ಅಂಬೇಡ್ಕರ್ ಮಹಾನ್ ಮಾನವತಾವಾದಿ: ಸಚಿವ ಎಚ್.ಆಂಜನೇಯ

Update: 2018-04-14 14:31 GMT

ಬೆಂಗಳೂರು, ಎ.14: ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾವಾದಿ. ಈ ದೇಶಕ್ಕೆ ಯಾರು ಕೊಡದಂತಹ ಕೊಡುಗೆಯನ್ನು ಅವರು ನೀಡಿದ್ದಾರೆ. ಸಂವಿಧಾನವನ್ನು ರಚಿಸಿದ ಕೀರ್ತಿ ಅಂಬೇಡ್ಕರ್ ಅವರದ್ದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೆ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಪಂಚದ ಬೇರೆ ಯಾವುದೇ ದೇಶದಲ್ಲಿ ಇಲ್ಲದಂತಹ ವಿಶಿಷ್ಟ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ನಮ್ಮ ಸಂವಿಧಾನವನ್ನು ಬೇರೆ ದೇಶದವರು ಅನುಕರಿಸುತ್ತಾರೆ. ನಮ್ಮ ಪಕ್ಷವು ಅಂಬೇಡ್ಕರ್ ಅವರ ಆಶಯವನ್ನು ಪಾಲಿಸುತ್ತಿದೆ ಎಂದು ಆಂಜನೇಯ ತಿಳಿಸಿದರು.

ಶೋಷಿತರು, ದಮನಿತರ ಅಭಿವೃದ್ಧಿಗಾಗಿ ನಮ್ಮ ಸರಕಾರ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಮತಗಳಿಗಾಗಿ ಬೇರೆ ಪಕ್ಷದವರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ, ಅಂಬೇಡ್ಕರ್ ಅವರ ಆಶಯಗಳನ್ನು ಪಾಲಿಸಿದ್ದು ಕಾಗ್ರೆಸ್ ಪಕ್ಷವೆ ಹೊರತು, ಬಿಜೆಪಿಯಲ್ಲ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನ ದಲಿತ ಮುಖಂಡರಿದ್ದಾರೆ ಎಂದು ಅವರು ಹೇಳಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಜಗತ್ತು ಕಂಡಂತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಅವರ ಜನ್ಮದಿನಾಚರಣೆಯನ್ನು ನಮ್ಮ ಪಕ್ಷದಲ್ಲಿ ಆಚರಿಸುತ್ತಿರೋದು ನಮ್ಮ ಪುಣ್ಯ. ಅಂಬೇಡ್ಕರ್ ಆಶಯವನ್ನು ನಮ್ಮ ಪಕ್ಷ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದರು.
ಯಾವುದೇ ಜಾತಿ ಭೇದ ಇಲ್ಲದೆ ಎಲ್ಲ ಧರ್ಮದವರು ನಮ್ಮ ಪಕ್ಷದಲ್ಲಿದ್ದಾರೆ. ಆದರೆ, ಬಿಜೆಪಿ, ಭಜರಂಗದಳ, ಆರೆಸೆಸ್ಸ್‌ನವರು ನಮ್ಮದು ಆ ಜಾತಿ, ಈ ಜಾತಿ ಅಂತ ಭೇದ ಭಾವ ಮೂಡಿಸುತ್ತಾರೆ. ನಾವೆಲ್ಲರೂ ಒಂದೇ ಅನ್ನೋ ಮನೋಭಾವ ಅವರಲ್ಲಿಲ್ಲ. ಆದುದರಿಂದ, ಬಿಜೆಪಿಯವರಿಗೆ ನಾವು ಬುದ್ಧಿ ಹೇಳಬೇಕಿದೆ ಎಂದು ಜಾರ್ಜ್ ಹೇಳಿದರು. ನಮ್ಮ ಸರಕಾರದಲ್ಲಿ ಯಾವುದೇ ಒಂದು ಹಗರಣ ಇಲ್ಲ. ಅಂಬೇಡ್ಕರ್ ಜಯಂತಿ ದಿನ ನಾವೆಲ್ಲರೂ ಘೋಷಣೆ ಮಾಡಿ ಹೇಳುತ್ತೇವೆ. ಅಂಬೇಡ್ಕರ್ ಕನಸನ್ನು ನಾವು ನನಸು ಮಾಡುತ್ತೇವೆ ಎಂದು ಜಾರ್ಜ್ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಮಾತನಾಡಿ, ಅಂಬೇಡ್ಕರ್ ವಿಶ್ವಮಟ್ಟದಲ್ಲಿ ಯಾರೂ ಕೊಡೋಕೆ ಆಗದಿರುವ ಕೊಡುಗೆ ಕೊಟ್ಟವರು. ಶೋಷಿತ ವರ್ಗದ ಏಳಿಗೆಗಾಗಿ ದುಡಿದವರು. ಅಂಬೇಡ್ಕರ್ ನಮ್ಮ ಬಳಿ ಇಲ್ಲ, ಆದ್ರೆ ಅವರು ಬಿಟ್ಟು ಹೋದ ನೆನಪುಗಳು ಮಾತ್ರ ಹಾಗೇ ಇವೆ. ಈ ದಿನ ನಾವು ಶೋಷಿತ ವರ್ಗದ ಏಳಿಗೆಗಾಗಿ ದುಡಿಯುವ ಪ್ರತಿಜ್ಞೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮುಖಂಡರಾದ ರಾಜಶೇಖರಪ್ಪ, ಹನುಮಂತರಾಯಪ್ಪ, ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News