ಮಾಧ್ಯಮಗಳಿಗೆ ಕುರುಡರೇ ಕಣ್ಗಾವಲಾದರೆ?

Update: 2018-04-09 04:48 GMT

ಸುಳ್ಳು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ಅಥವಾ ಪತ್ರಕರ್ತರ ಮಾನ್ಯತೆಯನ್ನು ರದ್ದು ಮಾಡುವ ಆದೇಶವನ್ನು ಹೊರಡಿಸಿದ ಕೇಂದ್ರ ಸರಕಾರ ಅಷ್ಟೇ ವೇಗದಲ್ಲಿ ಅದನ್ನು ವಾಪಸ್ ತೆಗೆದುಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಕೇಂದ್ರ ಸರಕಾರ ಮಾಧ್ಯಮಗಳ ಮೇಲೆ ಪರೋಕ್ಷ ನಿಯಂತ್ರಣಕ್ಕೆ ಯತ್ನಿಸುತ್ತಿದೆ ಎನ್ನುವ ಆರೋಪಗಳಿಗೆ ಪುಷ್ಟಿ ನೀಡುವಂತಿತ್ತು ಆ ಆದೇಶ. ಆದರೆ ಅದರ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ತಕ್ಷಣ ಹಿಂದೆಗೆದುಕೊಂಡಿತು. ಇದೀಗ ‘ಅಳಿಯ ಅಲ್ಲ ಮಗಳ ಗಂಡ ’ ಎಂಬಂತೆ, ಅಡ್ಡದಾರಿಯಲ್ಲಿ ತನ್ನ ಹಿಂದಿನ ಆದೇಶವನ್ನು ಜಾರಿಗೊಳಿಸಲು ಮುಂದಾಗಿದೆ. ಮತ್ತು ಅದಕ್ಕಾಗಿಯೇ ‘ಮಾಧ್ಯಮ ಕಣ್ಗಾವಲು ಸಮಿತಿ’ಯೊಂದನ್ನು ರಚಿಸಿದೆ. ‘ಮಾಧ್ಯಮಗಳಿಗೆ ಕಣ್ಗಾವಲು ಸಮಿತಿ’ಯೊಂದರ ಅಗತ್ಯವಿದೆಯೇ? ಎಂಬ ಪ್ರಶ್ನೆ ಎದುರಾದರೆ ನೂರಕ್ಕೆ ನೂರು ಅಗತ್ಯವಿದೆ ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ, ಸದ್ಯದ ದಿನಗಳಲ್ಲಿ ಮಾಧ್ಯಮಗಳು ಸುಳ್ಳು ಸುದ್ದಿಗಳ ಮೂಲಕವೇ ಚರ್ಚೆಯಲ್ಲಿರಲು ಹವಣಿಸುತ್ತಿವೆ. ಟಿಆರ್‌ಪಿ ಸ್ಪರ್ಧೆಯಲ್ಲಿ ಟಿವಿ ಮಾಧ್ಯಮಗಳು ಎಂತಹ ನೀಚ ಮಟ್ಟಕ್ಕೆ ಇಳಿಯುವುದಕ್ಕೂ ಹೇಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೆಸ್ ಕೌನ್ಸಿಲ್ ಇದೆಯಾದರೂ, ಶ್ರೀಸಾಮಾನ್ಯರು ಮಾಧ್ಯಮಗಳ ವಿರುದ್ಧ ದೂರು ನೀಡುವಂತಹ ಮುಕ್ತ ವಾತಾವರಣ ಸಮಾಜದಲ್ಲಿ ಇನ್ನೂ ಇಲ್ಲ. ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದಕ್ಕಾಗಿಯೇ ಕೆಲವರು ನಕಲಿ ಖಾತೆಗಳನ್ನು ತೆರೆದಿರುತ್ತಾರೆ.

