ ಧರ್ಮ ಎಂಬುದು ಇದ್ದರೆ ಅದು ಲಿಂಗಾಯತ ಧರ್ಮ ಎಂದು ಮೊದಲಿಗೆ ಹೇಳಿದರು ಕಲಬುರ್ಗಿ. ಇಂದು ಲಿಂಗಾಯತ ಧರ್ಮ ಚಳವಳಿ ಆರಂಭವಾಗಿದ್ದು, ಕಲಬುರ್ಗಿ ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅಂಥವರ ಹತ್ಯೆ ಬಳಿಕ ದೇಶದಲ್ಲಿ ವಿಚಾರವಾದಕ್ಕೆ ಬಲ ಬಂದಿದೆ. ಈ ಹತ್ಯೆಗಳು ವ್ಯರ್ಥವಾಗದೆ ಹೊಸ ಬಗೆಯ ಚಲನೆಗೆ ಕಾರಣವಾಗಿವೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಜಿ.ಕೆ.ಗೋವಿಂದರಾವ್, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದಿ ಪ್ರಕೃತಿ. ಈ ಪ್ರಕೃತಿಗೆ ಮನುಷ್ಯ ಮುಖ್ಯವೇ ಹೊರತು ಜಾತಿ, ಧರ್ಮ, ಮತಗಳಲ್ಲ. ಮನುಷ್ಯ ಅಹಂಕಾರ ತೊರೆದು ಶೂನ್ಯಕ್ಕೆ ಹೋದಾಗ ಜಗತ್ತಿನ ಪ್ರವೇಶ ಪಡೆಯುತ್ತಾನೆ. ಆದರೆ, ನಾವು ಜಾತಿ, ಧರ್ಮಗಳ ಸಂಕೋಲೆಗೆ ಸಿಲುಕು ನಲುಗುತ್ತಿದ್ದೇವೆ. ಈ ಜಗತ್ತಿನಲ್ಲಿ ಪ್ರಕೃತಿಗಿಂತ ದೊಡ್ಡ ಪ್ರಜಾಪ್ರಭುತ್ವ ಮತ್ತೊಂದಿಲ್ಲ ಎಂದು ಹೇಳಿದರು.

ನಾನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿದ್ದರಿಂದ ಬಹಳ ವರ್ಷ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಇರಲಿಲ್ಲ. ನನ್ನ 45ನೇ ವಯಸಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬಂತು. ಕುವೆಂಪು ಅವರ ಕಾನೂನು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಶಿವರಾಮಕಾರಂತರ ಮರಳಿ ಮಣ್ಣಿಗೆಯಂತಹ ಅದ್ಭುತ ಕೃತಿಗಳನ್ನು ಓದಿದ ಬಳಿಕ ಕನ್ನಡ ಸಾಹಿತ್ಯದ ಸತ್ವ ಗೋಚರಿಸಿತು ಎಂದ ಅವರು, ಮಾತೃ ಭಾಷೆಯ ಓದಿನಲ್ಲಿ ಸಿಗುವ ಆಪ್ತತೆ ಇಂಗ್ಲಿಷ್‌ನಲ್ಲಿ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಡಾ.ಎಂ.ಎಂ.ಕಲಬುರ್ಗಿ ಅವರ ಮಾರ್ಗ -1ರಲ್ಲಿ ಆಯ್ದ 11 ಲೇಖನಗಳನ್ನು ಡಾ.ಶಶಿಧರ್ ಜಿ.ವೈದ್ಯ ಅವರು ಇಂಗ್ಲಿಷ್‌ಗೆ ಅನುವಾದಿಸಿರುವ ಕೃತಿಯನ್ನು ಲೋರ್ಕಾಪಣೆಗೊಳಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್. ಮಹದೇವಯ್ಯ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಬಸವರಾಜ ಸಬರದ, ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಪ್ರಮುಖರಿದ್ದರು.

‘ರಾಜ್ಯ ಸರಕಾರ 2ಕೋಟಿ ರೂ. ವೆಚ್ಚದಲ್ಲಿ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಘೋಷಿಸಿ ಎರಡು ವರ್ಷ ಕಳೆದರೂ ಇತ್ತ ಗಮನಹರಿಸಿಲ್ಲ’
-ಡಾ.ಬಸವರಾಜ ಸಬರದ, ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News