ವೈಎಸ್‌ಆರ್ ಕಾಂಗ್ರೆಸ್‌ನ ಐವರು ಸಂಸದರು ರಾಜೀನಾಮೆ

Update: 2018-04-06 08:27 GMT

  ಹೊಸದಿಲ್ಲಿ, ಎ.6: ಕೇಂದ್ರದ ಎನ್‌ಡಿಎ ಸರಕಾರ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿರುವುದನ್ನು ಪ್ರತಿಭಟಿಸಿ ವೈಎಸ್‌ಆರ್ ಕಾಂಗ್ರೆಸ್‌ನ ಐವರು ಸಂಸದರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ತನ್ನ ಪಕ್ಷದ ಸಂಸದರು ರಾಜೀನಾಮೆ ಸಲ್ಲಿಸಿ ಹೊಸದಿಲ್ಲಿಯಲ್ಲಿ ಅನಿರ್ದಿಷ್ಟಾವಧಿಗೆ ಉಪವಾಸ ಧರಣಿ ಕೂರಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ವೈಎಸ್ ಜಗಮೋಹನ್ ರೆಡ್ಡಿ ಮಾ.31 ರಂದು ಘೋಷಿಸಿದ್ದರು.

ಇಂದು ಸ್ಪೀಕರ್ ಸುಮಿತ್ರಾ ಮಹಾಜನ್‌ರನ್ನು ಭೇಟಿಯಾದ ವೈಎಸ್‌ಆರ್ ಕಾಂಗ್ರೆಸ್ ಸಂಸದರಾದ ಸುಬ್ಬಾ ರೆಡ್ಡಿ, ಮಿಧುನ್ ರೆಡ್ಡಿ, ವರಪ್ರಸಾದ್ ರಾವ್, ರಾಜ್‌ಮೋಹನ್ ರೆಡ್ಡಿ ಹಾಗೂ ಅವಿನಾಶ್ ರೆಡ್ಡಿ ತಮ್ಮ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್‌ನ ಇನ್ನೂ ಕೆಲವು ಸಂಸದರು ರಾಜೀನಾಮೆ ನೀಡಲಿದ್ದಾರೆ.

ಮಾ.5 ರಂದು ಎರಡನೇ ಬಜೆಟ್ ಅಧಿವೇಶನ ಆರಂಭವಾದ ತಕ್ಷಣ ವೈಎಸ್‌ಆರ್ ಕಾಂಗ್ರೆಸ್ ಸಂಸದರು ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಪ್ರತಿಭಟನೆ ನಡೆಸಲಾರಂಭಿಸಿದ್ದರು. ‘‘ಸ್ಪೀಕರ್ ವೈಎಸ್‌ಆರ್ ಪಕ್ಷದ ಅವಿಶ್ವಾಸ ನಿರ್ಣಯ ಒಪ್ಪಿಕೊಂಡಿಲ್ಲ. ಈ ವಿಷಯದ ಚರ್ಚೆಗೂ ಅವಕಾಶ ನೀಡಿಲ್ಲ’’ ಎಂದು ವರಪ್ರಸಾದ್ ರಾವ್ ಅಸಮಾಧಾನ ವ್ಯಕ್ತಪಡಿಸಿದರು.

‘‘ವೈಎಸ್‌ಆರ್ ಕಾಂಗ್ರೆಸ್‌ನ ಸಂಸದರು ಇಂದು ರಾಜೀನಾಮೆ ನೀಡಿದ್ದಾರೆ. ನಾವು ಏನು ಹೇಳುತ್ತೇವೆಯೋ, ಅದನ್ನೇ ಮಾಡುತ್ತೇವೆ. ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಂಧ್ರ ಜನರ ಬೆಂಬಲಕ್ಕೆ ನಿಂತು ವಿಶೇಷ ಸ್ಥಾನಮಾನಕ್ಕಾಗಿ ಒಗ್ಗಟ್ಟಿನಿಂದ ಹೋರಾಡುತ್ತೇವೆ’’ ಎಂದು ವೈಎಸ್ ಜಗಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News