‘ಸುಳ್ಳು ಹೇಳುವುದು ಅಭಿವ್ಯಕ್ತಿ ಸ್ವಾತಂತ್ರದ ಭಾಗವೇ ಆಗಿದೆ’ ಎಂದು ಮಾಧ್ಯಮಗಳು ಸ್ವತಃ ನಂಬಿಕೊಂಡು ವರದಿ ಮಾಡುತ್ತಿವೆ. ದೇಶದಲ್ಲಿ ನಡೆದಿರುವ ಬಹುತೇಕ ಕೋಮುಗಲಭೆಗಳಿಗೆ ಇಂಧನ ಸುರಿಯುವಲ್ಲಿ ಇಂತಹ ಮಾಧ್ಯಮಗಳ ಪಾತ್ರ ಬಹುದೊಡ್ಡದು. ಗುಜರಾತ್ ಹತ್ಯಾಕಾಂಡದ ಹಿಂದೆ ಅಲ್ಲಿನ ‘ಸಂದೇಶ’ ಎನ್ನುವ ಪತ್ರಿಕೆಯ ಪಾತ್ರವನ್ನು ಮರೆಯಲು ಸಾಧ್ಯವೇ? ಮಾಧ್ಯಮಗಳು ವದಂತಿಯನ್ನು ವೈಭವೀಕರಿಸಿ ಬರೆದ ಪರಿಣಾಮವಾಗಿಯೇ ಸುರತ್ಕಲ್ ಗಲಭೆ ನಡೆಯಿತು. ಆತ್ಮಹತ್ಯೆಯನ್ನು ಸಾಮೂಹಿಕ ಅತ್ಯಾಚಾರ-ಕೊಲೆ ಎಂದು ಬರೆದ ಕಾರಣಕ್ಕಾಗಿ ತೀರ್ಥಹಳ್ಳಿಯಲ್ಲಿ ಗಲಭೆ ನಡೆಯಿತು. ಕಾರವಾರದಲ್ಲಿ ನಡೆದ ಗಲಭೆಯ ಹಿಂದೆಯೂ ಮಾಧ್ಯಮಗಳ ಸುಳ್ಳು ವರದಿಗಳ ಪಾತ್ರವಿದೆ. ಮಾಧ್ಯಮಗಳು ವರದಿಗಳ ಹೆಸರಲ್ಲಿ ಸುಳ್ಳುಗಳನ್ನು ಛಾಪಿಸಿ ಸಮಾಜದ ಶಾಂತಿಯನ್ನು ಕೆಡಿಸುತ್ತಿರುವಾಗ ‘ಮಾಧ್ಯಮಗಳಿಗೆ ಕಣ್ಗಾವಲು’ ಬೇಡ ಎಂದು ಹೇಳುವುದಾದರೂ ಹೇಗೆ?

 ಆದರೆ ಈ ಕಣ್ಗಾವಲು ಸಮಿತಿ ಮಾಧ್ಯಮ ಹಿತಾಸಕ್ತಿಗೆ, ಪತ್ರಿಕಾ ಧರ್ಮಕ್ಕೆ ಪೂರಕವಾಗಬೇಕು. ಅದರ ಹಿಂದೆ ಪತ್ರಿಕೆಯನ್ನು ನಿಯಂತ್ರಿಸುವ ಗುಪ್ತ ಅಜೆಂಡಾ ಇರಬಾರದು. ಆದುದರಿಂದಲೇ ಈ ಸಮಿತಿಗೆ ಆಯ್ಕೆಯಾಗುವ ಸದಸ್ಯರು ಪತ್ರಿಕೋದ್ಯಮದ ಹಿನ್ನೆಲೆ ಇರುವ ಹಿರಿಯರಾಗಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರೆಸ್ ಕೌನ್ಸಿಲ್ ಸೇರಿದಂತೆ ಮಾಧ್ಯಮ ಸಂಘಟನೆಗಳು ಸೂಚಿಸಿದ ವ್ಯಕ್ತಿಳು ಸದಸ್ಯರಾಗಬೇಕಾಗುತ್ತದೆ. ಅವರಿಗೆ ರಾಷ್ಟ್ರಮಟ್ಟದ ಪತ್ರಿಕೋದ್ಯಮದಲ್ಲಿ ಹಲವು ದಶಕಗಳ ಕಾಲ ದುಡಿದ ಅನುಭವವೂ ಅಗತ್ಯ. ಅಂಥವರಿಂದ ಮಾತ್ರ ಸುದ್ದಿಯ ಸೂಕ್ಷ್ಮತೆಯನ್ನು ಗುರುತಿಸಲು ಸಾಧ್ಯ. ಆದರೆ ಕೇಂದ್ರ ಸರಕಾರ ಇದೀಗ ರಚಿಸಲು ಹೊರಟಿರುವ ಕಣ್ಗಾವಲು ಸಮಿತಿಯಲ್ಲಿರುವ ಸದಸ್ಯರಲ್ಲಿ ಕುರುಡರೇ ಅಧಿಕ ಮಂದಿಯಿದ್ದಾರೆ. ಸದಸ್ಯರ ಹೆಸರುಗಳನ್ನು ಗಮನಿಸುವಾಗಲೇ ಈ ಸಮಿತಿಯನ್ನು ಯಾತಕ್ಕಾಗಿ ರಚಿಸಲಾಗಿದೆ ಎನ್ನುವುದು ಅರ್ಥವಾಗಿ ಬಿಡುತ್ತದೆ. ಸಮಿತಿಯಲ್ಲಿ ಪತ್ರಕರ್ತರಿಗಿಂತ ರಾಜಕೀಯ ನಾಯಕರಿಗೆ ಆದ್ಯತೆಯನ್ನು ನೀಡಿದ್ದಾರೆ. ಸದಸ್ಯರಲ್ಲಿ ನಾಲ್ವರು ಬಿಜೆಪಿಯ ಸಂಸದರಿದ್ದರೆ, ಎಡಿಎಂಕೆಯ ಒಬ್ಬ ಸಂಸದರೂ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಇಂಡಿಯನ್ ನ್ಯೂಸ್‌ಪೇಪರ್ಸ್ ಸೊಸೈಟಿ ಶಿಫಾರಸು ಮಾಡಿರುವ ಸದಸ್ಯರನ್ನು ಸರಕಾರ ತಿರಸ್ಕರಿಸಿದೆ. ಎಡಿಟರ್ ಗಿಲ್ಡ್ ಶಿಫಾರಸನ್ನು ಕೂಡ ಅನರ್ಹಗೊಳಿಸಿದೆ. ಇದೆಲ್ಲದರಿಂದ ಅರ್ಥವಾಗುವುದೇನೆಂದರೆ, ಈ ಸಮಿತಿ ಅಪ್ಪಟವಾಗಿ ರಾಜಕೀಯ ಉದ್ದೇಶದಿಂದ ರಚನೆಯಾಗಿದೆ.

ಇಂದು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುವುದರ ಹಿಂದೆ ಇರುವುದು ರಾಜಕೀಯ ಪಕ್ಷಗಳೇ ಆಗಿವೆ. ಬೇರೆ ಬೇರೆ ರೀತಿಯಲ್ಲಿ ಪತ್ರಿಕೆಗಳನ್ನು, ಪತ್ರಕರ್ತರನ್ನು ಖರೀದಿಸಿ, ಅವರ ಮೂಲಕ ತಮಗೆ ಬೇಕಾದ ಸುದ್ದಿಗಳನ್ನು ಪ್ರಸಾರ ಮಾಡುತ್ತಾರೆ. ಮಾಧ್ಯಮಗಳಲ್ಲಿ ಬರುವ ವದಂತಿ, ಸುಳ್ಳುಸುದ್ದಿಗಳ ಹಿಂದೆ ರಾಜಕಾರಣಿಗಳು ಮತ್ತು ಪತ್ರಕರ್ತರ ಸಮಪಾಲಿದೆ. ಇಂದು ಸಮಿತಿಯಲ್ಲಿ ರಾಜಕಾರಣಿಗಳೇ ಇದ್ದರೆ, ಅವರು ತಮ್ಮ ಹಿತಾಸಕ್ತಿಗೆ ವಿರುದ್ಧವಾದ ಸುದ್ದಿಗಳು ಪ್ರಸಾರವಾಗದಂತೆ ಪತ್ರಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಬಹುದು. ಇದೇ ಸಂದರ್ಭದಲ್ಲಿ ತಮಗೆ ಪೂರಕವಾದ ಸುಳ್ಳು ಸುದ್ದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರಬಹುದು. ಒಂದು ರೀತಿಯಲ್ಲಿ ತೋಳಗಳಿಗೆ ಕುರಿಮಂದೆಯನ್ನು ಕಾಯುವ ಹೊಣೆಗಾರಿಕೆಯನ್ನು ನೀಡಿದಂತಾಗಿದೆ ಈ ಸಮಿತಿ. ಇನ್ನೊಂದು ವಿಪರ್ಯಾಸವೆಂದರೆ, ಸಮಿತಿಯ ಸದಸ್ಯರಲ್ಲೊಬ್ಬರಾಗಿರುವ ಸಂಸದ ಪ್ರತಾಪ ಸಿಂಹ ಬಹಿರಂಗವಾಗಿಯೇ ಸುಳ್ಳು ಸುದ್ದಿಗಳನ್ನು ಪ್ರೋತ್ಸಾಹಿಸಿದವರು. ಅವುಗಳೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದವರು.

