ಸಲ್ಮಾನ್ ಜಾಮೀನು ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರ ವರ್ಗಾವಣೆ

Update: 2018-04-07 06:10 GMT

ಜೋಧಪುರ, ಎ. 7: ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಬೇಕಿದ್ದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರನ್ನು ರಾಜಸ್ಥಾನ ಹೈಕೋರ್ಟ್ ದಿಢೀರ್ ವರ್ಗಾಯಿಸಿದೆ. 

ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಹಾಗೂ ಇತರ 87 ಮಂದಿಯನ್ನು ವರ್ಗಾಯಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಸಲ್ಮಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜೋಶಿ ವಿಚಾರಣೆ ನಡೆಸುತ್ತಿದ್ದರು. ಜೋಶಿ ವರ್ಗಾವಣೆ ಹಿನ್ನೆಲೆಯಲ್ಲಿ ಸಲ್ಮಾನ್ ಮತ್ತೆ ಕೆಲ ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗಿ ಬಂದಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶನಿವಾರ ತೀರ್ಪು ನೀಡಬೇಕಿತ್ತು.

20 ವರ್ಷ ಹಳೆಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಸಲ್ಮಾನ್ ಗುರುವಾರ ಜಾಮೀನು ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದರು.

ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಸಲ್ಮಾನ್‌ಗೆ ಐದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ವೇಳೆ 1998ರಲ್ಲಿ ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News