ಎಪ್ರಿಲ್ ಅಂತ್ಯಕ್ಕೆ ಪಿಯು, ಮೇ 7ರಂದು ಎಸೆಸೆಲ್ಸಿ ಫಲಿತಾಂಶ ಪ್ರಕಟ: ತನ್ವೀರ್‌ಸೇಠ್

Update: 2018-04-06 14:37 GMT

ಬೆಂಗಳೂರು, ಎ.6: 2017-18ನೆ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವು ಎಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಮೇ 7ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸೆಸೆಲ್ಸಿ ಪರೀಕ್ಷೆ ಇಂದು ಮುಕ್ತಾಯಗೊಂಡಿದೆ. ಎ.16ರಿಂದ 25ರ ವರೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ ಎಂದರು.

ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲಿ ಮೇ 7ರಂದು ಹಾಗೂ ಆಯಾ ಶಾಲೆಗಳಲ್ಲಿ ಮೇ 8ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಲಭ್ಯವಾಗಲಿದೆ. ಎ.8ರಂದು ಎಸೆಸೆಲ್ಸಿ ಪರೀಕ್ಷೆಯ ಕೀ ಉತ್ತರ(ಮಾದರಿ ಉತ್ತರ)ಗಳು ಪ್ರಕಟವಾಗಲಿವೆ. ಅವುಗಳಿಗೆ ಆಕ್ಷೇಪಣೆ ಸಲ್ಲಿಸಲು ಎ.10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಪೂರಕ ಪರೀಕ್ಷೆಗಳನ್ನು ಈವರೆಗೆ ಶಿಕ್ಷಕರ ಸಂಘಗಳ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಮುಂದಿನ ವರ್ಷದಿಂದ ಮಂಡಳಿ ವತಿಯಿಂದಲೆ ರಾಜ್ಯಮಟ್ಟದ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತನ್ವೀರ್ ಸೇಠ್ ತಿಳಿಸಿದರು.

ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಎಸೆಸೆಲ್ಸಿಯಲ್ಲಿ 8.54 ಲಕ್ಷ ಹಾಗೂ ದ್ವಿತೀಯ ಪಿಯುಸಿಯಲ್ಲಿ 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸರಕಾರವು ಕಳೆದ ಎರಡು ವರ್ಷಗಳಲ್ಲಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವುದು ತೃಪ್ತಿ ತಂದಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

‘Karnataka Secure Examination System’(ಕರ್ನಾಟಕ ಸುರಕ್ಷಿತ ಪರೀಕ್ಷಾ ಪದ್ಧತಿ) ಎಂಬ ನೂತನ ಗಣಕೀಕೃತ ಪರೀಕ್ಷಾ ವಿಧಾನವನ್ನು ಜಾರಿಗೆ ತಂದಿದ್ದು, ಈ ವ್ಯವಸ್ಥೆಯು ದೇಶದಲ್ಲಿಯೆ ಪ್ರಪ್ರಥಮ ಸುರಕ್ಷಿತ ಪರೀಕ್ಷಾ ಪದ್ಧತಿಯಾಗಿದೆ ಎಂದು ಅವರು ಹೇಳಿದರು.

ಯಾವುದೇ ಪರೀಕ್ಷಾ ಅವ್ಯವಹಾರ ಅಥವಾ ದುಷ್ಕೃತ್ಯಗಳಿಗೆ ಅವಕಾಶ ನೀಡದಿರುವ ಈ ಪದ್ಧತಿಯುದೇಶದಲ್ಲಿಯೆ ಮಾದರಿಯಾಗಿದೆ. ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯನ್ನು ಗಣಕೀಕರಣ ಗೊಳಿಸಿರುವುದರಿಂದ ಯಾವುದೇ ಹಂತದಲ್ಲಿಯೂ ಅವ್ಯವಹಾರಗಳಿಗೆ ಆಸ್ಪದವಿರುವುದಿಲ್ಲ ಎಂದು ಅವರು ತಿಳಿಸಿದರು.

ಈ ಪರೀಕ್ಷಾ ವಿಧಾನದಲ್ಲಿ ಬಾರ್ ಕೋಡಿಂಗ್, ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ ಹಾಗೂ ಪ್ರಶ್ನೆ ಪತ್ರಿಕೆ-ಉತ್ತರ ಪತ್ರಿಕೆಗಳ ಸಾಗಾಣಿಕೆಯನ್ನು ಡಿಜಿಟಲ್ ತಂತ್ರಾಂಶದ ಮೂಲಕ ಸರಳೀಕರಣಗೊಳಿಸಲಾಗಿದ್ದು, ಇದು ದೇಶದಲ್ಲಿಯೆ ಅನನ್ಯವಾದ ಪರೀಕ್ಷಾ ವ್ಯವಸ್ಥೆಯಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News