ಎಚ್-1ಬಿ ವೀಸಾ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಭಾರೀ ಕಡಿತ

Update: 2018-04-13 17:12 GMT

  ವಾಶಿಂಗ್ಟನ್, ಎ. 13: ಅಮೆರಿಕದ ಎಚ್-1ಬಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಈ ಬಾರಿ ಗಣನೀಯ ಕುಸಿತವಾಗಿದೆ ಎಂದು ಗುರುವಾರ ಘೋಷಿಸಲಾಗಿದೆ. ಎಚ್-1ಬಿ ವೀಸಾ ಕಾರ್ಯಕ್ರಮವು ಅಮೆರಿಕದ ಕಂಪೆನಿಗಳು ಹೊರ ದೇಶಗಳ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಎಚ್-1ಬಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ಅವಧಿಯಲ್ಲಿ 1,90,098 ಅರ್ಜಿಗಳು ಬಂದಿವೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಎಪ್ರಿಲ್ 2ರಂದು ಆರಂಭಗೊಂಡಿತ್ತು.

ಇದು 2007ರ ಬಳಿಕ ಸ್ವೀಕರಿಸಲಾದ ಅತ್ಯಂತ ಕಡಿಮೆ ಸಂಖ್ಯೆಯ ಅರ್ಜಿಗಳಾಗಿವೆ. 2007ರಲ್ಲಿ ಇಲಾಖೆಯ ವೆಬ್‌ಸೈಟ್‌ನಲ್ಲಿ 3,14,621 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಆ ನಂತರದ ವರ್ಷಗಳಲ್ಲಿ ಅರ್ಜಿಗಳ ಸಂಖ್ಯೆಯಲ್ಲಿ ಏರಿಳಿತಗಳಾಗಿದ್ದರೂ, ಮೊದಲ ಗಣನೀಯ ಇಳಿಕೆ 2017ರಲ್ಲಿ ದಾಖಲಾಗಿತ್ತು. ಅಂದು ವೀಸಾ ಆಕಾಂಕ್ಷಿಗಳ ಸಂಖ್ಯೆ 3,99,349ರಿಂದ 3,36,107ಕ್ಕೆ ಇಳಿದಿತ್ತು.

ಅಮೆರಿಕದ ಕಂಪೆನಿಗಳು ಅಮೆರಿಕದ ಪ್ರಜೆಗಳಿಗೆ ಆದ್ಯತೆ ನೀಡಬೇಕು ಎನ್ನುವ ಟ್ರಂಪ್ ಸರಕಾರದ ನೀತಿಗಳ ಹಿನ್ನೆಲೆಯಲ್ಲಿ ಎಚ್-1ಬಿ ವೀಸಾ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಇಳಿಕೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News