ಇದೇನಾ ಸಂಸ್ಕೃತಿ?

Update: 2018-04-12 04:31 GMT

ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಉತ್ತರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದ ಆ ರಾಜ್ಯ ಕೆಟ್ಟ ಕಾರಣಗಳಿಗಾಗಿ ದೇಶಾದ್ಯಂತ ಸುದ್ದಿಯಾಗುತ್ತಿದೆ. ಸ್ವತಃ ಆದಿತ್ಯನಾಥ್ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಅವರ ಪಕ್ಷ, ಹಿಂಸಾಚಾರ, ಭಯದ ತಳಹದಿಯಲ್ಲಿ ಕಟ್ಟಲ್ಪಟ್ಟಿರುವುದು. ಇಂತಹ ಹಿನ್ನೆಲೆಯಿರುವ ನಾಯಕರ ಕೈಗೆ ಒಂದು ರಾಜ್ಯದ ಚುಕ್ಕಾಣಿಯನ್ನು ನೀಡಿದರೆ ಏನಾಗಬೇಕೋ ಅದೇ ಈಗ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿದೆ. ವರ್ಷದ ಹಿಂದೆ, ಆಮ್ಲಜನಕ ಸಿಲಿಂಡರ್‌ಗಳ ಕೊರತೆಯಿಂದಾಗಿ ನೂರಾರು ಮಕ್ಕಳು ಒಂದೇ ವಾರದಲ್ಲಿ ಮೃತಪಟ್ಟರು. ತನ್ನ ಸರಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು, ಸರಕಾರ ಅಮಾಯಕರನ್ನು ಆರೋಪಿ ಸ್ಥಾನಗಳಲ್ಲಿ ನಿಲ್ಲಿಸಿತು. ಗೋರಕ್ಷಕರ ವೇಷದಲ್ಲಿರುವ ಗೂಂಡಾಗಳು ಪೊಲೀಸರ ಸ್ಥಾನಗಳನ್ನು ತುಂಬುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ಭಾವನಾತ್ಮಕವಾಗಿ ಜನರನ್ನು ಮರುಳು ಮಾಡುವ ಕಪಟ ಯೋಜನೆಗಳಷ್ಟೇ ಜಾರಿಗೆ ಬರುತ್ತಿವೆ. ಮನುಷ್ಯರಿಗೇ ಯೋಗ್ಯ ಚಿಕಿತ್ಸೆ ಒದಗಿಸಲು ವಿಫಲವಾಗಿರುವ ಸರಕಾರ ಗೋವುಗಳಿಗೆ ಅ್ಯಂಬುಲೆನ್ಸ್ ಒದಗಿಸಲು ಮುಂದಾಗಿದೆ. ರಾಮಾಯಣ ಮ್ಯೂಸಿಯಂನ ಹೆಸರಿನಲ್ಲಿ ಕೋಟ್ಯಂತರ ಹಣ ವ್ಯಯ ಮಾಡುತ್ತಿದೆ.

ಸರಕಾರದ ನಿರಂತರ ವೈಫಲ್ಯದ ಕಾರಣಕ್ಕಾಗಿಯೇ, ಇತ್ತೀಚಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಈ ಹಿಂದೆ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಬಿಜೆಪಿ ಹೀನಾಯವಾಗಿ ಸೋತಿತು. ಇಷ್ಟಾದರೂ ಸರಕಾರ ಪಾಠ ಕಲಿತಂತಿಲ್ಲ. ಉತ್ತರ ಪ್ರದೇಶದಲ್ಲಿ ಜಾತಿ ದೌರ್ಜನ್ಯ ಮಿತಿ ಮೀರುತ್ತಿದೆ. ಇತ್ತೀಚಿನ ಭಾರತ್ ಬಂದ್‌ನಲ್ಲಿ ದಲಿತರನ್ನು ಗುಂಡಿಟ್ಟು ಕೊಲ್ಲಲಾಯಿತು. ದಲಿತರು ಸಾಮೂಹಿಕವಾಗಿ ಗ್ರಾಮ ತೊರೆಯುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ರೇಷನ್ ಅಂಗಡಿಯಲ್ಲಿ ಕಡಿಮೆ ತೂಕವನ್ನು ಪ್ರಶ್ನಿಸಿದ ವೃದ್ಧೆಯನ್ನು ಥಳಿಸಿ ಕೊಲ್ಲಲಾಯಿತು. ದಲಿತ ವ್ಯಕ್ತಿಯೊಬ್ಬ ತನ್ನ ಮದುವೆಗೆ ದಿಬ್ಬಣ ಹೋಗುವುದು, ಕುದುರೆಯೇರುವುದೂ ಈ ರಾಜ್ಯದಲ್ಲಿ ಅಪರಾಧವಾಗುತ್ತದೆ. ಇದೀಗ ಬಿಜೆಪಿಯ ಶಾಸಕನೇ ಅತ್ಯಾಚಾರ ಪ್ರಕರಣವೊಂದರಲ್ಲಿ ಗುರುತಿಸಿಕೊಂಡಿದ್ದಾನೆ. ನ್ಯಾಯ ಕೇಳಿ ಮುಖ್ಯಮಂತ್ರಿಯ ನಿವಾಸದ ಮುಂದೆ ಧರಣಿ ಕೂತ ಮರುದಿನವೇ, ಸಂತ್ರಸ್ತೆಯ ತಂದೆ ಬರ್ಬರವಾಗಿ ನ್ಯಾಯಾಂಗ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಹೇಗೆ ಜಂಗಲ್ ರಾಜ್ ಆಗಿ ಪರಿವರ್ತನೆ ಹೊಂದಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗಾರ್ ಮತ್ತು ಆತನ ಸಹೋದರ ತರುಣಿಯೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದರೆ ಅವರು ಅದನ್ನು ಸ್ವೀಕರಿಸುವುದಕ್ಕೆ ಸಿದ್ಧರಿರಲಿಲ್ಲ. ಅಷ್ಟೇ ಅಲ್ಲ, ಇಡೀ ಕುಟುಂಬ ಭಯದ ವಾತಾವರಣದಲ್ಲಿ ಬದುಕುವಂತಹ ಸನ್ನಿವೇಶ ನಿರ್ಮಾಣವಾಯಿತು. ರಕ್ಷಣೆ ನೀಡಬೇಕಾದ ಪೊಲೀಸರೇ ಕುಟುಂಬಕ್ಕೆ ದೂರು ನೀಡದಂತೆ ಬೆದರಿಕೆಯೊಡ್ಡ ತೊಡಗಿದರು. ಸಂತ್ರಸ್ತೆಯ ಕುಟುಂಬ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು.

ಇಲ್ಲಿ ಜನಪ್ರತಿನಿಧಿಯೇ ಆರೋಪಿಯಾಗಿರುವುದರಿಂದ ನ್ಯಾಯ ಸಿಗುವುದು ಕಷ್ಟ ಎನ್ನುವುದು ಕುಟುಂಬಕ್ಕೆ ಗೊತ್ತಿತ್ತು. ಆದುದರಿಂದ ನೇರವಾಗಿ ಮುಖ್ಯಮಂತ್ರಿ ನಿವಾಸದ ಮುಂದೆಯೇ ಕುಟುಂಬ ಪ್ರತಿಭಟನೆ ನಡೆಸಿತು ಮತ್ತು ಆತ್ಮಹತ್ಯೆಗೆ ಯತ್ನಿಸಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಮಧ್ಯಪ್ರವೇಶ ಅತ್ಯಗತ್ಯವಾಗಿತ್ತು. ತನ್ನನ್ನು ತಾನು ಸನ್ಯಾಸಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ, ಒಬ್ಬ ಹೆಣ್ಣಿನ ಮೇಲೆ ನಡೆದ ಅತ್ಯಾಚಾರವನ್ನು ಗಂಭೀರವಾಗಿ ಸ್ವೀಕರಿಸಬೇಕಾಗಿತ್ತು. ಸಂಸ್ಕೃತಿಯ ಕುರಿತಂತೆ ವೇದಿಕೆಗಳಲ್ಲಿ ಗಂಟೆಗಟ್ಟಲೆ ಕೊರೆಯುವ ಆದಿತ್ಯನಾಥ್, ತಾನು ಧರಿಸಿರುವ ಕಾವಿಗೆ ನ್ಯಾಯ ಕೊಡುವುದಕ್ಕಾದರೂ, ಆ ಕುಟುಂಬವನ್ನು ಭೇಟಿ ಮಾಡಿ ಅವರನ್ನು ಸಂತೈಸಬೇಕಾಗಿತ್ತು. ಆದರೆ ದುರಂತವೆಂದರೆ, ಆತ್ಮಹತ್ಯೆಗೆ ಯತ್ನಿಸಿದ ಕುಟುಂಬವನ್ನೇ ಬಂಧಿಸಲಾಯಿತು. ಜೊತೆಗೆ ಸಂತ್ರಸ್ತೆಯ ತಂದೆಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಯಿತು. ಸಾಧಾರಣವಾಗಿ ಪೊಲೀಸ್ ಕಸ್ಟಡಿಯಲ್ಲಿ ಲಾಕಪ್ ಡೆತ್ ಸಂಭವಿಸುತ್ತವೆ. ಇಲ್ಲಿ ನೋಡಿದರೆ ನ್ಯಾಯಾಂಗ ಕಸ್ಟಡಿಯಲ್ಲೇ ಸಂತ್ರಸ್ತೆಯ ತಂದೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಇದು ನೇರವಾಗಿ ನ್ಯಾಯಾಂಗಕ್ಕೆ ಮಾಡಿರುವ ಅವಮಾನವಾಗಿದೆ. ಇದೀಗ ಸಂತ್ರಸ್ತೆ, ತನ್ನ ತಂದೆಯನ್ನು ಶಾಸಕನ ಸೂಚನೆಯಂತೆ ಪೊಲೀಸರು ಕೊಂದು ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಕಸ್ಟಡಿಯಲ್ಲಿ ಈ ಸಾವು ನಡೆದ ಬಳಿಕವಷ್ಟೇ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸಾವಿಗೆ ಸಂಬಂಧಿಸಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಕೇಂದ್ರದಿಂದ ಒತ್ತಡ ತೀವ್ರವಾದ ಬಳಿಕ, ಶಾಸಕನ ಸೋದರನನ್ನು ಬೇಕೋ ಬೇಡವೋ ಎಂಬಂತೆ ಬಂಧಿಸಲಾಗಿದೆ. ಆದರೆ ಮುಖ್ಯ ಆರೋಪಿಯಾಗಿರುವ ಶಾಸಕನನ್ನು ಇನ್ನೂ ಬಂಧಿಸಲಾಗಿಲ್ಲ. ಈ ಬಂಧನ ನಡೆದಿರುವುದು ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಅಲ್ಲ, ಸಂತ್ರಸ್ತೆಯ ತಂದೆಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ. ಇದೀಗ ಸಂತ್ರಸ್ತೆಯ ಬಾಯಿ ಮುಚ್ಚಿಸಲು ವ್ಯವಸ್ಥೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇಡೀ ಕುಟುಂಬ ಎರಡೆರಡು ಆಘಾತಗಳಿಂದ ತತ್ತರಿಸಿದೆ. ಒಂದೆಡೆ ತರುಣಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನ್ಯಾಯ ಕೇಳಿದ ತಂದೆ ನಿಗೂಢವಾಗಿ ನ್ಯಾಯಾಂಗ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದಾರೆ. ನ್ಯಾಯಾಂಗ ಕಸ್ಟಡಿಯಲ್ಲೇ ದೂರು ದಾರರಿಗೆ ಭದ್ರತೆ ಇಲ್ಲ ಎಂದ ಮೇಲೆ, ಹೊರಗಡೆ ಅವರ ಸ್ಥಿತಿ ಹೇಗಿರಬಹುದು? ಇದೇ ಸಂದರ್ಭದಲ್ಲಿ ಸಂತ್ರಸ್ತೆಯನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

