ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಏನು ಪ್ರಯೋಜನ: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

Update: 2018-04-11 16:10 GMT

ಬೆಂಗಳೂರು, ಎ.11: ಜೆಡಿಎಸ್‌ನ ಬಂಡಾಯ ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ವಿಧಾನಸಭಾಧ್ಯಕ್ಷರು ಸದ್ಯ ಬಂಡಾಯ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೆ ಉಂಟಾಗುವ ಪ್ರಯೋಜನ ಹಾಗೂ ಪರಿಣಾಮಗಳು ಏನು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಬುಧವಾರ ಸೂಚಿಸಿದೆ.

ಜೆಡಿಎಸ್‌ನ ಏಳು ಜನ ಬಂಡಾಯ ಶಾಸಕರ ಅನರ್ಹತೆ ಮಾಡಲು ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಕೋರಿ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಈ ಹಿಂದೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಹೀಗಾಗಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲು ಅರ್ಹರಿದ್ದು, ಆ ಕುರಿತು ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೆಡಿಎಸ್‌ನ ಬಂಡಾಯ ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದರಿಂದ ಅವರನ್ನು ಅನರ್ಹಗೊಳಿಸಬಹುದೇ? ಎಂದು ಪ್ರಶ್ನಿಸಿದರು.

ಉದಯ ಹೊಳ್ಳ ಉತ್ತರಿಸಿ, ಬಂಡಾಯ ಶಾಸಕರು ಚುನಾವಣೆ ವೇಳೆ ಅಡ್ಡಮತದಾನ ಮಾಡುವ ಮೂಲಕ ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಆ ದಿನದಿಂದಲೇ ಅನರ್ಹತೆಗೆ ಅವರು ಅರ್ಹರಾಗುತ್ತಾರೆ. ಅನರ್ಹತೆ ಪರಿಣಾಮ ಅವರಿಗೆ ಅನ್ವಯವಾಗುತ್ತದೆ. ವಿಪರ್ಯಾಸವೆಂದರೆ ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಇದರಿಂದಾಗಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಉಂಟಾಗುವ ಪ್ರಯೋಜನ ಹಾಗೂ ಪರಿಣಾಮಗಳೇನು? ಎಂಬುದನ್ನು ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಂತೆ ಹಿರಿಯ ವಕೀಲರಿಗೆ ಸೂಚಿಸಿದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಎ.16ಕ್ಕೆ ಮುಂದೂಡಿದರು.

ಜೆಡಿಎಸ್‌ನ ಬಂಡಾಯ ಶಾಸಕರಾದ ಜಮೀರ್ ಅಹಮದ್ ಖಾನ್, ಚೆಲುವರಾಯ ಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಎಚ್.ಸಿ.ಬಾಲಕೃಷ್ಣ, ಆರ್.ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ ಹಾಗೂ ಎಸ್.ಭೀಮಾನಾಯ್ಕಾ 2016ರ ಜೂನ್ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಸಿ ಅಡ್ಡ ಮತದಾನ ಮಾಡಿದ್ದರು. ಹೀಗಾಗಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ-1986ರ ಅನ್ವಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರು ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News