ಆಂಧ್ರದ ಭಾವನೆಗಳೊಂದಿಗೆ ಚೆಲ್ಲಾಟವಾಡಿದರೆ ಇತಿಹಾಸದಲ್ಲಿ ಮರೆಯಾಗಿ ಹೋಗುತ್ತೀರಿ: ಮೋದಿಗೆ ನಾಯ್ಡು ಎಚ್ಚರಿಕೆ

Update: 2018-04-06 10:49 GMT

ಹೈದರಾಬಾದ್, ಎ.6: "ಆಂಧ್ರ ಪ್ರದೇಶದ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿದರೆ ನೀವು ಇತಿಹಾಸದಲ್ಲಿ ಮರೆಯಾಗಿ ಹೋಗುತ್ತೀರಿ'' ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.

ವೆಂಕಟಯಪಾಲೆಂ ಎಂಬಲ್ಲಿ  ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಸೈಕಲ್ ರ್ಯಾಲಿಯೊಂದನ್ನು ಆರಂಭಿಸುವ ಮುನ್ನ ಮಾತನಾಡುತ್ತಾ ನಾಯ್ಡು,  ಈ ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಇಂದು ಹಲವಾರು ಪ್ರತಿಭಟನಾ ರ್ಯಾಲಿಗಳು ಮತ್ತು ಪ್ರದರ್ಶನಗಳೂ  ನಡೆದಿದ್ದು, ಆಡಳಿತ ತೆಲುಗು ದೇಶಂ ಹಾಗೂ ವಿಪಕ್ಷಗಳೂ  ಜತೆಯಾಗಿ ರಾಜ್ಯದ ಹಿತಾಸಕ್ತಿ ರಕ್ಷಣೆಗಾಗಿ ಹೋರಾಡುತ್ತಿವೆಯಲ್ಲದೆ  ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯಿದೆ 2014 ಅನ್ವಯ ಎಲ್ಲಾ  ಭರವಸೆಗಳನ್ನೂ ಈಡೇರಿಸಬೇಕೆಂದು ಕೋರಿವೆ.

"ಕೇಂದ್ರ ಸರಕಾರ ತೆಲುಗು ಜನರ ಶಕ್ತಿಯನ್ನು ಕೀಳಂದಾಜಿಸಿದೆ ಹಾಗೂ ರಾಜ್ಯವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ. ಆದರೆ ಅದು ಸಾಧ್ಯವಾಗದು. 1984ರಲ್ಲಿ ಎನ್‍ಟಿಆರ್ ಸರಕಾರವನ್ನು ಕಿತ್ತೆಸೆಯಲು ಆಗಿನ ಪ್ರಧಾನಿ ಇಂದಿರಾ ಗಾಂಧಿ ಯತ್ನಿಸಿದಾಗ ಏನಾಯಿತೆಂದು  ಎಲ್ಲರಿಗೂ ತಿಳಿದಿದೆ. ರಾಜ್ಯವನ್ನು ಇಬ್ಭಾಗಿಸಿ ಕಾಂಗ್ರೆಸ್ ಪಕ್ಷ ಕೂಡ ತೆರೆಮರೆಗೆ ಸರಿಯಿತು.  ಈಗ ಆಂಧ್ರ ಜನರ ಭಾವನೆಗಳೊಂದಿಗೆ ಮೋದಿ ಚೆಲ್ಲಾಟವಾಡಿದರೆ  ಅವರಿಗೂ ಅದೇ ಗತಿಯಾಗುವುದು'' ಎಂದು ಅವರು ಎಚ್ಚರಿಸಿದಿದ್ದಾರೆ.

ರ್ಯಾಲಿಯಲ್ಲಿ ನಾಯ್ಡು ಜತೆ ಅವರ ಪುತ್ರ ನಾರಾ ಲೋಕೇಶ್, ಹಲವಾರು ಶಾಸಕರು ಹಾಗೂ ಪಕ್ಷ ನಾಯಕರು ಭಾಗವಹಿಸಿದ್ದರು. ಇಂದು ಬೆಳಗ್ಗೆ ಪಕ್ಷದ ಸದಸ್ಯರ ಜತೆ ಟೆಲಿ ಕಾನ್ಫರೆನ್ಸ್ ಮೂಲಕ ಮಾತನಾಡಿದ ನಾಯ್ಡು ಆಂಧ್ರ ಪ್ರದೇಶದ ವಿಚಾರದತ್ತ ರಾಷ್ಟ್ರಪತಿಗಳ ಗಮನ ಸೆಳೆಯಲು ಅವರಿಗೆ ಕರೆ ನೀಡಿದರು. ಗುರುವಾರ ಸಂಸತ್ತಿನಲ್ಲಿ ವಿಪಕ್ಷಗಳ ಮಾನವ ಸರಪಳಿ  ಪ್ರತಿಭಟನೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್ ಸಂಸದರಿಲ್ಲದೇ ಇರುವುದನ್ನೂ ಉಲ್ಲೇಖಿಸಿ ಆ ಪಕ್ಷದವರು ಬಿಜೆಪಿ ಜತೆ  ಶಾಮೀಲಾಗಿದ್ದಾರೆ. ಜನರು ಇದನ್ನು ಗಮನಿಸಿ ಅವರಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News