ರವಿ ಬೆಳಗೆರೆಗೆ ಹೈಕೋರ್ಟ್ ನೋಟಿಸ್

Update: 2018-04-05 14:37 GMT

ಬೆಂಗಳೂರು, ಎ.5: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ್ದ ಆರೋಪ ಹೊತ್ತಿರುವ ಹಿರಿಯ ಪತ್ರಕರ್ತ ರವಿ ಬೆಳಗೆರೆ ಜಾಮೀನು ರದ್ದು ಕೋರಿ ಸಿಸಿಬಿ ಪೊಲೀಸರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಿಸಿಬಿ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಗುರುವಾರ ಈ ಆದೇಶ ನೀಡಿತು. ರವಿ ಬೆಳಗೆರೆಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠವು ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ರವಿ ಬೆಳಗೆರೆ ಮತ್ತು ಶಶಿಧರ್ ಮುಂಡೇವಾಡಿ ವಿರುದ್ಧ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದಾರೆ.

ಸಿಸಿಬಿ ಪೊಲೀಸರು ಬಂಧಿಸಿದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ರವಿ ಬೆಳಗೆರೆ ಜಾಮೀನು ಸಿಕ್ಕ ನಂತರವೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಸಿಸಿಬಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯ ಮುಂದಿಟ್ಟುಕೊಂಡು ನೀಡಲಾದ ಜಾಮೀನನ್ನು ರದ್ದು ಮಾಡಬೇಕು ಎಂದು ಸಿಸಿಬಿ ಪೊಲೀಸರು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಗುರುವಾರ ಬೆಳಗೆರೆಗೆ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News