ಪ್ರತಿಭಟನೆ, ಘೋಷಣೆಗೇ ಸೀಮಿತವಾದ ಬಜೆಟ್ ಅಧಿವೇಶನ ಅಂತ್ಯ

Update: 2018-04-06 16:13 GMT

ಹೊಸದಿಲ್ಲಿ, ಎ.6: ನಿರಂತರ ಗದ್ದಲ, ಅಡಚಣೆಗಳಿಂದ ಪದೇ ಪದೇ ಮುಂದೂಡಲ್ಪಟ್ಟ ಬಜೆಟ್ ಅಧಿವೇಶನದ ಎರಡನೇ ಹಂತದ ಅಧಿವೇಶನ ಶುಕ್ರವಾರ ಅಂತ್ಯಗೊಂಡಿದೆ. ಬ್ಯಾಂಕ್ ಹಗರಣ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ, ಕಾವೇರಿ ಜಲನಿರ್ವಹಣಾ ಮಂಡಳಿಯ ಸ್ಥಾಪನೆ, ಪ್ರತಿಮೆಗಳನ್ನು ಧ್ವಂಸಗೊಳಿಸಿದ ಪ್ರಕರಣ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆಕಾಯ್ದೆಯ ಪುನರ್ಪರಿಶೀಲನೆ ಮುಂತಾದ ವಿಷಯಗಳ ಬಗ್ಗೆ ನಿರಂತರ ಪ್ರತಿಭಟನೆಗೆ ಸಾಕ್ಷಿಯಾದ ಅಧಿವೇಶನದಲ್ಲಿ ಒಟ್ಟು 250 ಗಂಟೆಗಳ ಕಲಾಪ ನಷ್ಟವಾಗಿದೆ.

29 ದಿನದ ಕಲಾಪದಲ್ಲಿ ನಿಗದಿಯಾದ 19 ಚುಕ್ಕಿ ಪ್ರಶ್ನೆಗಳಲ್ಲಿ ಕೇವಲ ಐದು ಪ್ರಶ್ನೆಗಳಿಗೆ ಸಚಿವರು ರಾಜ್ಯಸಭೆಯಲ್ಲಿ ಹೇಳಿಕೆಯ ಮೂಲಕ ಉತ್ತರಿಸಿದ್ದರೆ, ಲೋಕಸಭೆಯಲ್ಲಿ 580 ಚುಕ್ಕಿಪ್ರಶ್ನೆಗಳ ಪೈಕಿ ಕೇವಲ 17ಕ್ಕೆ ಸಚಿವರು ಹೇಳಿಕೆಯ ಮೂಲಕ ಉತ್ತರಿಸಿದ್ದಾರೆ. ಮಾರ್ಚ್ 5ರಂದು ಆರಂಭವಾದ ದ್ವಿತೀಯ ಚರಣದ ಅಧಿವೇಶನದಲ್ಲಿ 22 ದಿನದ ಬೈಠಕ್ ನಡೆದಿದ್ದು ಬಹುತೇಕ ವ್ಯರ್ಥವಾಗಿದೆ.

2018ರ ಹಣಕಾಸು ಮಸೂದೆ, ಗ್ರಾಚ್ಯುವಿಟಿ ಪಾವತಿ (ತಿದ್ದುಪಡಿ) ಮಸೂದೆ, ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಮಸೂದೆ 2017 ಸೇರಿದಂತೆ ಕೇವಲ ಐದು ಮಸೂದೆಗಳು ಅಂಗೀಕಾರಗೊಂಡಿದ್ದರೆ, ಲೋಕಸಭೆಯಲ್ಲಿ ಐದು ಮಸೂದೆಯನ್ನು ಮಂಡಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಮುಸ್ಲಿಮ್ ಮಹಿಳೆಯರ (ವಿವಾಹ ಹಕ್ಕು ರಕ್ಷಣೆ) ಮಸೂದೆ, 2017 ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಬಾಕಿಯಾಗಿದೆ. ಅಧಿವೇಶನದ ಅಂತಿಮ ದಿನವಾದ ಶುಕ್ರವಾರವೂ ವಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರಿಯಿತು. ಎಐಎಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಕಾವೇರಿ ಜಲನಿರ್ವಹಣಾ ಮಂಡಳಿಯ ರಚನೆ ಕುರಿತು ಹಾಗೂ ಟಿಡಿಪಿ ಸದಸ್ಯರು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಘೋಷಣೆ ಕೂಗುತ್ತಾ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ಮುಂದುವರಿಸಿದರು.

ಸದಸ್ಯರು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಲಾಪದಲ್ಲಿ ಪಾಲ್ಗೊಳ್ಳಬೇಕು. ಸದಸ್ಯರು ಪಾಲ್ಗೊಳ್ಳಲು ಸಿದ್ಧರಿಲ್ಲದಿದ್ದರೆ ಅನಿರ್ಧಿಷ್ಟಾವಧಿಗೆ ಮುಂದೂಡುತ್ತೇನೆ ಎಂದು ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದರು.

ಈ ಹಂತದಲ್ಲಿ ಟಿಡಿಪಿ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರು ಸ್ವಸ್ಥಾನಕ್ಕೆ ಮರಳಿದರು. ಆದರೆ ಟಿಡಿಪಿ ಸದಸ್ಯರು ಗದ್ದಲ ಮುಂದುವರಿಸಿದಾಗ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು. ದ್ವಿತೀಯ ಚರಣದಲ್ಲಿ ಲೋಕಸಭೆ ಒಟ್ಟು 29 ಬೈಠಕ್ ನಡೆಸಿದ್ದು 34 ಗಂಟೆ ಹಾಗೂ ಐದು ನಿಮಿಷ ಕಾರ್ಯ ನಿರ್ವಹಿಸಿದೆ. ಒಟ್ಟು 127 ಗಂಟೆ 5 ನಿಮಿಷದ ಕಲಾಪ ವ್ಯರ್ಥವಾಗಿದೆ .ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯಸಭೆಯಲ್ಲೂ ಕಲಾಪ ನಡೆಯಲಿಲ್ಲ. ಸದಸ್ಯರ ವರ್ತನೆಯಿಂದ ತೀವ್ರ ಆಘಾತವಾಗಿದೆ. ನಿರಂತರ ಗದ್ದಲದ ಕಾರಣ ಈ ಪ್ರಮುಖ ಬಜೆಟ್ ಅಧಿವೇಶನ ವ್ಯರ್ಥವಾಗಿದ್ದು ಸದವಕಾಶವನ್ನು ಕಳೆದುಕೊಂಡಿದ್ದೇವೆ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ತಿಳಿಸಿದರು. ಸದನದ ವಿವಿಧ ವಿಭಾಗಗಳ ಮಧ್ಯೆ ಸಂವಹನ ಸಂಪೂರ್ಣ ವಿಫಲವಾಗಿತ್ತು. ಇದರಿಂದ 27 ದಿನವೂ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಅಸಮಾಧಾನ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News