ನಾಲ್ಕು ಕೋಟಿ ರೂ. ಲಂಚ ಸ್ವೀಕರಿಸಿದ ಯಡಿಯೂರಪ್ಪ: ವಿ.ಎಸ್.ಉಗ್ರಪ್ಪ ಆರೋಪ

Update: 2018-04-06 13:18 GMT

ಬೆಂಗಳೂರು, ಎ.6: ಭದ್ರಾ ಮೇಲ್ದಂಡೆ ಯೋಜನೆಯ ಗುತ್ತಿಗೆ ನೀಡಿಕೆಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ನಾಲ್ಕು ಕೋಟಿ ರೂ.ಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ಬಹಿರಂಗಗೊಂಡಿದ್ದು, ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ನೀರಾವರಿ ನಿಗಮದ ಮೂಲಕ 2007-08 ರಲ್ಲಿ ಗುತ್ತಿಗೆ ನೀಡಲಾಗಿತ್ತು. ಅಂದು ಯಡಿಯೂರಪ್ಪಅಧ್ಯಕ್ಷತೆಯ ನೀರಾವರಿ ನಿಗಮವು ಭದ್ರಾ ಮೇಲ್ದಂಡೆ ಯೋಜನೆಯನ್ನು 1033 ಕೋಟಿ ರೂ.ಗೆ ಮುರುಡೇಶ್ವರ ಕಾರ್ಪೊರೇಷನ್ ಲಿಮಿಟೆಡ್‌ಗೆ ನೀಡಿತ್ತು ಎಂದು ಅವರು ಹೇಳಿದರು.

ಅದರ ಸಹವರ್ತಿ ಕಂಪೆನಿಯಾದ ಆರ್‌ಎನ್‌ಎಸ್‌ಎಲ್ ಇನ್ಫ್ರಾಸ್ಟ್ರಕ್ಚರ್‌ನಿಂದ ಯಡಿಯೂರಪ್ಪ ಒಂದು ಕೋಟಿ ರೂ.ತೆಗೆದುಕೊಂಡಿದ್ದಾರೆ. ಈ ಹಣವು ಲಂಚವಾಗಿ ಸ್ವೀಕರಿಸಲಾಗಿದೆ. 2009-10ರಲ್ಲಿ ಒಂದು ಕೋಟಿ ರೂ., 2010-11ರಲ್ಲಿ ಒಂದು ಕೋಟಿ ರೂ., 2011-12ರಲ್ಲಿ ಎರಡು ಕೋಟಿ ರೂ.ಲಂಚ ತೆಗೆದುಕೊಂಡಿದ್ದಾರೆ. ಇದು ಐಟಿ ಇಲಾಖೆಯ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಅವರು ದಾಖಲೆಗಳನ್ನು ಪ್ರದರ್ಶಿಸಿದರು.

ಈ ಮೂರು ವರ್ಷಗಳಲ್ಲಿ ಒಟ್ಟು ನಾಲ್ಕು ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಆರ್‌ಎನ್‌ಎಸ್ ಕಂಪೆನಿಯಿಂದ ನಗದು ರೂಪದಲ್ಲಿ ಪಡೆದುಕೊಂಡಿದ್ದರೂ, ಆ ವರ್ಷದ ಆದಾಯ ತೆರಿಗೆ ಪಾವತಿ ವೇಳೆ ಈ ಹಣದ ಮಾಹಿತಿಯನ್ನು ತೋರಿಸದೆ ಮುಚ್ಚಿಡಲಾಗಿತ್ತು. ಆದರೆ, ಖಚಿತ ಮಾಹಿತಿಯನ್ನಾಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ, ಯಡಿಯೂರಪ್ಪಗೆ ಎರಡು ಕೋಟಿ ರೂ.ಗಳಿಗೂ ಹೆಚ್ಚಿನ ದಂಡವನ್ನು ಆದಾಯ ತೆರಿಗೆ ಇಲಾಖೆ ವಿಧಿಸಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಆಗಿದ್ದ ವೇಳೆ ಯಡಿಯೂರಪ್ಪ ಭ್ರಷ್ಟಾಚಾರದ ಗಂಗೋತ್ರಿ ಹರಿಸಿದ್ದರು, ಚಿಗ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿಯೂ ಈ ಗಂಗೋತ್ರಿ ಹರಿಸಿದ್ದಾರೆ. ಸಿದ್ದರಾಮಯ್ಯ ಸರಕಾರವನ್ನು ಪರ್ಸಂಟೇಜ್ ಸರಕಾರ ಎಂದ ಪ್ರಧಾನಿ ನರೇಂದ್ರ ಮೋದಿ ಇದು ಎಷ್ಟು ಪರ್ಸೆಂಟ್ ಕಮೀಷನ್ ಎಂಬುದನ್ನು ಹೇಳಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆದಾಯ ತೆರಿಗೆ ಇಲಾಖೆಯಿಂದ ದಂಡ ಹಾಕಿಸಿಕೊಂಡಿದ್ದಾರೆ. ಈಗ ನೀವೇ ಹೇಳಿ ಇದರಲ್ಲಿ ಎಷ್ಟು ಪರ್ಸಂಟೇಜ್ ಪಡೆಯಲಾಗಿದೆ, ಅಂದಿನ ನೀರಾವರಿ ಮಂತ್ರಿಗಳು ಎಷ್ಟು ತೆಗೆದುಕೊಂಡಿದ್ದಾರೆ ಎಂಬುದನ್ನು ಹೇಳಿ ಎಂದು ಉಗ್ರಪ್ಪ ಒತ್ತಾಯಿಸಿದರು.

ಇದು ನಮ್ಮ ಆರೋಪವಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ ಹೇಳಿರುವ ಮಾಹಿತಿ. ಸಾರ್ವಜನಿಕ ಜೀವನದಲ್ಲಿ ಇರುವವರು ಈ ರೀತಿ ಹಣ ತೆಗೆದುಕೊಳ್ಳುವುದು ಅಪರಾಧ. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಾ? ಭ್ರಷ್ಟಾಚಾರ ಪ್ರತಿಬಂಧನ ಕಾಯ್ದೆ ಪ್ರಕಾರ ರಾಜ್ಯ, ಕೇಂದ್ರ ಸರಕಾರ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News