ಬೆಂಗಳೂರು: ಗೂಂಡಾ ಕಾಯ್ದೆಯಡಿ ಗ್ರಾ.ಪಂಚಾಯತ್ ಸದಸ್ಯನ ಬಂಧನ

Update: 2018-04-13 13:44 GMT

ಬೆಂಗಳೂರು, ಎ.13: 25ಕ್ಕೂ ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಪ್ರಕರಣ ಸಂಬಂಧ ಗ್ರಾಮ ಪಂಚಾಯತ್ ಸದಸ್ಯನೊಬ್ಬನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ವಿದ್ಯಾರಣ್ಯಪುರದ ಕಾನ್ಷಿರಾಮ್‌ನಗರದ ವೆಂಕಟೇಶ್(42) ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ಧ ಗಂಗಮ್ಮಗುಡಿ, ಯಶವಂತಪುರ, ಜಾಲಹಳ್ಳಿ, ಸೋಲದೇವನಹಳ್ಳಿ, ವಿದ್ಯಾರಣ್ಯಪುರ, ಸಂಪಿಗೇಹಳ್ಳಿ ಪೊಲೀಸ್ ಠಾಣೆಗಳಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪ ಇದೆ. ಜೊತೆ ಈತ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಎಂದು ಪೊಲೀಸ್ ಪ್ರಕಟನೆಯಲ್ಲಿ ಹೇಳಲಾಗಿದೆ.

ಈತನ ವಿರುದ್ಧ ಕೊಲೆ, ಸುಲಿಗೆ, ದರೋಡೆಗೆ ಪ್ರಯತ್ನ, ಕಳ್ಳತನ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಮಾರು 25 ಪ್ರಕರಣಗಳು ದಾಖಲಾಗಿವೆ. ಅದಲ್ಲದೆ, ರೌಡಿ ವೆಂಕಟೇಶ್ 1993 ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದರೂ ಸಹ ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಯಶವಂತಪುರ ಉಪ ವಿಭಾಗದ ಡಿಪಿಪಿ ಪಿ.ರವಿಪ್ರಸಾದ್ ವರದಿಯನ್ನು ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News