ತಮಿಳುನಾಡು ಒತ್ತಡಕ್ಕೆ ಕೇಂದ್ರ ಸರಕಾರ ಮಣಿಯಬಾರದು: ಎಚ್.ಡಿ.ದೇವೇಗೌಡ

Update: 2018-04-04 12:55 GMT

ಬೆಂಗಳೂರು, ಎ.4: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೆ ಕಾರಣಕ್ಕೂ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಪ್ರಾಣತ್ಯಾಗ ಮಾಡುತ್ತೇವೆ ಎಂದು ತಮಿಳುನಾಡು ಸಂಸದರು ಲೋಕಸಭೆಯಲ್ಲಿ ಎಚ್ಚರಿಕೆ ನೀಡುತ್ತಾರೆ ಎಂದರು. ತಮಿಳುನಾಡಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸದಸ್ಯರು ಕಾವೇರಿ ವಿಷಯವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಮೂಲಕ ತಮಿಳುನಾಡು ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ನೀರು ಹಂಚಿಕೆ ಸಂಬಂಧ ಆರು ವಾರಗಳಲ್ಲಿ ನಿರ್ಧಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಆರು ವಾರಗಳ ಗಡುವಿನಲ್ಲಿ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ. ಅದಕ್ಕಾಗಿ, ತಮಿಳುನಾಡಿನವರು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿದೆ ಎಂದು ಅರ್ಜಿ ಸಲ್ಲಿಸಿದ್ದಾರೆಂದು ದೇವೇಗೌಡ ಹೇಳಿದರು.

ನ್ಯಾಯಾಂಗ ನಿಂದನೆ ಅರ್ಜಿಯು ಎಪ್ರಿಲ್ 9ರಂದು ವಿಚಾರಣೆಗೆ ಬರಲಿದೆ. ಆಗ ರಾಜ್ಯಕ್ಕೆ ಕಾವೇರಿ ನ್ಯಾಯ ಮಂಡಳಿಯಿಂದ ಆಗಿರುವ ಅನ್ಯಾಯವನ್ನು ನ್ಯಾಯಾಲಯದ ಎದುರು ವಿವರಿಸಬೇಕು ಎಂದು ದೇವೇಗೌಡ ಸಲಹೆ ನೀಡಿದರು.

ಎರಡು ರಾಜ್ಯಗಳು ಸೌಹರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡಿನ ಸರಕಾರದ ಮನೋಭಾವ ಇನ್ನು ಬದಲಾಗಿಲ್ಲ. 1961ರಲ್ಲಿ ಟ್ರಿಬ್ಯುನಲ್ ರಚಿಸಲಾಯಿತು. ಯಾವ ಯಾವ ಹಂತದಲ್ಲಿ ಟ್ರಿಬ್ಯುನಲ್ ಏನು ಮಾಡಿದೆ, ನ್ಯಾಯಾಲಯಗಳು ಏನು ಮಾಡಿವೆ ಎಂಬುದನ್ನು ಕೇಂದ್ರ ಸರಕಾರ ಕೂಲಂಕಶವಾಗಿ ಪರಿಶೀಲನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ದೇಶದ ಇತಿಹಾಸದಲ್ಲಿ ಅಂತರಾಜ್ಯ ನೀರಿನ ವಿಚಾರದಲ್ಲಿ ಎಲ್ಲೂ ಮಧ್ಯಂತರ ಆದೇಶ ನೀಡಿಲ್ಲ. ಆದರೆ, ಕಾವೇರಿ ವಿಚಾರದಲ್ಲಿ ಮಧ್ಯಂತರ ಆದೇಶ ಬಂದ ತಕ್ಷಣ ಅಂದು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆದೇಶ ಜಾರಿಗಾಗಿ ರಸ್ತೆಯಲ್ಲಿ ಮಲಗಿದರು. ಆಗ ಪ್ರಧಾನಿಯಾಗಿದ್ದ ನರಸಿಂಹರಾವ್ ತಕ್ಷಣ ಜಯಲಲಿತಾ ಇದ್ದ ಸ್ಥಳಕ್ಕೆ ಬಂದು ಅವರ ಬೇಡಿಕೆ ಈಡೇರಿಸಿದರು ಎಂದು ದೇವೇಗೌಡ ತಿಳಿಸಿದರು.

