ಇಂಡೋನೇಶ್ಯ ದ್ವೀಪದಾದ್ಯಂತ ಆಕಾಶದಲ್ಲಿ ದಟ್ಟ ಹೊಗೆ!

Update: 2018-04-04 16:52 GMT

ಜಕಾರ್ತ (ಇಂಡೋನೇಶ್ಯ), ಎ. 4: ತೈಲ ಸೋರಿಕೆ ಮತ್ತು ಬೆಂಕಿಯ ಬಳಿಕ ಇಂಡೋನೇಶ್ಯದ ಬಂದರು ನಗರ ಬಾಲಿಕ್‌ಪಪನ್‌ನ ಕರಾವಳಿಯ ನೀರು ಅನಿಲ ಪಂಪ್‌ನಂತೆ ಕಾಣುತ್ತಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.

ಬೆಂಕಿಯಿಂದಾಗಿ ಕಳೆದ ವಾರಾಂತ್ಯದಲ್ಲಿ ಅಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬೋರ್ನಿಯೊ ದ್ವೀಪದಲ್ಲಿರುವ ನಗರದಲ್ಲಿ ಮೂರು ದಿನಗಳ ಹಿಂದೆ ತುರ್ತು ಪರಿಸ್ಥಿತಿ ವಿಧಿಸಲಾಗಿದ್ದು, ಈಗಲೂ ಮುಂದುವರಿದಿದೆ ಎಂದು ಬಾಲಿಕ್‌ಪಪನ್ ನಗರ ಪಾಲಿಕೆ ಕಾರ್ಯದರ್ಶಿ ಸಯೀದ್ ಫಾದ್ಲಿ ಹೇಳಿದ್ದಾರೆ.

‘‘ತೈಲ ಸೋರಿಕೆಯಿಂದಾಗಿ ನಗರದಲ್ಲಿ ತುರ್ತು ಪರಿಸ್ಥಿತಿ ನೆಲೆಸಿದೆ ಹಾಗೂ ಇಲ್ಲಿನ ಕೊಲ್ಲಿ ಗ್ಯಾಸ್ ಸ್ಟೇಶನ್‌ನಂತಿದೆ’’ ಎಂದು ಫಾದ್ಲಿ ನುಡಿದರು. ‘‘ಸಿಗರೇಟ್‌ಗಳನ್ನು ಹೊತ್ತಿಸದಂತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವಂತೆ ಕೆಲಸಗಾರರು ಮತ್ತು ಕೊಲ್ಲಿ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದೇವೆ’’ ಎಂದರು.

ಕಳೆದ ಶನಿವಾರ ಬೆಂಕಿ ಹೊತ್ತಿಕೊಂಡ ಬಳಿಕ ನಗರದ ಆಕಾಶವಿಡೀ ಕಪ್ಪು ಹೊಗೆ ತುಂಬಿದೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾರೆ.

ಅಧಿಕಾರಿಗಳು ಜನರಿಗೆ ಮುಖವಾಡಗಳನ್ನು ವಿತರಿಸುತ್ತಿದ್ದಾರೆ. 1,300ಕ್ಕೂ ಅಧಿಕ ಮಂದಿ ಉಸಿರಾಟ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ವಾಂತಿ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News