ಆರ್ಥಿಕತೆಯ ಬದಲಾವಣೆಯಿಂದ ಎದುರಾದ ಸವಾಲಿಗೆ ಉನ್ನತ ಶಿಕ್ಷಣವೇ ಉತ್ತರ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2018-04-12 13:58 GMT

ಬೆಂಗಳೂರು, ಎ.12: ಆರ್ಥಿಕತೆ ಬದಲಾವಣೆಯಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ನಿವಾರಿಸಲು ದೇಶದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು.

ಗುರುವಾರ ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಜ್ಞಾನಾಧಾರಿತ ಆರ್ಥಿಕತೆಯ ಬದಲಾವಣೆಯಿಂದ ಎದುರಾಗುವ ಸವಾಲನ್ನು ಎದುರಿಸುವ ಜೊತೆಗೆ ಜನಸಂಖ್ಯಾ ಲಾಭಾಂಶವನ್ನು ಸಮಾಜಕ್ಕೆ ನೀಡಲು ಸಾಧ್ಯ ಎಂದರು.

ವೈದ್ಯ ಪದವಿಯೊಂದಿಗೆ ವೃತ್ತಿ ಜೀವನವನ್ನು ಪ್ರವೇಶಿಸುತ್ತಿರುವ ಪದವೀಧರರು ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಲು ಸಿದ್ಧರಾಗಬೇಕು. ವೈದ್ಯ ವೃತ್ತಿ ಒಂದು ಉನ್ನತ ಮಿಷನ್. ಅದು ಕಮಿಷನ್ ಪಡೆಯುವ ವೃತ್ತಿಯಲ್ಲ ಎಂಬುದನ್ನು ಅರ್ಥಮಾಡಿಕೊಂಡು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.

2030ಕ್ಕೆ ಭಾರತವು ವಿಶ್ವದ ಯುವ ರಾಷ್ಟ್ರವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಶ್ರಮಪಟ್ಟು ಉತ್ಕೃಷ್ಟ ಗುರಿ ಸಾಧನೆಗಾಗಿ ಸೇವೆ ಸಲ್ಲಿಸಬೇಕು. ಸೇವೆ ಮತ್ತು ಪ್ರೀತಿ ಅತಿ ಅಗತ್ಯ. ಭಾರತೀಯ ಪರಂಪರೆಯಲ್ಲೇ ಅದು ಬಂದಿದೆ. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಗಿಡ ಮರಕ್ಕೂ ನಾವು ಪೂಜೆ ಸಲ್ಲಿಸುತ್ತೇವೆ, ಪ್ರೀತಿ ತೋರಿಸುತ್ತೇವೆ. ಸಮಾಜ ಸೇವೆಯ ಧ್ಯೇಯದೊಂದಿಗೆ ಪದವೀಧರರು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜಗತ್ತು ಅತಿ ವೇಗವಾಗಿ ಬೆಳೆಯುತ್ತಿದೆ. ಎಲ್ಲವೂ ಜ್ಞಾನಾಧಾರಿತವಾಗುತ್ತಿದೆ. ವಿಶ್ವವೇ ಒಂದು ಹಳ್ಳಿಯಾಗಿದೆ. ಎಲ್ಲಿ ಏನು ನಡೆಯುತ್ತಿದೆ, ಅಲ್ಲಿನ ಸವಾಲುಗಳೇನು ಮತ್ತು ಅದಕ್ಕೆ ಪರಿಹಾರ ಸೂಚಿಸುವುದು ಹೇಗೆ ಎಂಬುದನ್ನು ನಾವೇ ಕಂಡುಕೊಳ್ಳಬೇಕು ಎಂದು ಹೇಳಿದರು.

ಭಾರತ ಜಾಗತಿಕವಾಗಿ ಸಾಕಷ್ಟು ಮುಂದುವರೆಯುತ್ತಿದ್ದರೂ ದೇಶದ ಶೇ.25ರಷ್ಟು ಜನರು ಇನ್ನೂ ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾಂಕ್ರಾಮಿಕ ರೋಗ ಸೇರಿದಂತೆ ರೋಗಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಿ, ಜನರು ತಮ್ಮ ಮೂಲ ಜೀವನ ಪದ್ಧತಿಗೆ ತೆರಳುವಂತೆ ವೈದ್ಯರು ಹಾಗೂ ವೈದ್ಯಕೀಯ ಪದವೀಧರರು ಜನರಿಗೆ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.

ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 26,469 ಮಂದಿ ಪದವಿ ಪ್ರಮಾಣ ಪತ್ರ ಪಡೆದರು. ಇದರಲ್ಲಿ 68 ಪಿಎಚ್‌ಡಿ, 138 ಸೂಪರ್ ಸ್ಪೆಷಾಲಿಟಿ, 5,581 ಸ್ನಾತಕೋತ್ತರ ಪದವಿ, 182 ಫೆಲೋಷಿಪ್ ಕೋರ್ಸ್ ಹಾಗೂ 20,482 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ವಿ.ಆರ್.ವಾಲಾ, ಕುಲಪತಿ ಡಾ.ಎಂ.ಕೆ.ರಮೇಶ್, ಸಂಶೋಧನಾ ವಿಭಾಗದ ನಿರ್ದೇಶಕ ಡಾ. ವೆಂಕಟೇಶ್, ಕುಲಸಚಿವ ಡಾ. ಸಿ.ಎಂ.ನೂರ್ ಮನ್ಸೂರ್ ಉಪಸ್ಥಿತರಿದ್ದರು.

ವೈದ್ಯರು ಗ್ರಾಮೀಣ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ನಾನೂ ಗ್ರಾಮೀಣ ಭಾಗದಲ್ಲಿ ಸೇವೆ ಮಾಡುತ್ತೇನೆ. ಮೊದಲ ಸ್ಥಾನ ಪಡೆಯುತ್ತೇನೆ ಅಂದುಕೊಂಡಿರಲಿಲ್ಲ. ತಂದೆ, ತಾಯಿ ಹೆಚ್ಚು ಸಹಕಾರ ನೀಡಿದರು. ಕುಟುಂಬ ಸದಸ್ಯರು ಡಾಕ್ಟರ್ ಇರುವುದರಿಂದ ತುಂಬಾ ಸಹಕಾರಿಯಾಯಿತು. ಜನರಲ್ ಮೆಡಿಸನ್, ಪೆಥಾಲಜಿ, ಮನಃಶಾಸ್ತ್ರದ ಕುರಿತು ಪಿಜಿ ಮಾಡಬೇಕೆಂದಿದ್ದೇನೆ.
-ಡಾ.ಶ್ವೇತಾ ಶ್ರೀಧರ್, ಚಿನ್ನದ ಪದಕ ವಿಜೇತೆ

ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ, ಹಳ್ಳಿಯಲ್ಲೇ ಓದಿದ್ದರಿಂದ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಯಾವುದೇ ಹಿಂಜರಿಕೆ ಇಲ್ಲ. ಕಠಿಣ ಪರಿಶ್ರಮದಿಂದ ಸಾಧಿಸಲು ಸಾಧ್ಯ ಆದರೆ, ಇಷ್ಟಪಟ್ಟು ಓದಬೇಕು. ಚಿಕ್ಕವಳಿದ್ದಾಗಿನಿಂದ ಡಾಕ್ಟರ್ ಆಗಬೇಕೆಂಬ ಕನಸಿತ್ತು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದೆ.

-ಡಾ.ಮೇಘಾ.ಜಿ., ಎಂ.ಎಸ್ ಚಿನ್ನದ ಪದಕ ವಿಜೇತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News