ತಾಳೆಯಾಗುತ್ತಿಲ್ಲ ಇವಿಎಂ ತಯಾರಕರು, ಚುನಾವಣಾ ಆಯೋಗದ ಮಾಹಿತಿ

Update: 2018-04-10 14:56 GMT

#ವಿದ್ಯುನ್ಮಾನ ಮತಯಂತ್ರಗಳ ಮೇಲೆ ಸಂಶಯ?

ಮುಂಬೈ, ಎ.10: ಮಾಹಿತಿ ಹಕ್ಕು ಕಾಯ್ದೆಯನ್ವಯ ಸಂಬಂಧಿತ ಇಲಾಖೆಗಳಿಂದ ಇವಿಎಂಗಳ ಬಗ್ಗೆ ಕೇಳಲಾದ ಹಲವು ಪ್ರಶ್ನೆಗಳಿಗೆ ದೊರೆತ ಉತ್ತರಗಳು ಗೊಂದಲಕಾರಿಯಾಗಿವೆ. ಚುನಾವಣಾ ಆಯೋಗವು ಬೇಕಾಬಿಟ್ಟಿಯಾಗಿ ಖರೀದಿಸಿದ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ),  ತಯಾರಕರು ಹಾಗೂ ಖರೀದಿದಾರರಿಂದ ಈ ಬಗ್ಗೆ ದೊರೆತ ಮಾಹಿತಿಗಳು ತಾಳೆಯಾಗಿಲ್ಲದೇ ಇರುವುದು ಹಾಗೂ  ಅಸುರಕ್ಷಿತ ಇವಿಎಂ ಸಾಗಾಟ ವ್ಯವಸ್ಥೆಗಳತ್ತ ಈ  ಉತ್ತರಗಳು ಬೆಳಕು ಚೆಲ್ಲಿವೆ ಎಂದು 'ಇಕನಾಮಿಕ್ ಟೈಮ್ಸ್' ವರದಿ ಮಾಡಿದೆ.

ಇವಿಎಂ ವಿಚಾರವಾಗಿ ಮುಂಬೈ ಮೂಲದ ಆರ್ ಟಿಐ ಕಾರ್ಯಕರ್ತ ಮನೋರಂಜನ್ ಎಸ್. ರಾಯ್ ಒಂದು ವರ್ಷದ ತನಕ  ಹಲವಾರು ಬಾರಿ ಮಾಹಿತಿ ಯಾಚಿಸಿದ್ದು ದೊರೆತ ಮಾಹಿತಿಗಳು ಹಲವಾರು ಪ್ರಶ್ನೆಗಳನ್ನು ಮೂಡಿಸಿವೆ. 

ರಾಯ್ ಅವರ ಆರ್ ಟಿಐ ಅರ್ಜಿಗಳಿಗೆ ದೊರೆತ ಉತ್ತರದಂತೆ 1989-90ರಿಂದ ಮೇ 15, 2017ರ ತನಕ ಚುನಾವಣಾ ಆಯೋಗ ಒಟ್ಟು 1,005,662  ಬ್ಯಾಲೆಟಿಂಗ್ ಯೂನಿಟ್, 928,049  ಕಂಟ್ರೋಲ್ ಯೂನಿಟ್  ಗಳನ್ನು ಭಾರತ್ ಇಲೆಕ್ಟ್ರಾನಿಕ್ ಲಿಮಿಟೆಡ್ ನಿಂದ (ಬಿಇಎಲ್) ಖರೀದಿಸಿದ್ದರೆ,  1,014,644 ಬ್ಯಾಲೆಟಿಂಗ್ ಯೂನಿಟ್ ಹಾಗೂ 9,34,031  ಕಂಟ್ರೋಲ್ ಯೂನಿಟ್ ಗಳನ್ನು ಇಲೆಕ್ಟ್ರಾನಿಕ್ಸ್ ಕಾರ್ಪ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ನಿಂದ ಖರೀದಿಸಿದ್ದಾಗಿ ಮಾಹಿತಿ ದೊರೆತಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಲ್ಲಿಸಿದ್ದ ಆರ್ ಟಿಐ ಅರ್ಜಿಗೆ ದೊರೆತ ಉತ್ತರದಲ್ಲಿ ಸರಕಾರಕ್ಕೆ  ಒಟ್ಟು 13,95,306 ಬ್ಯಾಲೆಟಿಂಗ್ ಯೂನಿಟ್ ಹಾಗೂ 9,30,716 ಕಂಟ್ರೋಲಿಂಗ್ ಯೂನಿಟ್ ಗಳ ಖರೀದಿ ಬಗ್ಗೆ 2016-17ರಲ್ಲಿ ಮಾಹಿತಿ ದೊರಕಿತ್ತು.

