ಯೂಟ್ಯೂಬ್ ಕಚೇರಿಯಲ್ಲಿ ಮಹಿಳೆಯಿಂದ ಶೂಟೌಟ್: ಈ ಕೃತ್ಯ ಎಸಗಲು ಆಕೆ ನೀಡಿದ ಕಾರಣವೇನು?

Update: 2018-04-04 13:32 GMT

ಸ್ಯಾನ್ ಬ್ರೂನೊ (ಅಮೆರಿಕ), ಎ.4: ಕ್ಯಾಲಿಫೋರ್ನಿಯಾದಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಮಂಗಳವಾರ ನಡೆದ ಶೂಟೌಟ್‌ನಲ್ಲಿ ಮೂರು ಮಂದಿ ಗಾಯಗೊಂಡಿದ್ದು ಶಂಕಿತ ಮಹಿಳೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶೂಟೌಟ್ ನಡೆಸಿದ ಆರೋಪಿ ಮಹಿಳೆ ವೈಯಕ್ತಿಕ ಜಾಲತಾಣವೊಂದನ್ನು ನಿಬಾಯಿಸುತ್ತಿದ್ದರು. ಈ ಜಾಲತಾಣದಲ್ಲಿ ಹಾಕಲಾದ ವಿಡಿಯೊಗಳ ಮೇಲೆ ಯೂಟ್ಯೂಬ್ ಸೆನ್ಸರ್ ಹಾಕಿದ ಕಾರಣಕ್ಕೆ ಕುಪಿತಗೊಂಡ ಮಹಿಳೆ ಯೂಟ್ಯೂಬ್ ಕಚೇರಿ ಪ್ರವೇಶಿಸಿ ಗುಂಡಿನ ದಾಳಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಸ್ತವ ಜಗತ್ತಿನಲ್ಲಿ ಮುಕ್ತ ಮಾತಿಗೆ ಅವಕಾಶವಿಲ್ಲ. ಸತ್ಯವನ್ನು ಹೇಳಿದರೆ ಅದಕ್ಕೆ ವ್ಯವಸ್ಥೆಯು ಬೆಂಬಲ ನೀಡುವುದಿಲ್ಲ. ಬದಲಿಗೆ ನಿಮ್ಮ ಬಾಯಿ ಮುಚ್ಚಲು ಪ್ರಯತ್ನಿಸುತ್ತದೆ ಎಂದು ಆರೋಪಿ ಮಹಿಳೆಯು ತನ್ನ ಜಾಲತಾಣದಲ್ಲಿ ಕೊನೆಯದಾಗಿ ಬರೆದಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಯೂಟ್ಯೂಬ್ ಕಚೇರಿಯಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆ ಕೊನೆಗೆ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಪೊಲೀಸರು 39ರ ಹರೆಯದ ನಾಝಿಮ್ ನಜಾಫಿ ಅಘ್ಡಮ್ ಎಂದು ಗುರುತಿಸಿದ್ದು ಆಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ನಿವಾಸಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಆಕೆ ಯಾರನ್ನೂ ಗುರಿ ಮಾಡಿ ಈ ದಾಳಿ ನಡೆಸಲಿಲ್ಲ. ಸ್ಥಳದಲ್ಲಿದ್ದ ಯಾರ ಪರಿಚಯವೂ ಆಕೆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಮೆರಿಕದಲ್ಲಿ ಮಹಿಳೆಯರು ಗುಂಡಿನ ದಾಳಿ ನಡೆಸಿದ ಉದಾಹರಣೆಗಳು ಅತ್ಯಂತ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ದೊಡ್ಡಣ್ಣ ಎಂದೇ ಕರೆಯಲ್ಪಡುವ ಅಮೆರಿಕದಲ್ಲಿ ಗುಂಡಿನ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು ದೇಶದ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವನ್ನು ಹೆಚ್ಚುಗೊಳಿಸಿದೆ. ಇದೀಗ ಯೂಟ್ಯೂಬ್ ಘಟನೆಯು ಈ ವಿಷಯದಲ್ಲಿ ಟ್ರಂಪ್ ಸರಕಾರದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News