ಅಮಿತ್ ಶಾ ಪಾಲಿಗೆ ನುಂಗಲಾರದ ತುತ್ತಾಗಿರುವ ದಲಿತರು, ಲಿಂಗಾಯತರು

Update: 2018-04-02 04:08 GMT

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರು ಅಮಿತ್ ಶಾರನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಬರೇ ‘ತಟ್ಟೀರಾಯ’ನ ಪಾತ್ರ ಅಥವಾ ‘ಬೆರ್ಚಪ್ಪ’ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸ್ವತಃ ಬಿಜೆಪಿ ನಾಯಕರಿಗೇ ಯಡಿಯೂರಪ್ಪ ನಾಯಕತ್ವದಲ್ಲಿ ಮತಯಾಚಿಸುವ ಕುರಿತು ಆತ್ಮವಿಶ್ವಾಸವಿದ್ದಂತೆ ಕಾಣುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಬೆನ್ನ ಹಿಂದೆ ಚೂರಿ ಹಿಡಿದು ನಿಂತಿರುವ ತಮ್ಮದೇ ಪಕ್ಷದ ನಾಯಕರಿಗೆ ಅಂಜುತ್ತಾ ಚುನಾವಣಾ ಸಿದ್ಧತೆ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಯಡಿಯೂರಪ್ಪ ನಾಯಕತ್ವವೇ ಒಂದು ತೇಪೆಯಾಗಿದೆ. ಅದೊಂದು ತಾತ್ಕಾಲಿಕ ವ್ಯವಸ್ಥೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಈ ಚುನಾವಣೆ ಮುಗಿಯುವುದರೊಂದಿಗೆ ಯಡಿಯೂರಪ್ಪ ಅವರ ಅಗತ್ಯವೂ ಬಿಜೆಪಿಯೊಳಗೆ ಮುಗಿಯಲಿದೆ. ಇದೇ ಸಂದರ್ಭದಲ್ಲಿ ಉತ್ತರ ಭಾರತದ ರಾಜಕೀಯ ಮನಸ್ಥಿತಿಯನ್ನು ತಲೆಯಲ್ಲಿಟ್ಟುಕೊಂಡು ಅದನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಹೊರಟ ಅಮಿತ್ ಶಾ ಪ್ರಯತ್ನ ಕೈಕೊಟ್ಟಂತೆ ಕಾಣುತ್ತಿದೆ. ಅಮಿತ್ ಶಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಂಕಾಗುತ್ತಿದ್ದಾರೆ. ಅವರ ನಿರಾಶೆ, ಹತಾಶೆಗಳು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿವೆ. ಉತ್ತರ ಭಾರತೀಯತೆಯ ಮೇಲರಿಮೆಯನ್ನು ರಾಜ್ಯದ ಮೇಲೆ ಹೇರಲು ಹೋಗಿ ಹೋಗಿ ಅವರು ಮುಖಭಂಗ ಅನುಭವಿಸುತ್ತಿದ್ದಾರೆ. ಅದರ ಪರಿಣಾಮವಾಗಿ ಅವರ ನಾಲಗೆಯೂ ತೊದಲತೊಡಗಿದೆ. ಹಲವೆಡೆ ಯಡಿಯೂರಪ್ಪರನ್ನೇ ‘ಅತಿ ಭ್ರಷ್ಟ ಮುಖ್ಯಮಂತ್ರಿ’ ಎಂದು ಕರೆದು