ಬಿಇಎಲ್ ಜೂನ್ 9, 2017ರಂದು ನೀಡಿದ್ದ ಉತ್ತರದಲ್ಲಿ ಅದು 1,25,000 ಕಂಟ್ರೋಲ್ ಯೂನಿಟ್ ಹಾಗೂ 1,90,000 ಬ್ಯಾಲೆಟಿಂಗ್ ಯೂನಿಟ್ ಗಳನ್ನು  ಚುನಾವಣಾ ಆಯೋಗಕ್ಕೆ 2010ರಿಂದ 2017ರ ತನಕ ಒದಗಿಸಿದ್ದಾಗಿ ತಿಳಿಸಿತ್ತು.

ಇಸಿಐಲ್ ತಾನು  ಚುನಾವಣಾ ಆಯೋಗಕ್ಕೆ 2010ರಿಂದ 2017ರ ಅವಧಿಯಲ್ಲಿ 2,22,925 ಬ್ಯಾಲೆಟಿಂಗ್ ಯೂನಿಟ್ ಹಾಗೂ 2,11,875 ಕಂಟ್ರೋಲ್ ಯೂನಿಟ್ ಗಳನ್ನು ಒದಗಿಸಿದ್ದಾಗಿ ಹಾಗೂ ಅದೇ ಅವಧಿಯಲ್ಲಿ 4,97,348 ಬ್ಯಾಲೆಟಿಂಗ್ ಯೂನಿಟ್ಸ್ ಹಾಗೂ 3,07,030 ಕಂಟ್ರೋಲ್ ಯೂನಿಟ್ ಸರಬರಾಜು ಮಾಡಿದ್ದಾಗಿ ತಿಳಿಸಿತ್ತು.

ಚುನಾವಣಾ ಆಯೋಗ ಒದಗಿಸಿದ ಅಂಕಿಸಂಖ್ಯೆಗಳಿಗೆ ಹೋಲಿಸಿದಾಗ  ಬಿಇಎಲ್ ಹಾಗೂ ಇಸಿಐಎಲ್ ಒದಗಿಸಿದ ಅಂಕಿಸಂಖ್ಯೆಗಳಲ್ಲಿ ಸಾಕಷ್ಟು  ವ್ಯತ್ಯಾಸವಿದೆ ಎಂದು ಹೇಳುವ ರಾಯ್ ಇದರಿಂದ ಹಲವು ಶಂಕೆಗಳು ಮೂಡುತ್ತವೆ ಎಂದು ತಿಳಿಸುತ್ತಾರೆ.

ಇವಿಎಂಗಳ ಖರೀದಿಗಾಗಿ 2006-2007 ಹಾಗೂ 2016-17 ಅವಧಿಯಲ್ಲಿ ಹಣಪಾವತಿಗೆ ಸಂಬಂಧಿಸಿದ ಮಾಹಿತಿಗಳು ಕೂಡ  ಗೊಂದಲಕಾರಿಯಾಗಿದೆ. ಚುನಾವಣಾ ಆಯೋಗವು ತಾನು ಇವಿಎಂಗಳಿಗಾಗಿ  5,360,175,485 ರೂ. ವ್ಯಯಿಸಿದ್ದಾಗಿ ತಿಳಿಸಿದರೆ ಬಿಇಎಲ್ ತನ್ನ ಉತ್ತರದಲ್ಲಿ ತನಗೆ 6,525,644,000 ರೂ ದೊರಕಿದ್ದಾಗಿ ತಿಳಿಸಿದೆ. ಇಲ್ಲಿ ರೂ 116.55 ಕೋಟಿ ಹೆಚ್ಚುವರಿ ಮೊತ್ತ ಕಾಣ ಸಿಗುತ್ತದೆ.