ಇಲ್ಲಿ ಕನಿಷ್ಠ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಆಕೆ ದೂರಿಕೊಂಡಿದ್ದಾರೆ. ಪೊಲೀಸರು ಎಷ್ಟರಮಟ್ಟಿಗೆ ಆರೋಪಿಗಳ ಜೊತೆಗಿದ್ದಾರೆ ಎಂದರೆ, ಎಫ್‌ಐಆರ್‌ನ್ನೇ ತಿರುಚಿರುವುದು ಬಹಿರಂಗವಾಗಿದೆ. ಜೊತೆಗೆ ಹಣ ಬಲ ಮತ್ತು ದೈಹಿಕ ಬಲವನ್ನು ಬಳಸಿ ಪ್ರಕರಣವನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ. ಆದರೆ ಈವರೆಗೂ ಕಾವಿಧಾರಿ ಆದಿತ್ಯನಾಥ್ ಯಾವ ಹೇಳಿಕೆಯನ್ನೂ ನೀಡಿಲ್ಲ. ತರುಣಿ ಉದ್ದೇಶಪೂರ್ವಕವಾಗಿ ಶಾಸಕನ ಮೇಲೆ ಆರೋಪ ಮಾಡುತ್ತಿದ್ದಾಳೆ ಎಂದು ಬೇರೆ ಬೇರೆ ಸಾಕ್ಷಿಗಳ ಮೂಲಕ ಹೇಳಿಸಲಾಗುತ್ತಿದೆ. ಆದರೆ ಯಾವ ತರುಣಿಯಾದರೂ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸುಳ್ಳು ಹೇಳಲು ಸಾಧ್ಯವೇ? ವೈದ್ಯಕೀಯ ತಪಾಸಣೆಯನ್ನೇ ನಡೆಸದೇ ಇಂತಹ ಬೀಸು ಹೇಳಿಕೆಯಿಂದ ಒಬ್ಬ ಶಾಸಕ ಪಾರಾಗುತ್ತಾನೆ ಎಂದ ಮೇಲೆ, ಪ್ರಧಾನಮಂತ್ರಿಯವರ ‘ಬೇಟಿ ಬಚಾವೋ’ ಘೋಷಣೆಗೆ ಏನು ಅರ್ಥ ಉಳಿಯಿತು? ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸದ ನಾಟಕವೊಂದನ್ನು ಆಡಲು ಸಿದ್ಧತೆ ನಡೆಸುತ್ತಿದ್ದಾರೆ. ಅವರು ಉಪವಾಸ ನಡೆಸಬೇಕಾದ ಸ್ಥಳ ಉತ್ತರ ಪ್ರದೇಶವಾಗಿದೆ. ಆದಿತ್ಯನಾಥ್ ನಿವಾಸದ ಮುಂದೆ ಪ್ರಧಾನಮಂತ್ರಿ ಉಪವಾಸ ಕೂತು, ಆ ತರುಣಿಗೆ ನ್ಯಾಯ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News