ನಾಲಗೆ ಕಚ್ಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಸವಾಲು ಮತ್ತು ದಲಿತರ ಆಕ್ರೋಶಗಳನ್ನು ಎದುರಿಸುವ ದಾರಿ ತಿಳಿಯದೆ ಮಾಧ್ಯಮ ಘೋಷಿತ ಚಾಣಕ್ಯ ಬೆವರತೊಡಗಿದ್ದಾರೆ. ಅಮಿತ್ ಶಾ ಕುರಿತಂತೆ ಮಾಧ್ಯಮಗಳ ವೈಭವೀಕರಣಗಳೆಲ್ಲ ನಿಧಾನಕ್ಕೆ ಬಣ್ಣ ಕಳೆದುಕೊಳ್ಳುತ್ತಿವೆ. ಅಮಿತ್ ಶಾ ಅವರ ನಿರೀಕ್ಷೆಗೆ ತಕ್ಕಂತೆ ಜನರು ಸೇರುತ್ತಿಲ್ಲ. ಬಹುಶಃ ದಕ್ಷಿಣ ಭಾರತ ಅಥವಾ ಕರ್ನಾಟಕದ ಬಹು ಸಂಸ್ಕೃತಿ, ವೈವಿಧ್ಯಗಳು ಅಮಿತ್ ಶಾ ಅವರ ಹಿಂದುತ್ವಕ್ಕೆ ದೊಡ್ಡ ತೊಡರುಗಾಲಾಗಿ ಪರಿಣಮಿಸುತ್ತಿವೆ. ಈಗಾಗಲೇ ಸರಕಾರೇತರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ, ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ಒತ್ತಿ ಹೇಳಿದೆ. ಈವರೆಗೆ ಹಿಂದುತ್ವದ ಬಲಿಪಶುವಾಗಿದ್ದ ಲಿಂಗಾಯತ ಧರ್ಮ, ಹೊಸ ಐಡೆಂಟಿಟಿಯನ್ನು ಪಡೆದುಕೊಳ್ಳುವ ಉತ್ಸಾಹದಲ್ಲಿದೆ. ಅದರ ಪರಿಣಾಮವಾಗಿ ಯಡಿಯೂರಪ್ಪರ ಜೊತೆಗಿದ್ದ ಲಿಂಗಾಯತ ಧರ್ಮದ ಮತಗಳು ಈ ಬಾರಿ, ಬಿಜೆಪಿಗೆ ಬೀಳುವುದು ಕಷ್ಟ. ಯಾಕೆಂದರೆ ಲಿಂಗಾಯತ ಧರ್ಮದ ಕುರಿತಂತೆ ಬಿಜೆಪಿ ಮತ್ತು ಆರೆಸ್ಸೆಸ್ ಸ್ಪಷ್ಟ ನಿಲುವನ್ನು ಈವರೆಗೆ ವ್ಯಕ್ತಪಡಿಸಿಲ್ಲ. ಬಿಜೆಪಿಗೆ ಮತ್ತು ಆರೆಸ್ಸೆಸ್‌ಗೆ ಲಿಂಗಾಯತ ಧರ್ಮ ಸ್ವತಂತ್ರವಾಗುವುದು ಇಷ್ಟವಿಲ್ಲ ಎನ್ನುವುದು ಲಿಂಗಾಯತ ನೇತಾರರಿಗೂ ಸ್ಪಷ್ಟವಾಗಿ ಗೊತ್ತಿದೆ. ವೀರಶೈವರು ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿರುವುದರಿಂದ ಲಿಂಗಾಯತರಿಗೆ ನೀಡುವ ಬೆಂಬಲ, ಇಕ್ಕೆಡೆಗಳಲ್ಲಿ ಬಿಜೆಪಿಗೆ ಹಾನಿ ಮಾಡಬಹುದು. ಆದುದರಿಂದಲೇ ಈ ಬಾರಿಯ ಚುನಾವಣಾ ಪ್ರಚಾರ ಯಾತ್ರೆಯಲ್ಲಿ ಅಮಿತ್ ಶಾ ಅವರ ಪಾಲಿಗೆ ಲಿಂಗಾಯತ ಧರ್ಮ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬಿಜೆಪಿಯ ನಿಲುವನ್ನು ಸ್ಬಷ್ಟಪಡಿಸಲು ಅವರು ವಿಫಲರಾಗಿದ್ದಾರೆ. ಈ ಕುರಿತು ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘‘ಲಿಂಗಾಯತ ಧರ್ಮದ ಕುರಿತಂತೆ ರಾಜ್ಯ ಮಾಡಿರುವ ಶಿಫಾರಸು ಇನ್ನೂ ಕೇಂದ್ರಕ್ಕೆ ತಲುಪಿಲ್ಲ’’ ಎಂಬ ಹಸಿಸುಳ್ಳೊಂದನ್ನು ಹೇಳಿದ್ದಾರೆ. ಆದರೆ, ಮಾರ್ಚ್ 26ಕ್ಕೆ ಈ ಶಿಫಾರಸು ಕೇಂದ್ರಕ್ಕೆ ತಲುಪಿದೆ ಎನ್ನುವುದನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಧಿಕೃತವಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಶಿಫಾರಸು ಈಗಾಗಲೇ ತಲುಪಿರುವ ವಿವರಗಳನ್ನು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಅಮಿತ್ ಶಾ ಮೈಸೂರಿನ ಪತ್ರಿಕಾಗೋಷ್ಠಿಯಲ್ಲಿ ‘‘ಶಿಫಾರಸು ಇನ್ನೂ ಕೇಂದ್ರಕ್ಕೆ ತಲುಪಿಲ್ಲ’’ ಎಂದು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಲಿಂಗಾಯತ ಧರ್ಮ ನಿಜಕ್ಕೂ ಹಿಂದೂಧರ್ಮದ ಭಾಗವೆಂದು ಅಮಿತ್ ಶಾ ಬಳಗ ನಂಬಿದೆಯಾದರೆ, ಅದರ ಹೆಸರಿನಲ್ಲೇ ಚುನಾವಣೆಯನ್ನು ಎದುರಿಸಲು ಬಿಜೆಪಿ ಯಾಕೆ ಹಿಂಜರಿಯುತ್ತಿದೆ? ಈ ಕುರಿತು ಇಬ್ಬಗೆಯ ನಿಲುವು ಯಾಕೆ ಬೇಕು? ಹಿಂದೂ ಧರ್ಮವನ್ನು ಸಿದ್ದರಾಮಯ್ಯ ಅವರು ಒಡೆದಿರುವುದು ನಿಜವೇ ಆಗಿದ್ದರೆ, ‘‘ಯಾವ ಕಾರಣಕ್ಕೂ ಲಿಂಗಾಯತ ಧರ್ಮ ಸ್ವತಂತ್ರವಾಗಲು ಅವಕಾಶ ನೀಡುವುದಿಲ್ಲ’’ ಎಂಬ ಹೇಳಿಕೆಯನ್ನು ನೀಡಿ ರಾಜ್ಯದಲ್ಲಿ ಮತ ಯಾಚಿಸಬಹುದಲ್ಲವೇ?

ಇತ್ತ ದಲಿತರ ವಿಷಯದಲ್ಲೂ ಅಮಿತ್ ಶಾ ಎಡವಿದ್ದಾರೆ. ದಲಿತರ ಜೊತೆಗೆ ಸಂವಾದ ಮಾಡಲು ಹೋಗಿ, ಅವಮಾನವನ್ನು ಕೇಳಿ ಪಡೆದುಕೊಂಡಿದ್ದಾರೆ. ಅನಂತಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕುರಿತಂತೆ ನೀಡಿದ ಹೇಳಿಕೆ, ದಲಿತ ಹೋರಾಟಗಾರರನ್ನು ಬೀದಿ ನಾಯಿಗಳಿಗೆ ಹೋಲಿಸಿದ ವಿಷಯಗಳನ್ನು ದಲಿತರು ಅಮಿತ್ ಶಾ ಮುಂದೆ ಪ್ರಸ್ತಾಪಿಸಿದ್ದಾರೆ. ಕನಿಷ್ಠ ಅನಂತಕುಮಾರ್ ಹೆಗಡೆಯವರ ಹೇಳಿಕೆಯನ್ನು ಖಂಡಿಸುತ್ತೇನೆ ಎನ್ನುವ ಎದೆಗಾರಿಕೆಯನ್ನೂ ಅಮಿತ್ ಶಾ ಪ್ರದರ್ಶಿಸಲಿಲ್ಲ. ಬದಲಿಗೆ ‘‘ಅದು