ನ್ಯಾಯಾಂಗ ವ್ಯವಸ್ಥೆ ಸರಿಪಡಿಸುವುದು ಅಗತ್ಯ: ಸುಪ್ರೀಂ ನ್ಯಾ. ಚಲಮೇಶ್ವರ್

Update: 2018-04-08 04:26 GMT

ಹೊಸದಿಲ್ಲಿ, ಎ. 8: ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸುವುದು ಅಗತ್ಯ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ. ಚಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

"ಜನವರಿ 12ರಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಇದರಲ್ಲಿ ಭಾಗವಹಿಸಿದ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕಡೆಗಣಿಸಲಾಗದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾರ್ವರ್ಡ್ ಕ್ಲಬ್ ಆಫ್ ಇಂಡಿಯಾ ದೆಹಲಿಯಲ್ಲಿ ಏರ್ಪಡಿಸಿದ್ದ 'ಪ್ರಜಾಪ್ರಭುತ್ವದ ಪಾತ್ರ' ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, "ಕೆಲ ವಿರೋಧ ಪಕ್ಷಗಳು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿರುವುದರಿಂದ ಸಮಸ್ಯೆ ಬಗೆಹರಿಯದು. ದೇಶದ ಅತ್ಯುನ್ನತ ನ್ಯಾಯಸಂಸ್ಥೆಯ ಪುನರ್ರಚನೆ ಬಗೆಗೆ ಚರ್ಚೆಗಳು ನಡೆಯಬೇಕು" ಎಂದು ಸಲಹೆ ಮಾಡಿದರು. ಜೂನ್ 22ರಂದು ನಿವೃತ್ತರಾದ ಬಳಿಕ ಯಾವುದೇ ಸರ್ಕಾರಿ ಉದ್ಯೋಗವನ್ನು ತಾವು ಎದುರು ನೋಡುವುದಿಲ್ಲ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

"ನ್ಯಾಯಮೂರ್ತಿ ಗೊಗೋಯ್ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕಡೆಗಣಿಸಲಾಗುತ್ತದೆಯೇ ಎಂದು ಭವಿಷ್ಯ ನುಡಿಯಲು ನಾನು ಜ್ಯೋತಿಷಿಯಲ್ಲ. ಬಹುಶಃ ಇದು ಆಗದು ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ಜನವರಿ 12ರ ಪತ್ರಿಕಾಗೋಷ್ಠಿಯಲ್ಲಿ ಮುಂದಿಟ್ಟ ಸಮಸ್ಯೆಗಳು ಸರಿ ಎನ್ನುವುದು ಇದರಿಂದ ಸಾಬೀತಾಗುತ್ತದೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News