ಕಾಶ್ಮೀರ: ಪಿಡಿಪಿ- ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕು

Update: 2018-04-12 04:17 GMT

ಶ್ರೀನಗರ, ಎ.12: ಬಕೆರ್‌ವಾಲ್ ಅಲೆಮಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, ರಾಜ್ಯದಲ್ಲಿ ಕೋಮು ಧ್ರುವೀಕರಣಕ್ಕೆ ಕಾರಣವಾಗಿದೆ. ಜತೆಗೆ ಆಡಳಿತಾರೂಢ ಪಿಡಿಪಿ- ಬಿಜೆಪಿ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ.

ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿಯನ್ನು ಈ ಸಂಚಿನ ರೂವಾರಿಯಾಗಿ ಹೆಸರಿಸಿ, ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಪೊಲೀಸರ ಕ್ರಮವನ್ನು ಮೈತ್ರಿ ಸರ್ಕಾರದ ಇಬ್ಬರು ಬಿಜೆಪಿ ಸಚಿವರು ಪ್ರಶ್ನಿಸಿದ್ದಾರೆ. ಬಕೆರ್‌ವಾಲ್ ಸಮುದಾಯವನ್ನು ಕಥೂವಾದ ರಸಾನ ಗ್ರಾಮದಿಂದ ಓಡಿಸುವ ಸಲುವಾಗಿ ಈ ಅತ್ಯಾಚಾರ ಹಾಗೂ ಕೊಲೆ ಕೃತ್ಯ ಎಸಗಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಅಭಿಪ್ರಾಯಪಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಲ್ಪಸಂಖ್ಯಾತ ಡೋಗ್ರಾಗಳನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿ ಬುಧವಾರ ಜಮ್ಮು ಹೈಕೋರ್ಟ್ ವಕೀಲರ ಸಂಘ ಜಮ್ಮು ಬಂದ್ ಗೆ ಕರೆ ನೀಡಿತ್ತು. ಪೊಲೀಸರು ತಮ್ಮ ಮನಸ್ಸಿಗೆ ತೋಚಿದವರನ್ನು ಬಂಧಿಸಿದ್ದಾರೆ ಎಂದು ಬಿಜೆಪಿ ಮುಖಂಡರಾದ ಕೈಗಾರಿಕಾ ಸಚಿವ ಚಂದ್ರಪ್ರಕಾಶ್ ಗಂಗಾ ಹಾಗೂ ಅರಣ್ಯ ಸಚಿವ ಲಾಲ್‌ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಆಗ್ರಹಿಸಿದ್ದಾರೆ. ಈ ಇಬ್ಬರೂ ಸಚಿವರು ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು.

ಜನವರಿ 10ರಂದು ಮನೆ ಬಳಿಯ ಅರಣ್ಯದಿಂದ ಬಾಲಕಿ ನಾಪತ್ತೆಯಾಗಿದ್ದಳು. ಒಂದು ವಾರ ಬಳಿಕ ಆಕೆಯ ಮೃತದೇಹ ಪತ್ತೆಯಾಗಿದ್ದು, ಪದೇ ಪದೇ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಆರೋಪಪಟ್ಟಿ ವಿವರಿಸಿದೆ.

ಈ ಮಧ್ಯೆ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಹೇಳಿಕೆ ನೀಡಿ, ಬಿಜೆಪಿಯ ಒತ್ತಡ ತಂತ್ರಕ್ಕೆ ಪಿಡಿಪಿ ಮಣಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಏಕತಾ ಮಂಚ್ ಹೆಸರಿನಲ್ಲಿ ಒಂದು ಗುಂಪು ಇತ್ತೀಚೆಗೆ ತ್ರಿವರ್ಣ ಧ್ವಜದೊಂದಿಗೆ ಪ್ರತಿಭಟನೆ ನಡೆಸಿ, ಗುಜ್ಜಾರ್ ಹಾಗೂ ಬಕೇರ್‌ವಾಲ್ ಬುಡಕಟ್ಟು ಜನಾಂಗ ಕಥೂವಾದಲ್ಲಿ ನೆಲೆಸುವುದನ್ನು ವಿರೋಧಿಸಿತ್ತು. ಬಾಲಕಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾದ ಪೊಲೀಸ್ ಅಧಿಕಾರಿಗಳನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿತ್ತು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೂಡಾ ಇದರಲ್ಲಿ ಭಾಗವಹಿಸಿದ್ದರು.

ರ್ಯಾಲಿಯನ್ನು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಟುವಾಗಿ ಟೀಕಿಸಿದ್ದರು. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಕಾಶ್ಮೀರ ಕಣಿವೆಯ ಕೆಲವೆಡೆ ತನ್ನ ಛಾಪು ಕಳೆದುಕೊಂಡಿರುವ ಪಿಡಿಪಿ, ಕೆಲವೆಡೆ ಸ್ಥಳೀಯರ ಆಕ್ರೋಶವನ್ನೂ ಎದುರಿಸಿತ್ತು. ಈ ಮಧ್ಯೆ ಸಿಎಂ ಬುಧವಾರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಭದ್ರತಾ ಸ್ಥಿತಿ ಬಗ್ಗೆ ಚರ್ಚಿಸಿದರು. ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಬಿಜೆಪಿ ಅಡ್ಡಿಪಡಿಸಿದರೆ, ಮೈತ್ರಿ ಮುರಿದುಕೊಳ್ಳಬೇಕಾದೀತು ಎಂದು ಪಿಡಿಪಿ ಸಚಿವ ಅಲ್ತಾಫ್ ಬುಖಾರಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News