ಬೆಂಗಳೂರು: ಬಿಜೆಪಿ ನಾಯಕರಿಂದ ಉಪವಾಸ ಸತ್ಯಾಗ್ರಹ

Update: 2018-04-12 12:45 GMT

ಬೆಂಗಳೂರು, ಎ.12: ಸಂಸತ್‌ನ ಪ್ರತಿಪಕ್ಷ ಸದಸ್ಯರ ಗದ್ದಲದಿಂದ 23 ದಿನಗಳ ಸಂಸತ್ ಕಲಾಪ ವ್ಯರ್ಥವಾಗಿದ್ದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಗ್ರಹವನ್ನು ಬೆಂಬಲಿಸಿ ಬೆಂಗಳೂರಿನ ಸಂಸದರು ಮೌರ್ಯವೃತ್ತದ ಗಾಂಧಿಪ್ರತಿಮೆ ಬಳಿ ಉಪವಾಸ ಸತ್ಯಗ್ರಹ ನಡೆಸಿದರು.

ಗುರುವಾರ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಪ್ರಕಾಶ್ ಜಾವಡೇಕರ್, ಸಂಸದ ಪಿ.ಸಿ.ಮೋಹನ್, ರಾಜ್ಯ ಬಿಜೆಪಿ ಮುಖಂಡ ಆರ್.ಅಶೋಕ್, ವಿಧಾನಪರಿಷತ್ ಸದಸ್ಯೆ ತಾರಾ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ, ಸಂಸತ್‌ನಲ್ಲಿ ಬಿಜೆಪಿ ಚರ್ಚೆಗೆ ಸಿದ್ಧರಾಗಿದ್ದರೂ ಪ್ರತಿ ಪಕ್ಷಗಳೇ ಸದನ ನಡೆಸಲು ಬಿಡಲಿಲ್ಲವೆಂದು ಆರೋಪಿಸಿದರು.

ಈ ವೇಳೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ಸದನದಲ್ಲಿ ಯಾವುದೆ ವಿಷಯದ ಕುರಿತು ಚರ್ಚೆ ನಡೆಸಲು ಬಿಜೆಪಿ ಸಿದ್ಧವಾಗಿತ್ತು. ಆದರೆ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಸಂಸತ್ ಕಲಾಪ ರದ್ದುಪಡಿಸುವಂತೆ ಕೋರಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ದೇಶದ ಇತಿಹಾಸದಲ್ಲಿಯೇ ಲಜ್ಜೆಗೆಟ್ಟ ಕೆಲಸ ಮಾಡಿದೆ ಎಂದು ದೂರಿದರು.

ಸದನವು ಪ್ರಜಾತಂತ್ರದ ದೇಗುಲವಿದ್ದಂತೆ. ದೇಶದ ಅಭಿವೃದ್ಧಿಗೆ ಸದನದಲ್ಲಿ ನಡೆಯುವ ಚರ್ಚೆಗಳು ಮುಖ್ಯವಾದ ಪಾತ್ರ ವಹಿಸುತ್ತವೆ. ಹೀಗಾಗಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳಿಗೆ ಸದನ ನಡೆಸಲು ಅನುವು ಮಾಡಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಮನವಿ ಮಾಡಿದರು. ಆದರೆ, ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ಸದನದಲ್ಲಿ ಪ್ರಶ್ನೆ ಮಾಡಲು ತಯಾರಿಲ್ಲದೆ ಸದನ ನಡೆಯದಂತೆ ತಡೆದರು ಎಂದು ಅವರು ಆರೋಪಿಸಿದರು.

ಕಳೆದ 23ದಿನಗಳಿಂದ ಪ್ರತಿಪಕ್ಷಗಳ ಹಠಮಾರಿ ಧೋರಣೆಯಿಂದಾಗಿ ಸದನ ನಡೆದಿಲ್ಲ. ಇದರಿಂದ ದೇಶಕ್ಕೆ ಬೊಕ್ಕಸಕ್ಕೆ ನೂರಾರು ಕೋಟಿ ರೂ.ನಷ್ಟವಾಗಿದೆ. ಈ ಬಗ್ಗೆ ಪ್ರತಿಪಕ್ಷಗಳಿಗೆ ಕಿಂಚಿತ್ತೂ ಚಿಂತೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಆದರೆ, ಆಡಳಿತ ಪಕ್ಷದ ಸದಸ್ಯರು ಸದನ ನಡೆಯದ ದಿನಗಳ ಸಂಬಳ ಹಾಗೂ ಭತ್ತೆಯನ್ನು ಪಡೆಯದಿರಲು ನಿರ್ಧರಿಸಿದ್ದೇವೆ. ಅಷ್ಟರ ಮಟ್ಟಿಗೆ ನಾವು ಸದನವನ್ನು ಗೌರವಿಸುತ್ತೇವೆಂದು ಅವರು ತಿಳಿಸಿದರು.

