ಬೆಂಗಳೂರು: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ; ಆರೋಪಿಯ ಕಾಲಿಗೆ ಗುಂಡು

Update: 2018-04-05 17:10 GMT

ಬೆಂಗಳೂರು, ಎ. 5: ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಇಲ್ಲಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿರುವ ಆರೋಪಿಯನ್ನು ಚರಣ್ ಎಂದು ಗುರುತಿಸಲಾಗಿದೆ. ಆರೋಪಿ ಚರಣ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೇಬಲ್ ಮಣಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿಸಲಾಗಿದೆ.

ಘಟನೆ ವಿವರ: ಎ.3ರ ರಾತ್ರಿ 11ಗಂಟೆಯ ಸುಮಾರಿಗೆ ಇಲ್ಲಿನ ಗರುಡಾಚಾರ ಪಾಳ್ಯದ ವೈಟ್‌ಫೀಲ್ಡ್ ಮುಖ್ಯರಸ್ತೆಯ ಕೆಪಿಟಿಸಿಎಲ್ ಕಚೇರಿಯ ಬಳಿಕ ಚರಣ್ ಮತ್ತು ಆತನ ಸಹಚರರು, ಅಜಯ್ ಎಂಬವನೊಂದಿಗೆ ಜಗಳ ತೆಗೆದು ಆತನ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ಮಹದೇವಪುರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿ, ತೀವ್ರವಾಗಿ ಗಾಯಗೊಂಡಿದ್ದ ಅಜಯ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಆರೋಪಿ ಚರಣ್ ಯಾನೆ ಚರಣ್ ರಾಜ್ ಹೂಡಿ ಸಮೀಪದ ರೈಲ್ವೆ ಹಳಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಆತನ ಬಂಧನಕ್ಕೆ ಮುಂದಾಗಿದ್ದರು.

ಮಹದೇವಪುರ ಠಾಣೆ ಪಿಎಸ್ಸೈ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ಮಣಿ, ಶ್ರೀಧರ, ಶ್ರೀನಿವಾಸ ಮೂರ್ತಿ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಬಂಧಿಸುವ ವೇಳೆ ಕಾನ್‌ಸ್ಟೇಬಲ್ ಮಣಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ಪಿಎಸ್ಸೈ ನಾರಾಯಣಸ್ವಾಮಿ, ಆರೋಪಿಗೆ ಶರಣಾಗುವಂತೆ ಸೂಚನೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದನ್ನೂ ಲೆಕ್ಕಿಸದೆ ಪೊಲೀಸರ ಮೇಲೆ ಮುಗಿಬೀಳಲು ಯತ್ನಿಸಿದಾಗ ಆರೋಪಿ ಚರಣ್ ಮೇಲೆ ಹಾರಿಸಿದ ಗುಂಡು ಅವನ ಕಾಲಿಗೆ ಬಿದ್ದಿದೆ. ಕೂಡಲೇ ಸ್ಥಳದಲ್ಲೆ ಆರೋಪಿ ಚರಣ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News