ನಟ ಪ್ರಕಾಶ್ ರೈ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ

Update: 2018-04-13 14:25 GMT

ಬೆಂಗಳೂರು, ಎ.13: ನಟ ಪ್ರಕಾಶ್ ರೈ ರಾಜಕೀಯೇತರ ಸಭೆಯೊಂದರಲ್ಲಿ ಪ್ರಧಾನಮಂತ್ರಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಕಾರಣವಾಗಿಟ್ಟುಕೊಂಡು, ಬಿಜೆಪಿ ಕಾರ್ಯಕರ್ತರು ವಿಜಯಪುರ ಜಿಲ್ಲೆಯಲ್ಲಿ ಅವರ ಕಾರನ್ನು ಅಡ್ಡಗಟ್ಟಿ ದೈಹಿಕವಾಗಿ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿಗೆ ಜೆಡಿಎಸ್ ದೂರು ನೀಡಿದೆ.

ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದರೂ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ದಲಿತ ನಾಯಕರು ಹಾಗೂ ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ, ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ನೀಡಿದ ಹೇಳಿಕೆಯನ್ನು ಇದೇ ರೀತಿ ರಾಜಕೀಯಗೊಳಿಸಿ ಅವರ ವಿರುದ್ಧ ಪ್ರಚೋದನಾತ್ಮಕವಾಗಿ ಬಿಜೆಪಿಯ ಕೆಲ ಕಾರ್ಯಕರ್ತರು ಹೇಳಿಕೆಗಳನ್ನು ನೀಡಿ, ಅವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ದೂರಿದ್ದಾರೆ.

ಜನತಂತ್ರ ವ್ಯವಸ್ಥೆಯಲ್ಲಿ ಒಂದು ಆರೋಗ್ಯಕರವಾದ ಚೌಕಟ್ಟಿನ ಒಳಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರು ಸ್ವತಂತ್ರರು. ಕೇವಲ ತಮ್ಮ ಪಕ್ಷದ ಅಥವಾ ತಮ್ಮ ನಾಯಕರ ವಿರುದ್ಧ ರಾಜಕೀಯ ಟೀಕೆಗಳು ಬಂದ ತಕ್ಷಣ ಅಂತಹವರ ವಿರುದ್ಧ ದೈಹಿಕ ಹಲ್ಲೆಗೆ ಮುಂದಾಗುವುದು ಯಾವುದೇ ಕಾನೂನಿನಡಿಯಲ್ಲಿ ತಪ್ಪು ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ನೀತಿ ನಿಯಮಗಳಿಗೆ ವಿರುದ್ಧವಾಗಿ ಹಾಗೂ ನೀತಿ ಸಂಹಿತೆಗೆ ವಿರುದ್ಧವಾಗಿ ತಮ್ಮ ಪಕ್ಷದ ಪ್ರಚಾರಗಳಿಗೆ ದೇವಾಲಯಗಳನ್ನು ಪ್ರಾರ್ಥನಾ ಮಂದಿರಗಳನ್ನು ಹಾಗೂ ಮಸೀದಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಮೇಶ್‌ಬಾಬು ಆರೋಪಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಪಕ್ಷವು ಸ್ಥಳೀಯ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳ ದುರುಪಯೋಗದ ಸಂಬಂಧ ಪ್ರತಿ ದಿನ ಸುದ್ದಿಗಳು ಪ್ರಕಟಗೊಳ್ಳುತ್ತಿದ್ದು, ಚುನಾವಣಾ ಆಯೋಗವು ಇದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News