ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ನೀವೇನು ಹೇಳುತ್ತೀರಿ?

Update: 2018-04-14 14:22 GMT

ಕಸಿವಿಸಿಗೊಂಡ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು, ಎ. 14: ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಮೈಲನಹಳ್ಳಿ ಗ್ರಾಮದ ದಲಿತರ ನಿವಾಸಕ್ಕೆ ಉಪಾಹಾರಕ್ಕೆ ತೆರಳಿದ್ದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರಿಗೆ, ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ಸರಿಯೇ? ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದರಿಂದ ಬಿಎಸ್‌ವೈ ಕ್ಷಣಕಾಲ ಕಕ್ಕಾಬಿಕ್ಕಿಯಾದರು.

ಶನಿವಾರ ನೆಲಮಂಗಲದ ಮೈಲನಹಳ್ಳಿ ಮಂಜುಳಾ ಮತ್ತು ನರಸಿಂಹಮೂರ್ತಿ ದಂಪತಿ ನಿವಾಸಕ್ಕೆ ಯಡಿಯೂರಪ್ಪ, ಸಿ.ಪಿ.ಯೋಗೇಶ್ವರ್, ನಾಗರಾಜ್ ಸೇರಿದಂತೆ ಇನ್ನಿತರರು ತೆರಳಿ ಉಪಾಹಾರ ಸೇವಿಸಿದರು. ಆ ಬಳಿಕ ದಲಿತ ಸಮುದಾಯದವರ ಜತೆ ಬಹಿರಂಗ ಸಭೆ ನಡೆಸಿದರು.

ಈ ವೇಳೆ ಗ್ರಾಮಸ್ಥ ಅಂಜನಮೂರ್ತಿ, ‘ನಿಮ್ಮ ಪಕ್ಷದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದು ಎಷ್ಟು ಸರಿ? ಈ ಬಗ್ಗೆ ನಿಮ್ಮ ನಿಲುವೇನು? ಎಂದು ಪ್ರಶ್ನಿಸಿದರು. ಇದರಿಂದ ಬಿಎಸ್‌ವೈ ತೀವ್ರ ಮುಜುಗರಕ್ಕೆ ಸಿಲುಕಿದರು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಆತನನ್ನು ಹೊರಗೆ ಕರೆದೊಯ್ಯಲು ಮುಂದಾದರು.

ಕೂಡಲೇ ಯಡಿಯೂರಪ್ಪ ಪೊಲೀಸರನ್ನು ತಡೆದು, ಈಗಾಗಲೇ ಖುದ್ದು ಅನಂತ ಕುಮಾರ್ ಹೆಗ್ಡೆ ಸ್ಪಷ್ಟಣೆ ನೀಡಿದ್ದು, ಕ್ಷಮೆ ಕೋರಿದ್ದಾರೆ. ಅಲ್ಲದೆ, ಈ ಬಗ್ಗೆ ಸಾಕಷ್ಟು ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ. ಪ್ರಪಂಚದಲ್ಲಿ ಉತ್ತಮ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆಂದು ಸಮಾಧಾನಪಡಿಸಿದರು.

ಪೌರಕಾರ್ಮಿಕರೊಂದಿಗೆ ಸಹಭೋಜನ: ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಪೌರ ಕಾರ್ಮಿಕರಿಗೆ ಸಹಪಂಕ್ತಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಖುದ್ದು ಬಿಎಸ್‌ವೈ ಅವರೇ ನಿಂತು ಪೌರ ಕಾರ್ಮಿಕರಿಗೆ ಸಿಹಿ ಬಡಿಸಿ, ಪೌರ ಕಾರ್ಮಿಕ ಜತೆ ಕುಳಿತು ಊಟ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News