ಮೋದಿ ಭಾರತ ಬೇಡ, ಅಂಬೇಡ್ಕರ್ ಕನಸಿನ ಭಾರತ ನಮಗೆ ಬೇಕು: ಎ.ಕೆ.ಸುಬ್ಬಯ್ಯ

Update: 2018-04-14 12:45 GMT

ಬೆಂಗಳೂರು, ಎ, 14: ‘ಆರೆಸೆಸ್ಸ್ ಭಾಗವತರು ಪ್ರತಿಪಾದಿಸಿರುವ ನರೇಂದ್ರ ಮೋದಿ ಭಾರತ ನಮಗೆ ಬೇಕಿಲ್ಲ. ಬದಲಿಗೆ ಬುದ್ಧ, ಬಸವ, ಅಂಬೇಡ್ಕರ್ ಕನಸಿನ ಭಾರತ ನಮಗೆ ಬೇಕು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಗ್ಗೂಡಬೇಕು’ ಎಂದು ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಕರೆ ನೀಡಿದ್ದಾರೆ.

ಶನಿವಾರ ಇಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕರ್ನಾಟಕ ಸಮತಾ ಸೈನಿಕ ದಳ ಆಯೋಜಿಸಿದ್ದ ‘ಸಂವಿಧಾನ ರಕ್ಷಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನುಸ್ಮತಿ ಪ್ರೇರಿತ ಶ್ರೇಣಿಕೃತ ವ್ಯವಸ್ಥೆಯನ್ನು ಮರು ಸ್ಥಾಪಿಸುವ ಮೋದಿ ಭಾರತ ನಿರ್ಮಾಣ ಅಪಾಯಕಾರಿ ಎಂದು ಎಚ್ಚರಿಸಿದರು.

ಕೇಸರಿಕರಣ ಅಪಾಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇಸರಿಕರಣಗೊಳಿಸುವ ಮೂಲಕ ಅವರ ಸಿದ್ಧಾಂತ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಮತ್ತವರ ವಿಚಾರಗಳನ್ನು ಅವಹೇಳನದ ಮೂಲಕ ನಿರ್ನಾಮ ಮಾಡುವ ಆರೆಸೆಸ್ಸ್ ಪರಿವಾರದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಅವರನ್ನು ತಮ್ಮವರೆಂದು ಬಿಂಬಿಸುವ ಯತ್ನ ನಡೆಸಿದೆ. ಆ ಮೂಲಕ ಸಂಘಪರಿವಾರದ ತತ್ವ-ಸಿದ್ಧಾಂತಕ್ಕೆ ವಿರುದ್ಧವಿದ್ದ ಅಂಬೇಡ್ಕರ್ ಅವರನ್ನು ನುಂಗಿ ಜೀರ್ಣಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ‘ಅಂಬೇಡ್ಕರ್‌ಗೆ ನಮ್ಮಷ್ಟು ಗೌರವವನ್ನು ಬೇರೆ ಯಾರು ನೀಡಿಲ್ಲ’ ಎಂದು ಸ್ವಯಂ ಪ್ರಶಂಸೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ, ಅಂಬೇಡ್ಕರ್ ಪ್ರತಿಮೆಗಳ ದ್ವಂಸ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನವಹಿಸುವ ಮೂಲಕ ಅಂಬೇಡ್ಕರ್ ತತ್ವಗಳನ್ನೇ ಕೇಸರಿಕರಣಗೊಳಿಸಲು ಬೆಂಬಲಿಸುತ್ತಿದ್ದಾರೆ ಎಂದು ಸುಬ್ಬಯ್ಯ ವಾಗ್ದಾಳಿ ನಡೆಸಿದರು.

ಗೋಮೂತ್ರದಿಂದ ಅಂಬೇಡ್ಕರ್ ಪ್ರತಿಮೆ ತೊಳೆದು ಪೂಜಿಸುವ ಆರೆಸೆಸ್ಸ್, ಬಿಜೆಪಿಯವರ ಕಾರ್ಯಕ್ರಮಗಳಲ್ಲಿ ದಲಿತ, ಶೋಷಿತರು ಭಾಗವಹಿಸುತ್ತಿರುವುದು ದುರಂತ ಎಂದ ಅವರು ಹೇಳಿದರು.

ಅಸಮಾನತೆ ಪ್ರತಿಪಾದಿಸಿರುವ ಮನುಸ್ಮತಿಯ ಶ್ರೇಣಿಕೃತ ಸಮಾಜವನ್ನು ಪುನರ್ ಸ್ಥಾಪಿಸುವ ಸಂಘ ಪರಿವಾರದವರೆ ನಿಜವಾದ ದೇಶದ್ರೋಹಿಗಳು. ದೇಶದಲ್ಲಿ ಬೆಂಕಿ ಹಚ್ಚುವವರ ಕೈಗೆ ಯಾವುದೇ ಕಾರಣಕ್ಕೂ ಅಧಿಕಾರ ದಕ್ಕಬಾರದು. ಅಂಬೇಡ್ಕರ್ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಕೋಮುವಾದಿಗಳ ವಿರುದ್ಧ ಒಗ್ಗಟ್ಟಿನ ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದರು.

ಮೀಸಲಾತಿಗೆ ಹೋರಾಟ: ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೆಷಿ ಮಾತನಾಡಿ, ಅಂಬೇಡ್ಕರ್ ಅವರು ಅಲ್ಪಸಂಖ್ಯಾತರಿಗೆ ಚುನಾವಣೆಯಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಉದ್ದೇಶಿಸಿದ್ದರು. ಆದರೆ, ಕೆಲವರ ವಿರೋಧದಿಂದ ಇದು ಜಾರಿಯಾಗಲಿಲ್ಲ. ಮೀಸಲಾತಿ ಕಲ್ಪಿಸಿದ್ದರೆ 20ರಿಂದ 25 ಮಂದಿ ಮುಸ್ಲಿಮರು ವಿಧಾನಸಭೆಗೆ ಆಯ್ಕೆಯಾಗುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಬೌದ್ಧದಮ್ಮ ಗುರು ಕಲ್ಯಾಣಸಿರಿ ಭಂತೇಜಿ, ಕೆಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ, ಪದಾಧಿಕಾರಿಗಳಾದ ಕಮಲಮ್ಮ, ರಮೇಶ್, ಯಶೋಧಾ, ರಮಾದೇವಿ, ನಾರಾಯಣ್, ಜಯಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

‘ರಾಜ್ಯ ವಿಧಾನಸಭಾ ಚುನಾವಣೆ ಕೋಮುವಾದಿಗಳ ಮತ್ತು ಪ್ರಗತಿಪರರ ಮಧ್ಯೆ ನಡೆಯುತ್ತಿರುವ ಸ್ಪರ್ಧೆ. ಹೀಗಾಗಿ, ಪ್ರಗತಿಪರರೆಲ್ಲ ಸೇರಿ ಕೋಮುವಾದಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದು ರಾಜ್ಯಾದ್ಯಂತ ಜನಾಂದೋಲನ ರೂಪಿಸುತ್ತೇವೆ’

-ಎ.ಕೆ.ಸುಬ್ಬಯ್ಯ ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News