ನಮ್ಮ ಕನ್ನಡಿಗರಿಗೆ ಆಗಿನಿಂದಲೂ ಅನ್ಯಾಯವಾಗುತ್ತಿದೆ. ಕನ್ನಡಿಗರನ್ನು ಪ್ರಚೋದಿಸಲು ನಾನು ಇದನ್ನು ಹೇಳುತ್ತಿಲ್ಲ. ನಮಗಾಗಿರುವ ಅನ್ಯಾಯವನ್ನು ಹೇಳುತ್ತಿದ್ದೇನೆ. ತಮಿಳುನಾಡಿನ ನಾಯಕರು ನೀರು ನಿರ್ವಹಣಾ ಮಂಡಳಿ ಬೇಕು ಎನ್ನುತ್ತಿದ್ದಾರೆ ಎಂದು ಅವರು ಹೇಳಿದರು. ಅಲ್ಲಿನ ಕೆಲವು ನಾಯಕರು ಆತ್ಮಹತ್ಯೆ ಬೆದರಿಕೆಯನ್ನು ಹಾಕಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ. ಹೀಗಾಗಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಈ ವಿವಾದವನ್ನ ಬಗೆಹರಿಸೋಕೆ ಮುಂದಾಗಬೇಕು ಎಂದು ದೇವೇಗೌಡ ಮನವಿ ಮಾಡಿದರು.

ಎರಡು ರಾಜ್ಯದಲ್ಲಿನ ಬೆಳೆಗಳ ಮತ್ತು ನಮ್ಮ ರಾಜ್ಯಕ್ಕೆ ಬೇಕಾಗಿರುವ ಕುಡಿಯುವ ನೀರಿನ ಬಗ್ಗೆ ಪರಿಶೀಲನೆ ನಡೆಸಿ ನೀರು ಬಿಡುಗಡೆ ತೀರ್ಮಾನ ಕೈಗೊಳ್ಳಬೇಕು ಎಂದು ದೇವೇಗೌಡ ಸಲಹೆ ನೀಡಿದರು.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕಾವೇರಿ ವಿಚಾರವಾಗಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿದ್ದೆ. ಆಗ ತಮಿಳುನಾಡಿನ 39 ಸಂಸದರು ನಮ್ಮ ಒಕ್ಕೂಟದಲ್ಲಿದ್ದಾರೆ. ಈಗ ಈ ವಿಚಾರ ತೆಗೆದರೆ ನಮ್ಮ ಸರಕಾರ ಉರುಳುತ್ತೆ. ನಾನು ಸರಕಾರ ಉಳಿಸಿಕೊಳ್ಳಬೇಕೆಂದು ಹೇಳಿದ್ದರು. ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ ಸೇರಿದಂತೆ ನಾಲ್ಕು ಜನ ಕೇಂದ್ರ ಸಚಿವರಿದ್ದರೂ ಈ ವಿಚಾರದಲ್ಲಿ ಅಸಹಾಯಕತೆ ತೋರಿದರು ಎಂದು ಅವರು ಆರೋಪಿಸಿದರು.

ಬಿಜೆಪಿಯ 17 ಸಂಸದರು, ಜೆಡಿಎಸ್‌ನ 2 ಸಂಸದರು ಸೇರಿ ಹೋರಾಟ ಮಾಡೋಣ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್‌ಗೆ ಹೇಳಿದರೆ ಅವರು ತಿರುಗಿಯೂ ನೋಡಲಿಲ್ಲ. ಇದು ರಾಜ್ಯದ ಪರಿಸ್ಥಿತಿ ಎಂದು ದೇವೇಗೌಡ ಅಸಹಾಯಕತೆ ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News