ಸಿದ್ದರಾಮಯ್ಯ ಯಾಕೆ ಸೋಲಬಾರದು?

Update: 2018-04-06 18:55 GMT

ಚುನಾವಣೆಯ ಸಂದರ್ಭದಲ್ಲಿ ಪ್ರಬುದ್ಧ ಮತದಾರ ತಾನು ಯಾರಿಗೆ, ಯಾವ ಪಕ್ಷಕ್ಕೆ ಯಾವ ಕಾರಣಕ್ಕೆ ಮತ ನೀಡಬೇಕು ಎನ್ನುವುದನ್ನು ಬೇರೆ ಬೇರೆ ಕೋನಗಳಲ್ಲಿ ಆಲೋಚಿಸಿ ಅಂತಿಮ ನಿರ್ಧಾರಕ್ಕೆ ಬರುತ್ತಾನೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಸ್ಪಷ್ಟ ಆಯ್ಕೆಯಿತ್ತು. ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಎಸಗಿದ ಪ್ರಮಾದಗಳು ಎಷ್ಟಿತ್ತೆಂದರೆ, ಬಿಜೆಪಿಗೆ ಮತ ನೀಡಲು ಮತದಾರರಲ್ಲಿ ಕಾರಣಗಳೇ ಇರಲಿಲ್ಲ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ನೇರ, ನಿಷ್ಠುರ, ಪ್ರಾಮಾಣಿಕ ನಾಯಕತ್ವ ಮತದಾರರಿಗೆ ಕಾಂಗ್ರೆಸನ್ನು ಇಷ್ಟ ಪಡುವಂತೆ ಮಾಡಿತ್ತು. ಗೊಂದಲಗಳೇ ಇಲ್ಲದಂತೆ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸನ್ನು ಆರಿಸಿದ್ದರು. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ತಾನು ನೀಡುವ ಮತ ರಾಜ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರೀತು ಎನ್ನುವುದನ್ನು ಮತದಾರ ಗಂಭೀರವಾಗಿಯೇ ಯೋಚಿಸುತ್ತಿದ್ದಾನೆ. ಒಂದೆಡೆ ಮೋದಿಯ ಮೇಲಿಟ್ಟ ಬಹುನಿರೀಕ್ಷೆ ಕುಸಿದಿದೆ. ದೇಶದ ಅರ್ಥವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಅದರ ಪರಿಣಾಮ ರಾಜ್ಯದ ಮೇಲೂ ಉಂಟಾಗಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಜೊತೆಗೆ ಸೆಣಸುವುದಕ್ಕೆ ಬಿಜೆಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿದ್ಧವಾದಂತೆ ಇಲ್ಲ. ಬಿಜೆಪಿಯ ರಾಜ್ಯ ನಾಯಕತ್ವದ ಗೊಂದಲ ಮುಂದುವರಿದಿದೆ. ಯಡಿಯೂರಪ್ಪ ಪೂರ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ತೊಡಗಿಕೊಂಡಿಲ್ಲ. ಆಳದಲ್ಲಿ ಅವರಿಗೆ ಅಸಮಾಧಾನಗಳಿವೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅದು ಆಗಾಗ ಕಾಣಿಸಿಕೊಂಡಿದೆ. ಅಮಿತ್ ಶಾ ಕುಟಿಲೋಪಾಯಗಳೂ ರಾಜ್ಯದಲ್ಲಿ ವಿಫಲಗೊಂಡಿವೆ. ಆದುದರಿಂದಲೇ ರಾಜ್ಯದ ಮತದಾರರು ಇನ್ನೂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಮೇಲೆ ಅಲ್ಪಸ್ವಲ್ಪ ಒಲವು ಇಟ್ಟುಕೊಂಡಿದ್ದಾರೆ. ಮುಖ್ಯವಾಗಿ, ಹೇಳಿಕೊಳ್ಳುವ ದೊಡ್ಡ ಮಟ್ಟದ ಭ್ರಷ್ಟಾಚಾರ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಡೆದಿಲ್ಲ. ಹಾಗೆಯೇ ಅವರ ಬಡವರ ಪರ ನೀತಿಯೂ ಜನರನ್ನು ಸೆಳೆದಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟು ಮತ್ತೆ ಯಡಿಯೂರಪ್ಪ ಕಡೆಗೆ ಮತದಾರರು ಯಾಕೆ ವಾಲಬೇಕು ಎನ್ನುವುದನ್ನು ಮಂಡಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಜೆಡಿಎಸ್ ತನ್ನ ಗೊಂದಲಕಾರಿ ನೀತಿಗಳ ಜೊತೆಗೆ ಮುಂದೆ ಸಾಗುತ್ತಿರುವುದರಿಂದ ಜನತೆ ಇನ್ನೂ ಅದನ್ನು ಅನುಮಾನದಿಂದ ನೋಡುತ್ತಿದ್ದಾರೆ. ‘‘ಬಿಜೆಪಿಯ ಜೊತೆಗೆ ನಿಂತು ಕೆಮ್ಮುವ’’ ಸೂಚನೆಗಳನ್ನು ಈಗಾಗಲೇ ಕುಮಾರಸ್ವಾಮಿ ನೀಡಿದ್ದಾರೆ. ಜನರಿಗೆ ಕೋಮುಹಿಂಸಾಚಾರ ಬೇಕಾಗಿಲ್ಲ. ಒಂದು ಗುಂಪು, ತಾನು ನೀಡುವ ಮತ ದುಷ್ಟ ಶಕ್ತಿಗಳಿಗೆ ಲಾಭವಾಗಬಾರದು ಎಂದು ಯೋಚಿಸುತ್ತಿದೆ. ಇಂದು ರಾಜ್ಯದಲ್ಲಿ ಕಾಂಗ್ರೆಸನ್ನು ಎಷ್ಟರಮಟ್ಟಿಗೆ ನಂಬಬಹುದು ಎನ್ನುವುದು ಚರ್ಚೆಗೆ ಅರ್ಹವಾದ ವಿಷಯ. ಆದರೆ ಸಿದ್ದರಾಮಯ್ಯರ ಆಯ್ಕೆಯ ಸಂದರ್ಭದಲ್ಲಿ ಮತದಾರರು ಕಾಂಗ್ರೆಸ್‌ನ್ನು ಪಕ್ಕಕ್ಕಿಟ್ಟೆ ಅವರ ಕುರಿತು ಮೃದುವಾಗುತ್ತಾರೆ. ಅವರನ್ನು ಕಾಂಗ್ರೆಸ್ ಜೊತೆ ಪೂರ್ಣವಾಗಿ ಇಟ್ಟು ಮತದಾರರು ನೋಡುತ್ತಿಲ್ಲ.

ಸಿದ್ದರಾಮಯ್ಯ ವ್ಯಕ್ತಿತ್ವ ಕಾಂಗ್ರೆಸ್‌ನ ಜೊತೆಗೆ ಸಂಪೂರ್ಣ ವಿಲೀನವಾಗುವಷ್ಟು ದುರ್ಬಲವಾದುದು ಅಲ್ಲ. ವಿಪರ್ಯಾಸವೆಂದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿಗಿಂತಲೂ ಕೆಲವು ಜಾತ್ಯತೀತ ಮುಖವಾಡದ ಪಕ್ಷಗಳು ಮತ್ತು ನಾಯಕರು ಒಂದಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಬಂದರೂ ಇವರಿಗೆ ಚಿಂತೆಯಿಲ್ಲ. ಆದರೆ ಸಿದ್ದರಾಮಯ್ಯ ಸೋಲಬೇಕು ಎನ್ನುವುದೇ ಇವರ ಗುರಿ. ಜೆಡಿಎಸ್ ಇದಕ್ಕಾಗಿ ಬಿಜೆಪಿಯೊಂದಿಗೆ ಒಳಗೊಳಗೆ ಮೈತ್ರಿ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ಅವರ ಮಾಜಿ ಗೆಳೆಯರು ಸಂಚು ನಡೆಸುತ್ತಿದ್ದಾರೆ. ದಲಿತ ನಾಯಕರೆಂದು ಒಂದು ಕಾಲದಲ್ಲಿ ಗುರುತಿಸಿ, ಇದೀಗ ಬಿಜೆಪಿಯ ಖೆಡ್ಡಾದೊಳಗೆ ಬಿದ್ದು ಆರ್ತನಾದಗೈಯುತ್ತಿರುವ ವಿ. ಶ್ರೀನಿವಾಸ ಪ್ರಸಾದ್, ಮಾಜಿ ಅಹಿಂದ ಎಚ್. ವಿಶ್ವನಾಥ್ ಸೇರಿದಂತೆ ಹಲವು ನಾಯಕರಿಗೆ ಸಿದ್ದರಾಮಯ್ಯ ಸೋಲಲೇಬೇಕಾಗಿದೆ. ಆದರೆ ಸಿದ್ದರಾಮಯ್ಯ ಸೋಲಲೇಬೇಕು ಎನ್ನುವುದಕ್ಕೆ ಅಗತ್ಯವಿರುವ ಕಾರಣಗಳು ಮಾತ್ರ ಅವರಲ್ಲಿ ಇಲ್ಲದಿರುವುದು ವಿಷಾದನೀಯ. ವಿ. ಶ್ರೀನಿವಾಸ ಪ್ರಸಾದ್ ಮತ್ತು ಎಚ್. ವಿಶ್ವನಾಥ್ ಅವರಿಗೆ ಸಿದ್ದರಾಮಯ್ಯರ ಜೊತೆಗೆ ವೈಯಕ್ತಿಕವಾದ ರಾಜಕೀಯ ಅಸಮಾಧಾನಗಳಿವೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಜೊತೆಗೆ ನಿಂತಿದ್ದ ಇವರು, ಬಳಿಕ ‘ಸಿದ್ದರಾಮಯ್ಯ ನಮಗೆ ಮೋಸ ಮಾಡಿದ್ದಾರೆ’ ಎಂದು ಮಾಧ್ಯಮಗಳಲ್ಲಿ ಹಲವು ಬಾರಿ ಹೇಳಿಕೊಂಡಿದ್ದಾರೆ.

ಸಿದ್ದರಾಮಯ್ಯರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿಯೇ ಸಿದ್ಧ ಎಂದು ಇಬ್ಬರೂ ನಾಯಕರು ಶಪಥ ಮಾಡಿದ್ದಾರೆ. ವಿಶ್ವನಾಥ್ ಮತ್ತು ಶ್ರೀನಿವಾಸ ಪ್ರಸಾದ್‌ರ ಅಗತ್ಯಕ್ಕಾಗಿ ಮತದಾರರು ಯಾಕೆ ಸಿದ್ದರಾಮಯ್ಯ ವಿರುದ್ಧ ಮತಹಾಕಬೇಕು? ಶ್ರೀನಿವಾಸ ಪ್ರಸಾದ್‌ರಂತಹ ಪ್ರಬುದ್ಧ ನಾಯಕರು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ಸೇರಿ, ತಾವು ಈವರೆಗೆ ಸಂಪಾದಿಸಿದ್ದ ವ್ಯಕ್ತಿತ್ವವನ್ನೇ ಕಳೆದುಕೊಂಡರು. ಸಿದ್ದರಾಮಯ್ಯರಿಗೆ ಮತ ನೀಡಬೇಡಿ ಎನ್ನುವ ಶ್ರೀನಿವಾಸ ಪ್ರಸಾದ್ ‘‘ಬದಲಿಗೆ ಯಾರಿಗೆ ಮತ ನೀಡಬೇಕು?’’ ಎನ್ನುವುದನ್ನು ಸ್ಪಷ್ಟಪಡಿಸುತ್ತಿಲ್ಲ. ಸಿದ್ದರಾಮಯ್ಯ ಸೋತರೆ ಅದರಿಂದ ಆ ಕ್ಷೇತ್ರಕ್ಕೆ ಆಗುವ ಲಾಭವೇನು? ಇದಕ್ಕೂ ಅವರಲ್ಲಿ ಉತ್ತರವಿಲ್ಲ. ವಿಪರ್ಯಾಸವೆಂದರೆ, ಕಾಂಗ್ರೆಸ್‌ನೊಳಗೂ ಸಿದ್ದರಾಮಯ್ಯರ ಸೋಲನ್ನು ಬಯಸುವವರು ಇದ್ದಾರೆ. ಇಂದು ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ ಎನ್ನುವಂತಹ ಸ್ಥಿತಿ ಇದೆ. ನಾಳೆ ಕಾಂಗ್ರೆಸ್ ಬಹುಮತ ಪಡೆದುಕೊಂಡರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಜೊತೆಗೆ ಅವರ ಗಟ್ಟಿ ವ್ಯಕ್ತಿತ್ವ ಕಾಂಗ್ರೆಸ್‌ನೊಳಗಿರುವ ಸಮಯಸಾಧಕ ರಾಜಕಾರಣಿಗಳಿಗೆ ದೊಡ್ಡ ತಡೆಯಾಗಿದೆ. ಒಂದು ವೇಳೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಏನಾದರೂ ಸೋತದ್ದೇ ಆದರೆ, ಅದೇ ಕಾರಣದಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ದೂರ ಉಳಿಸಬಹುದು ಎನ್ನುವುದು ಕಾಂಗ್ರೆಸ್‌ನೊಳಗಿರುವ ಕೆಲ ಜನರ ಲೆಕ್ಕಾಚಾರ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಯೋ ಇಲ್ಲವೋ, ಆದರೆ ವಿಧಾನಸಭೆಯಲ್ಲಿ ಜನಪ್ರತಿನಿಧಿಯಾಗಿ ಆರಿಸಿಬರಲೇಬೇಕಾದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಇಂದು ರಾಜಕೀಯ ಮುತ್ಸದ್ದಿಗಳು ಎಂದು ಗುರುತಿಸಲ್ಪಡುವ ನಾಯಕರ ಸಂಖ್ಯೆ ತೀರಾ ಕಡಿಮೆಯಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಲ್ಲೂ ವಿಧಾನಸಭೆಯಲ್ಲಿ ಇರಲೇಬೇಕು ಎನ್ನುವಂತಹ ಹಲವು ಪ್ರಬುದ್ಧ ನಾಯಕರು ಇದ್ದಾರೆ. ಅವರಲ್ಲಿ ಸಿದ್ದರಾಮಯ್ಯ ಒಬ್ಬರು. ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯರಂತಹ ನಾಯಕರನ್ನು ರಾಜಕೀಯದಿಂದ ದೂರ ಓಡಿಸುವುದರಿಂದ ಕೆಲವು ಸಮಯಸಾಧಕ ರಾಜಕಾರಣಿಗಳಿಗೆ ವಿಧಾನಸಭೆಯೆಡೆಗೆ ರಾಜಹಾಸು ಹಾಕಿಕೊಟ್ಟಂತಾಗುತ್ತದೆ. ಮಾತ್ರವಲ್ಲ, ಈಗಾಗಲೇ ಬಹಳಷ್ಟು ಅಧ್ವಾನಗಳನ್ನು ಕಂಡಿರುವ ವಿಧಾನಸಭೆ ಸಿದ್ದರಾಮಯ್ಯರಂತಹ ನಾಯಕರ ಕೊರತೆಯಿಂದ ಇನ್ನಷ್ಟು ಬಡವಾಗುತ್ತದೆ. ಅದರಿಂದ ರಾಜ್ಯಕ್ಕೂ ಬಹಳ ನಷ್ಟವಿದೆ. ಆದುದರಿಂದ ಸಿದ್ದರಾಮಯ್ಯ ಸಹಿತ ಬೇರೆ ಬೇರೆ ಪಕ್ಷಗಳಲ್ಲಿದ್ದು ಸ್ವಂತಿಕೆಯನ್ನು ಉಳಿಸಿಕೊಂಡಿರುವ ಮುತ್ಸದ್ದಿಗಳನ್ನು ಗುರುತಿಸಿ ಅವರು ವಿಧಾನಸಭೆಗೆ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಎಲ್ಲ ಪ್ರಜ್ಞಾವಂತರ ಹೊಣೆಗಾರಿಕೆಗಳಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News