ಅವರ ವೈಯಕ್ತಿಕ ಹೇಳಿಕೆ’’ ಎಂದು ಹೇಳಿಕೆ ನುಣುಚಿಕೊಳ್ಳಲು ಯತ್ನಿಸಿದರು. ಅಮಿತ್ ಶಾ ಅವರ ಈ ದ್ವಂದ್ವ ದಲಿತರನ್ನು ಸಹಜವಾಗಿಯೇ ಕೆರಳಿಸಿದೆ. ಸಂವಾದ ನಡೆಯಬೇಕಾದ ಸ್ಥಳ ಪರಸ್ಪರ ಘರ್ಷಣೆಗೆ ವೇದಿಕೆಯಾಯಿತು. ಅನಂತ ಕುಮಾರ್ ಹೆಗಡೆ ಕೇಂದ್ರದ ಸಚಿವರು. ಅವರು ನೀಡಿರುವ ಹೇಳಿಕೆ ಈ ದೇಶದ ಸಂವಿಧಾನದ ಕುರಿತಾಗಿದೆ ಮತ್ತು ಇದನ್ನು ಖಂಡಿಸಿದ ದಲಿತರನ್ನು ಅವರು ಬೀದಿ ನಾಯಿಗಳು ಎಂದು ಕರೆದಿದ್ದಾರೆ. ಇದು ಹೆಗಡೆಯವರ ವೈಯಕ್ತಿಕ ಹೇಳಿಕೆಯೇ ಆಗಿದ್ದರೆ, ಅವರಿನ್ನೂ ಕೇಂದ್ರ ಸರಕಾರದ ಸಚಿವರಾಗಿರುವುದು ಹೇಗೆ? ಇಷ್ಟು ಯೋಚಿಸುವ ವಿವೇಕವೂ ಇಲ್ಲದ ಅಮಿತ್ ಶಾ, ಸಹಜವಾಗಿಯೇ ದಲಿತರ ಸಿಟ್ಟನ್ನು ಸೆರಗಿನಲ್ಲಿ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇವುಗಳ ನಡುವೆ ಬಿಜೆಪಿಯೊಳಗೆ ಯಡಿಯೂರಪ್ಪ-ಈಶ್ವರಪ್ಪ ಬಣಗಳ ಒಳಜಗಳಗಳು ಮುಂದುವರಿಯುತ್ತಿರುವುದು ಅಮಿತ್ ಶಾ ಅವರನ್ನು ಇನ್ನಷ್ಟು ಕೆರಳಿಸಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಅಮಿತ್ ಶಾ ತನ್ನ ಗಂಟು ಮೂಟೆ ಜೊತೆಗೆ ಶೀಘ್ರ ದಿಲ್ಲಿ ಸೇರುವುದರಲ್ಲಿ ಸಂಶಯವಿಲ್ಲ. ಬಿಜೆಪಿ ರಾಜಕೀಯವಾಗಿ ಎದುರಿಸುತ್ತಿರುವ ಬಿಕ್ಕಟ್ಟು ರಾಜ್ಯ ಮಾತ್ರವಲ್ಲ, ದೇಶದ ರಾಜಕಾರಣಕ್ಕೂ ಹೊಸ ದಿಕ್ಕನ್ನು ತೋರಿಸಬಹುದು. ಓಣಂ ಉತ್ಸವವನ್ನು ‘ವಾಮನ ಜಯಂತಿ’ಯೆಂದು ಘೋಷಿಸಿ ಮುಖಭಂಗ ಅನುಭವಿಸಿರುವ ಅಮಿತ್ ಶಾಗೆ, ಕರ್ನಾಟಕದ ಬಹುಸಂಸ್ಕೃತಿ ಇನ್ನಷ್ಟು ರಾಜಕೀಯ ಪಾಠಗಳನ್ನು ಕಲಿಸಿದೆ. ಮಾಧ್ಯಮವೆನ್ನುವ ಬಣ್ಣದ ಡಬ್ಬದೊಳಗೆ ಬಿದ್ದ ನೀಲಿ ನರಿಯ ಸುಳ್ಳಿ ಬಣ್ಣ, ಮಳೆ ಸುರಿದಾಗ ಕರಗಲೇ ಬೇಕು. ಬಹುಶಃ ಅಮಿತ್ ಶಾ ಎನ್ನುವ ನೀಲಿ ನರಿಯ ಬಣ್ಣ ಕರಗುತ್ತಿರುವ ಎಲ್ಲ್ಲಾ ಸೂಚನೆಗಳು ರಾಜ್ಯ ಚುನಾವಣೆಯ ಈ ಸಂದರ್ಭದಲ್ಲಿ ಕಾಣತೊಡಗಿದೆ. ದೇಶದ ಪಾಲಿಗೆ ಇದು ಆಶಾದಾಯಕ ಬೆಳವಣಿಗೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News