‘ಪೋಸ್ಟ್‌ಕಾರ್ಡ್’ ಎನ್ನುವ ವೈಬ್‌ಸೈಟ್ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು, ಉದ್ವಿಗ್ನಕಾರಿ ವದಂತಿಗಳನ್ನು ಹಬ್ಬುವುದರಲ್ಲಿ ಕುಖ್ಯಾತವಾಗಿದೆ. ಇದರ ವಿರುದ್ಧ ಈಗಾಗಲೇ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಸುಳ್ಳು ಸುದ್ದಿಯೊಂದನ್ನು ಹರಡಿ, ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸಿದ ಕಾರಣಕ್ಕಾಗಿ ಇದರ ಸಂಪಾದಕರನ್ನು ಬಂಧಿಸಲಾಯಿತು. ಆದರೆ ತಕ್ಷಣವೇ ಬಿಜೆಪಿಯ ಹಲವು ಮುಖಂಡರು ಇದನ್ನು ಖಂಡಿಸಿ ಹೇಳಿಕೆ ಕೊಟ್ಟರು. ಪೋಸ್ಟ್‌ಕಾರ್ಡ್‌ನ್ನು ಸಮರ್ಥಿಸಿ ಹೇಳಿಕೆ ನೀಡಿದವರಲ್ಲಿ ಪ್ರತಾಪಸಿಂಹ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಈತನೇ ಕಣ್ಗಾವಲಿನ ಸದಸ್ಯನಂತೆ. ಹಾಗಾದರೆ ಈ ಸಮಿತಿಯ ಮೂಲಕ ಸರಕಾರ ಏನನ್ನು ಹೇಳುತ್ತದೆ? ಸರಕಾರದ ವಿರುದ್ಧ ಬರೆಯುವವರನ್ನು ಗಮನಿಸುವುದಕ್ಕಾಗಿ ಈ ಸಮಿತಿಯನ್ನು ನೇಮಿಸಲಾಗಿದೆ ಎನ್ನುವುದರಲ್ಲಿ ಅನುಮಾನವಿದೆಯೇ? ಸರಕಾರ ಮೊದಲು ರಾಜಕಾರಣಿಗಳು ಮಾಡುವ ಭಾಷಣಗಳು ಹಳಿತಪ್ಪದಂತೆ ನೋಡಿಕೊಳ್ಳಲು ಒಂದು ಸಮಿತಿಯನ್ನು ಮಾಡಲಿ. ಅದರಲ್ಲಿ ಬೇಕಾದರೆ ಬೇರೆ ಬೇರೆ ಪಕ್ಷಗಳ ಪ್ರತಿನಿಧಿಗಳಿರಲಿ. ಆದರೆ ಮಾಧ್ಯಮಗಳ ಮೇಲೆ ಕಣ್ಗಾವಲಿಡುವ ಸಮಿತಿಯಲ್ಲಿ ಯಾವ ಕಾರಣಕ್ಕೂ ರಾಜಕಾರಣಿಗಳಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಜೊತೆಗೆ ಮಾಜಿ ನ್ಯಾಯಾಧೀಶರು, ಹಿರಿಯ ಪತ್ರಕರ್ತರು, ಹಿರಿಯ ಲೇಖಕರನ್ನೊಳಗೊಂಡ ಸಮಿತಿಯಿಂದಷ್ಟೇ ಇಂತಹದೊಂದು ಕಾವಲು ಸಾಧ್ಯ. ಇಲ್ಲವಾದರೆ ಕುರುಡರನ್ನೇ ಕಾವಲಿಗೆ ನೇಮಿಸಿದಂತಾದೀತು. ಈ ಕುರುಡರೇ ಮಾಧ್ಯಮವನ್ನು ಇನ್ನಷ್ಟು ದುರುಪಯೋಗಗೊಳಿಸುವ ಸಾಧ್ಯತೆಗಳಿವೆ. ಆದುದರಿಂದ ತಕ್ಷಣ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News