ಕೇಂದ್ರದ ರಾಸಾಯನಿಕ ಖಾತೆ ಸಚಿವ ಅನಂತ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ದೇಶದಲ್ಲಿ ಬಾಧಿಸುತ್ತಿರುವ ಎಲ್ಲ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಿದ್ಧವಿದ್ದರೂ ಕಾಂಗ್ರೆಸ್‌ಗೆ ಸದನ ನಡೆಯದಂತೆ ತಡೆದಿದೆ. ಬಿಜೆಪಿ ಬಹುಮತದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದನ್ನು ನೋಡಿ ಹೊಟ್ಟೆ ಕಿಚ್ಚು ಬಂದಿದೆ. ಹೀಗಾಗಿ ಸದನವನ್ನು ಸುಸೂತ್ರವಾಗಿ ನಡೆಸಲು ಬಿಡುತ್ತಿಲ್ಲವೆಂದು ಆರೋಪಿಸಿದರು.

ದೇಶದ ಹಿತಕ್ಕಾಗಿ ನರೇಂದ್ರ ಮೋದಿ ಊಟ, ತಿಂಡಿ ತಿನ್ನದೆ ಉಪವಾಸ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಪಡೆದರು. ರಾಹುಲ್‌ಗಾಂಧಿ ಚೋಲೆ ಭಟೂರ(ಕಡಲೆಕಾಳು ಪೂರಿ) ತಿಂದು ಉಪವಾಸ ಮಾಡಿದ್ದರು ಎಂದು ಅವರು ವ್ಯಂಗ್ಯವಾಡಿದರು.

ಈಗಿನ ಸಂದರ್ಭದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಉಳಿದಿಲ್ಲ. ಕಮ್ಯೂನಿಸ್ಟ್, ಮುಸ್ಲಿಮ್ ಲೀಗ್ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಬಾಲಂಗೋಚಿ ಪಕ್ಷವಾಗಿ ಮಾತ್ರ ಉಳಿದಿದೆ. ತನ್ನ ಪ್ರಮಾದದಿಂದಾಗಿಯೆ ಕಾಂಗ್ರೆಸ್ ಜನತೆಯ ವಿರೋಧ ಕಟ್ಟಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಾದರು ಆಡಳಿತ ಪಕ್ಷಕ್ಕೆ ಸುಗಮವಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟು ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಹಕರಿಸಬೇಕೆಂದು ಅವರು ತಿಳಿಸಿದರು.

ಈ ವೇಳೆ ಬಿಜೆಪಿ ನಾಯಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅರುಣ್ ಶಾಪುರ್ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನವನ್ನು ನೀಡಿದ್ದಾರೆ. 2017-18ನೆ ಸಾಲಿನಲ್ಲಿ 25ಸಾವಿರ ಕೋಟಿ ರೂ.ಅನುದಾನ ನೀಡಿದ್ದಾರೆ. 2014ರಿಂದ ಇಲ್ಲಿಯವರೆಗೆ ಆಂಧ್ರಪ್ರದೇಶಕ್ಕೆ ಕೇಂದ್ರ ಸರಕಾರ 10ಲಕ್ಷದ 26ಸಾವಿರ ಕೋಟಿ ರೂ.ನೀಡಿದೆ. ಇಷ್ಟಾದರೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿಯನ್ನು ವಿರೋಧಿಸುವುದು ಸರಿಯಲ್ಲ.
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಕಾಂಗ್ರೆಸ್‌ಗೆ ಭ್ರಷ್ಟಾಚಾರವನ್ನು ಪೋತ್ಸಾಹಿಸುವುದು ವಂಶಪಾರಂಪರ್ಯವಾಗಿ ಬಂದಿದೆ. ಹೀಗಾಗಿಯೆ ಸಂಸತ್‌ನಲ್ಲಿ 402 ಸ್ಥಾನಗಳನ್ನು ಹೊಂದಿದ್ದ ಪಕ್ಷ 40ಕ್ಕೆ ಇಳಿದಿದೆ. ಕಾಂಗ್ರೆಸ್‌ನ ವರ್ತನೆ ಹೀಗೆ ಮುಂದುವೆದರೆ ನಾಲ್ಕು ಸ್ಥಾನಗಳಿಗೆ ಇಳಿಯಲಿದೆ.
-ಪ್ರಕಾಶ್ ಜಾವಡೇಕರ್, ಕೇಂದ್ರಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News