ಪೆಹ್ಲು ಖಾನ್ ಹತ್ಯೆ ಪ್ರಕರಣಕ್ಕೆ ಒಂದು ವರ್ಷ

Update: 2018-04-04 13:49 GMT

ಹೊಸದಿಲ್ಲಿ,ಎ.4: ಹರ್ಯಾಣದ ನೂಹ್ ಜಿಲ್ಲೆಯ ಹೈನುಗಾರ ಪೆಹ್ಲು ಖಾನ್‌ ಅವರು ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ತಥಾಕಥಿತ ಗೋರಕ್ಷಕರಿಂದ ಹತ್ಯೆಯಾಗಿ ಒಂದು ವರ್ಷ ಸರಿದುಹೋಗಿದೆ. ಈಗ ಅವರ ಕುಟುಂಬದ ಏಕೈಕ ಆಧಾರಸ್ತಂಭವಾಗಿರುವ ಹಿರಿಯ ಪುತ್ರ ಇರ್ಷಾದ್ ತನ್ನ ತಂದೆಯ ಸಾವಿಗೆ ನ್ಯಾಯಕ್ಕಾಗಿ ಎರಡು ಆಯಾಮಗಳ ಹೋರಾಟ ನಡೆಸುತ್ತಿದ್ದಾರೆ.

ತಂದೆಯ ಹತ್ಯೆ ಬಳಿಕ ಕುಟುಂಬದ ಹೈನುಗಾರಿಕೆ ಉದ್ಯಮ ಮುಚ್ಚಿದ್ದು, 28ರ ಹರೆಯದ ಇರ್ಷಾದ್ ತನ್ನ ಕುಟುಂಬದ 11 ಜನರ ತುತ್ತಿನ ಚೀಲಗಳನ್ನು ತುಂಬಿಸಲು ಸ್ವಗ್ರಾಮ ಜೈಸಿಂಗಪುರದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ.

2017,ಎ.1ರಂದು ಪೆಹ್ಲು ಖಾನ್(55) ಹೈನುಗಾರಿಕೆಗಾಗಿ ತಾನು ಖರೀದಿಸಿದ್ದ ಜಾನುವಾರುಗಳನ್ನು ಸ್ವಗ್ರಾಮಕ್ಕೆ ಸಾಗಿಸುತ್ತಿದ್ದಾಗ ಆಲ್ವಾರ್‌ನಲ್ಲಿ ತಥಾಕಥಿತ ಗೋರಕ್ಷರು ಅವರಿಗೆ ಮಾರಣಾಂತಿಕವಾಗಿ ಥಳಿಸಿದ್ದರು. ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಕೊನೆಯುಸಿರೆಳೆದಿದ್ದರು.

ತಂದೆಯ ಹತ್ಯೆ ನಂತರ ನಮ್ಮ ಹೈನುಗಾರಿಕೆ ವ್ಯವಹಾರ ನಿಂತುಹೋಗಿದೆ. ನಾನು ಕೂಲಿ ಕೆಲಸ ಮಾಡಿ ತಿಂಗಳಿಗೆ ಸುಮಾರು 8,000 ರೂ.ಗಳಿಸುತ್ತಿದ್ದೇನೆ. ಅದರಲ್ಲಿಯೇ ನನ್ನ ಪತ್ನಿ, ನಾಲ್ವರು ಸೋದರರು, ಮೂವರು ಸೋದರಿಯರು, ತಾಯಿ ಮತ್ತು ಅಜ್ಜಿ ಸೇರಿದಂತೆ ಕುಟುಂಬದ ಹೊಟ್ಟೆ ಹೊರೆಯಬೇಕಾಗಿದೆ ಎಂದು ಪೆಹ್ಲು ಖಾನ್ ಅವರ ಮೊದಲ ಪುಣ್ಯತಿಥಿಯ ಅಂಗವಾಗಿ ಭೂಮಿ ಅಧಿಕಾರ ಆಂದೋಲನ್ (ಬಿಎಎ) ಹಮ್ಮಿಕೊಂಡಿದ್ದ ಕಾರ್ಯಕ್ರಮದ ನೇಪಥ್ಯದಲ್ಲಿ ಇರ್ಷಾದ್ ಸುದ್ದಿಗಾರರಿಗೆ ತಿಳಿಸಿದರು.

ತನ್ನ ಕುಟುಂಬಕ್ಕೆ ನ್ಯಾಯ ಮರೀಚಿಕೆಯಾಗಿದೆ ಮಾತ್ರವಲ್ಲ, ಯಾರಿಂದಲೂ ಆರ್ಥಿಕ ನೆರವೂ ದೊರಕಿಲ್ಲ ಎಂದು ಸಂಕಷ್ಟವನ್ನು ತೋಡಿಕೊಂಡರು.

ತನ್ನ ತಂದೆಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವು ಸಂಘಟನೆಗಳು ನೆರವಾಗುತ್ತಿವೆ. ಆದರೆ ಸರಕಾರವು ಈವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದರು.

ರಾಜಸ್ಥಾನ ಸರಕಾರವು ಖಾನ್ ಹತ್ಯೆ ಪ್ರಕರಣಕ್ಕೆ ಈವರೆಗೆ ಆದ್ಯತೆಯನ್ನು ನೀಡಿಲ್ಲ. ಸಂತ್ರಸ್ತ ಕುಟುಂಬಕ್ಕೆ ನ್ಯಾಯವನ್ನು ಒದಗಿಸಿಲ್ಲ ಮತ್ತು ತಥಾಕಥಿತ ಗೋರಕ್ಷಣೆಯ ಪ್ರಕರಣಗಳು ಹೆಚ್ಚುತ್ತಿರುವುದನ್ನೂ ತಡೆದಿಲ್ಲ ಎಂದು ಬಿಎಎ ಹೇಳಿಕೆಯಲ್ಲಿ ತಿಳಿಸಿದೆ.

ಖಾನ್ ಹತ್ಯೆ ಬಳಿಕ 300ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹೈನುಗಾರರು, ದಲಿತರು ಮತ್ತು ಮುಸ್ಲಿಂ ಜಾನುವಾರು ವ್ಯಾಪಾರಿಗಳು ಬಲಿಪಶುಗಳಾಗಿದ್ದಾರೆ ಮತ್ತು ಅವರಲ್ಲಿ ಯಾರಿಗೂ ನ್ಯಾಯ ದೊರಕಿಲ್ಲ ಎಂದು ಸಿಪಿಎಂ ನಾಯಕ ಹನ್ನಾನ್ ಮುಲ್ಲಾ ತಿಳಿಸಿದರು. ಇಲ್ಲಿಯ ಸಂಸತ್ ಮಾರ್ಗದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಬಿಎಎ ಗೋರಕ್ಷಣೆಯ ಹೆಸರಿನಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಘಟನೆಗಳು, ಎಲ್ಲ ಪ್ರಗತಿಪರ ಚಳುವಳಿಗಳ ವಿರುದ್ಧ ಪ್ರತೀಕಾರ ಮತ್ತು ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿರುವ ದಾಳಿಗಳನ್ನು ಪ್ರತಿಭಟಿಸಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News