ವಿಶೇಷ ಹಂಗಾಮಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ಖುದ್ದು ಹಾಜರಿರಲು ಹೈಕೋರ್ಟ್ ಆದೇಶ

Update: 2018-04-11 18:31 GMT

ಬೆಂಗಳೂರು, ಎ.11: ಜಮೀನಿನ ಮಾಲಕರಿಗೆ ಖಾತಾವನ್ನು ವರ್ಗಾಯಿಸಿ ಕೊಡಿಯೆಂದು ಕೆಳ ನ್ಯಾಯಾಲಯ ಆದೇಶಿಸಿದ್ದರೂ ವರ್ಗಾಯಿಸಿ ಕೊಡದ ಹಿನ್ನೆಲೆಯಲ್ಲಿ ಹೈಕೋರ್ಟ್, ಬೆಂಗಳೂರು ಉತ್ತರ ಉಪ ವಿಭಾಗದ ವಿಶೇಷ ಹಂಗಾಮಿ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್‌ಗೆ ಹೈಕೋರ್ಟ್, ಖುದ್ದು ಹಾಜರಿರಲು ಆದೇಶಿಸಿದೆ.

ಈ ಸಂಬಂಧ ಎ.ಶಕುಂತಲಾ ಸೇರಿ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಎಸ್.ಸುನೀಲ್‌ದತ್ತ ಯಾದವ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿ, ಅರ್ಜಿ ವಿಚಾರಣೆಯನ್ನು ಎ.17ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಪಿ.ಎನ್.ಮನಮೋಹನ್ ಅವರು, ಕೆ.ಆರ್.ಪುರಂನಲ್ಲಿರುವ 11 ಎಕರೆ ಜಮೀನಿಗೆ ಸರಕಾರ ಯಾವುದೇ ಕಾರಣವನ್ನು ನೀಡದೆ, ಆ ಜಮೀನಿಗೆ ಸರಕಾರಿ ಜಾಗವೆಂದು ಬೋರ್ಡ್ ಹಾಕಿತ್ತು. ಆದರೆ, ಬೆಂಗಳೂರಿನ ಕೆಳ ನ್ಯಾಯಾಲಯವು ಸರಕಾರಿ ಬೋರ್ಡ್‌ನ್ನು ತೆಗೆದು ಜಮೀನಿನ ಮಾಲಕರಿಗೆ ಜಮೀನಿನ ಖಾತಾವನ್ನು ವರ್ಗಾಯಿಸಬೇಕೆಂದು ಆದೇಶಿಸಿತ್ತು. ಆದರೂ ಸರಕಾರ ಜಮೀನಿನ ಖಾತಾವನ್ನು ವರ್ಗಾಯಿಸದೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಬೆಂಗಳೂರು ಉತ್ತರ ಉಪ ವಿಭಾಗದ ವಿಶೇಷ ಹಂಗಾಮಿ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್‌ಗೆ ಹೈಕೋರ್ಟ್, ಖುದ್ದು ಹಾಜರಿರಲು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News