ಅದೇ ರೀತಿ ಇವಿಎಂಗಳ  ಸಾಗಾಟ ವಾಹನಗಳ ಬಗ್ಗೆಯೂ ಸಂಶಯವೆದ್ದಿದೆ. ನಿಗದಿತ ಲೆಕ್ಕಾಚಾರಗಳಂತೆ 32x8x8 ಕಂಟೇನರ್ ಒಟ್ಟು 199 ಬಿಯು ಹಾಗೂ 261 ಸಿಯುಗಳನ್ನು ಸಾಗಿಸಬಹುದು ಹಾಗೂ 20x8x8 ಅಡಿ ಕಂಟೇನರ್ 124 ಬಿಯು  ಅಥವಾ 163  ಸಿಯು ಸಾಗಿಸಬಹುದು. ಆದರೆ  ಬಿಇಎಲ್ ತಾನು  ಪ್ರತಿ ಕಂಟೇನರ್ ನಲ್ಲಿ 320ರಿಂದ 400 ಯೂನಿಟ್ ಗಳನ್ನು ಸಾಗಿಸಿದ್ದಾಗಿ ತಿಳಿಸಿದೆ. ಹಾಗಾದರೆ ಹೆಚ್ಚುವರಿ ಇವಿಎಂ ಸರಬರಾಜು ಮಾಡಲಾಗಿತ್ತೇ ಎಂಬ ಪ್ರಶ್ನೆಯಿದೆ.

ಇವಿಎಂ ಸಾಮರ್ಥ್ಯದ ಬಗೆಗಿನ ಮಾಹಿತಿಗಳೂ ಗೊಂದಲಕಾರಿ. "1989ರಿಂದ 2000 ತನಕ ಇಸಿಐಲ್ ಇವಿಎಂಗಳ ಸಾಮರ್ಥ್ಯ 64 ಅಭ್ಯರ್ಥಿಗಳು ಹಾಗೂ 3,902 ಮತದಾರರಾಗಿತ್ತು. 2014-15ರಲ್ಲಿ ಅದನ್ನು ಬದಲಾಯಿಸಿ 384 ಅಭ್ಯರ್ಥಿಗಳು ಹಾಗೂ 2000 ಮತದಾರರಿಗೆ ಮತದಾನ ನಡೆಸಲು ಅನುವು ಮಾಡುವಷ್ಟು ಸಾಮರ್ಥ್ಯ ಹೊಂದುವಂತೆ ಮಾಡಲಾಗಿತ್ತು.  2014-15ರಲ್ಲಿ ಇವಿಎಂ ಸಾಮರ್ಥ್ಯ 60 ಅಭ್ಯರ್ಥಿಗಳು ಹಾಗೂ 8000 ಮತದಾರರು. ಆದರೆ ವಿವಿಪ್ಯಾಟ್ ಇವಿಎಂ ಸಾಮರ್ಥ್ಯ ಕೇವಲ 1,500 ಮತದಾರರು ಎಂದು ರಾಯ್ ಹೇಳುತ್ತಾರೆ.

"ಬಿಇಎಲ್ ತನ್ನ ಉತ್ತರದಲ್ಲಿ 2005ರ ತನಕ ಇವಿಎಂಗಳ ಸಾಮರ್ಥ್ಯ 3,824 ಮತದಾರರಾಗಿದ್ದರೆ, ಅದು 2006ರಲ್ಲಿ 2,000ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ಇವಿಎಂಗಳಲ್ಲಿ ಕೇವಲ 16 ಅಭ್ಯರ್ಥಿಗಳಿಗೆ ಜಾಗವಿದೆ'' ಎಂದು ರಾಯ್ ತಿಳಿಸುತ್ತಾರೆ.

ಇವಿಎಂಗಳ ಬಗ್ಗೆ  ಅಗತ್ಯ ಎಲ್ಲಾ ಮಾಹಿತಿಗಳು ಹಾಗೂ ದಾಖಲೆಗಳನ್ನು ಒದಗಿಸುವಂತೆ ಸಂಬಂಧಿತರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪವಾರ್ ಆ್ಯಂಡ್ ಕಂಪೆನಿ ಮೂಲಕ ರಾಯ್ ಅವರು ಬಾಂಬೆ ಹೈಕೋರ್ಟಿನಲ್ಲಿ ಅಪೀಲು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News