ಖ್ಯಾತ ಚಿತ್ರ ನಿರ್ದೇಶಕ ಸಿ.ವಿ.ರಾಜೇಂದ್ರನ್ ಇನ್ನಿಲ್ಲ

Update: 2018-04-02 03:59 GMT

ಚೆನ್ನೈ, ಎ. 2: ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ದೇಶಕ ಸಿ.ವಿ.ರಾಜೇಂದ್ರನ್ ರವಿವಾರ ನಿಧನರಾದರು. 

ಅವರಿಗೆ 81 ವರ್ಷ ವಯಸ್ಸಾಗಿತ್ತು. ಚಿತ್ರ ನಿರ್ಮಾಪಕರೂ ಆಗಿದ್ದ ಅವರು ತೀವ್ರ ಅಸ್ವಸ್ಥತೆಯಿಂದ ಮಿಯಾತ್ ಆಸ್ಪತ್ರೆಗೆ ದಾಖಲಾಗಿದ್ದರು. ಗಲಾಟ್ಟಾ ಕಲ್ಯಾಣಂ, ಸುಮತಿ ಎನ್ ಸುಂದರಿ (ಜಯಲಲಿತಾ ಹಾಗೂ ಶಿವಾಜಿ ಗಣೇಶನ್ ತಾರಾರಣ), ಉಲ್ಲಾಸ ಪರವೈಗಲ್ (ಕಮಲಹಾಸನ್) ಹಾಗೂ ಘರ್ಜನೈ (ರಜನೀಕಾಂತ್) ಸೇರಿದಂತೆ ಹಲವು ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಹಿಟ್ ಆಗಿದ್ದವು. 1970ರ ದಶಕದಲ್ಲಿ ಕನ್ನಡದಲ್ಲೂ ಹಲವು ಚಿತ್ರಗಳನ್ನು ಇವರು ನಿರ್ಮಿಸಿದ್ದರು. ಆದರೆ ಇವೆಲ್ಲ ಬಹುತೇಕ ತಮಿಳು ಚಿತ್ರಗಳ ರಿಮೇಕ್‌ಗಳು.

ಅನುಭವಂ ಪುದುಮೈ ಚಿತ್ರದ ಮೂಲಕ 1967ರಲ್ಲಿ ಚಿತ್ರರಂಗಕ್ಕೆ ಧುಮುಕಿದ ರಾಜೇಂದ್ರನ್, ಮಲೆಯಾಳಂ ಮತ್ತು ಹಿಂದಿಯಲ್ಲೂ ಚಿತ್ರ ನಿರ್ಮಿಸಿದ್ದರು. ಶಿವಾಜಿ ಗಣೇಶನ್ ಅವರ ಮಗ ಪ್ರಭು ಅವರನ್ನು ಸಂಗಿಲಿ (1982) ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ಹಿಂದಿಯಲ್ಲಿ ಕಾಳಿಚರಣ್ (1976) ಎಂಬ ಚಿತ್ರವನ್ನೂ ನಿರ್ಮಿಸಿದ್ದರು.

ಚಿತ್ರ ನಿರ್ದೇಶಕರಾಗಿ ಮಾತ್ರವಲ್ಲದೇ ಹಲವು ಟೆಲೆ ಧಾರಾವಾಹಿಗಳನ್ನೂ ಇವರು ನಿರ್ದೇಶಿಸಿದ್ದರು. ಶಿವಾಜಿ ಗಣೇಶನ್ ಅವರ ಅಭಿಯಾನಿಯಾಗಿದ್ದ ಇವರು, ಶಿವಾಜಿ ಗಣೇಶನ್ ಅವರು ನಾಯಕನಟರಾಗಿದ್ದ 15 ಚಿತ್ರಗಳನ್ನು ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News