ಬೆಂಗಳೂರು ಜನತೆ ಶೇ.100ರಷ್ಟು ಮತದಾನಕ್ಕೆ ಸಂಕಲ್ಪ ಮಾಡಿ: ಮಂಜುನಾಥ್ ಪ್ರಸಾದ್

Update: 2018-04-08 18:48 GMT

ಬೆಂಗಳೂರು, ಎ.8: ಬಹುತೇಕ ವಿದ್ಯಾವಂತರಿಂದ ಕೂಡಿರುವ ಬೆಂಗಳೂರಿನಲ್ಲಿ ಶೇ.100ರಷ್ಟು ಮತದಾನಕ್ಕೆ ಇಲ್ಲಿನ ನಾಗರೀಕರು ಸಂಕಲ್ಪ ಮಾಡಬೇಕು. ಆ ಮೂಲಕ ಇತರೆ ನಗರ ಹಾಗೂ ಗ್ರಾಮಾಂತರ ಪ್ರದೇಶಕ್ಕೆ ಮಾದರಿಯಾಗಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಭಿಪ್ರಾಯಿಸಿದ್ದಾರೆ.

ರವಿವಾರ ವಿಧಾನಸಭೆ ಚುನಾವಣೆಯ ಅಂಗವಾಗಿ ಮತದಾನದ ಜಾಗೃತಿಗಾಗಿ ಬಿಬಿಎಂಪಿ ಹಾಗೂ ಬಿಬಿಎಂಪಿಯ ಅಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕಬ್ಬನ್ ಪಾರ್ಕ್ ಮುಖ್ಯ ದ್ವಾರದಲ್ಲಿ ಆಯೋಜಿಸಿದ್ದ ರಸ್ತೆ ಓಟ, ಬೀದಿ ನಾಟಕ ಹಾಗೂ ಮತಯಂತ್ರ ಬಳಕೆ ಕುರಿತಂತೆ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 2 ಬಾರಿ ವಿಧಾನಸಭೆ ಚುನಾವಣೆಯಲ್ಲೂ ಬೆಂಗಳೂರು ನಗರದಲ್ಲಿ ಶೇ.50 ರಿಂದ ಶೇ.52 ರಷ್ಟು ಮತದಾನ ಮಾತ್ರ ನಡೆದಿದೆ. ಬಹುತೇಕ ವಿದ್ಯಾವಂತರೇ ಇರುವ ನಗರ ಪ್ರದೇಶಗಳಲ್ಲಿ ಶೇ.100 ರಷ್ಟು ಮತದಾನವಾಗಬೇಕಿದೆ. ಮತದಾನ ಮಾಡುವ ಕುರಿತು ಗ್ರಾಮೀಣ ಪ್ರದೇಶಗಳ ಜನರೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ನಗರ ಪ್ರದೇಶದ ಜನರು ನಿರಾಸಕ್ತಿ ತೊರೆದು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಮೂಲಕ ತಮ್ಮ ಸಂವಿಧಾನ ಬದ್ಧ ಹ್ಕಕನ್ನು ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.

ಎ.14ರ ವರೆಗೂ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ. ನಗರದಲ್ಲಿ ಈಗಾಗಲೇ 8,228 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, 18 ವರ್ಷದ ಮೇಲ್ಪಟ್ಟವರು ತಮ್ಮ ಹೆಸರನ್ನು ಮತಮಟ್ಟಿಯಲ್ಲಿ ಸೇರ್ಪಡೆ ಮಾಡಬಹುದಾಗಿದೆ. ಮತಪಟ್ಟಿಯಲ್ಲಿ ಹೆಸರಿದ್ದು ಗುರುತಿನ ಚೀಟಿ ಕಳೆದುಕೊಂಡಿರುವವರು ಚುನಾವಣಾ ಆಯೋಗ ನಿಗಧಿ ಪಡಿಸಿರುವ ಯಾವುದಾದರೂ ಒಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳ ಮುಂದೆ ಹಾಜರು ಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ಚುನಾವಣೆಯಲ್ಲಿ ಬಳಸುತ್ತಿರುವ ಮತ ಯಂತ್ರಗಳ ಕುರಿತು ಸಾರ್ವಜನಿಕರಲ್ಲಿ ಇರುವ ಸಂಶಯ ನಿವಾರಣೆಗಾಗಿ ಈ ಬಾರಿ ಮತ ಯಂತ್ರಕ್ಕೆ ವಿವಿ ಪ್ಯಾಟ್ (ಓಟರ್ ವೆರಿಫಿಕೇಷನ್ ಪೇಪರ್ ಆಡಿಟ್)ಗಳನ್ನು ಅಳವಡಿಸಲಾಗಿದೆ. ಇದರಿಂದ ಮತದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಮಾಹಿತಿ ನೀಡಿದರು.

ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ: ಇದೇ ಮೊದಲ ಬಾರಿಗೆ ಮತಯಂತ್ರಗಳಿಗೆ ವಿವಿ ಪ್ಯಾಟ್ ಅನ್ನು ಅಳವಡಿಸಿರುವುದರಿಂದ ವಿವಿ ಪ್ಯಾಟ್ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಅಧಿಕಾರಿಗಳು ಜನ ಜಾಗೃತಿ ಮೂಡಿಸಿದರು. ಮತದಾರರು ತಮ್ಮಗಿಷ್ಟ ಬಂದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ನಂತರ ವಿವಿ ಪ್ಯಾಟ್ ನಲ್ಲಿರುವ ಸಣ್ಣ ಪರದೆಯ ಮೇಲೆ 7 ಸೆಕೆಂಡುಗಳ ಕಾಲ ತಾವು ಮತ ಚಲಾಯಿಸಿರುವ ಕುರಿತಂತೆ ಮುದ್ರಿತ ಪೇಪರ್ ಪ್ರದರ್ಶನ ಗೊಳ್ಳಲಿದೆ. ಇದರಿಂದ ಮತದಾರರು ತಾವು ಮಾಡಿರುವ ಮತವನ್ನು ದೃಢೀಕರಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮಮದ ಅಂಗವಾಗಿ ಮೈಸೂರು ರಮಾನಂದರ ಗೆಜ್ಜಿ ಹೆಜ್ಜೆ ರಂಗ ತಂಡದ ಕಲಾವಿದರು ‘ಚುನಾವಣೆ ಸಮಯ’ ಎನ್ನುವ ಬೀದಿ ನಾಟಕ ಮಾಡುವ ಮೂಲಕ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಎನ್ನುವುರ ಕುರಿತು ಜಾಗೃತಿ ಮೂಡಿಸಿದರು.

ಕಬ್ಬನ್ ಪಾರ್ಕ್‌ನ ಮುಖ್ಯ ದ್ವಾರದಿಂದ ಆರಂಭವಾದ ಓಟ ಕಂಠೀರವ ಕ್ರೀಡಾಂಗಣ, ಮಲ್ಯ ಆಸ್ಪತ್ರೆ ನಂತರ ರಾಜಾರಾಮ್ ಮೋಹನ್ ರಸ್ತೆ ಮೂಲಕ ಮಹಾ ನಗರ ಪಾಲಿಕೆ, ನೌಕರರ ಸಹಕಾರ ಸಂಘದ ಬಳಿ ಮುಕ್ತಾಯಗೊಂಡಿತು. ಈ ವೇಳೆ ಚುನಾವಣೆಯ ವಿಶೇಷ ಆಯುಕ್ತ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ದಯಾನಂದ್, ಜಂಟಿ ಆಯುಕ್ತ ಡಾ.ಟಿ.ಎಚ್.ವಿಶ್ವನಾಥ್, ವಿಶೇಷ ಆಯುಕ್ತ ಎಸ್.ಜಿ.ರವೀಂದ್ರ, ನೌಕರ ಸಂಘದ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಎಚ್.ವಿ.ಅಶ್ವತ್ಥ್, ಅಧ್ಯಕ್ಷ ಅಮೃತ ರಾಜ್, ಉಪಾಧ್ಯಕ್ಷ ಟಿ.ಗಂಗಾಧರ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News